ಕೆಲಸದಲ್ಲಿ ಶ್ರದ್ಧೆಯಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಡಾ.ನಿರ್ಮಲಾನಂದ ಸ್ವಾಮೀಜಿ

| Published : Jan 04 2025, 12:30 AM IST

ಕೆಲಸದಲ್ಲಿ ಶ್ರದ್ಧೆಯಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಡಾ.ನಿರ್ಮಲಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನ ಜೀವನ ಅಜ್ಞಾನದಿಂದ ಕಲುಷಿತವಾಗಿ ಕತ್ತಲೆಯಿಂದ ಕೂಡಿದೆ. ಜ್ಞಾನದತ್ತ ಹೊರ ಬರಬೇಕಾದರೆ ಶ್ರದ್ದೆಯಿಂದ ಮನಸ್ಸು ನಿಗ್ರಹ ಮಾಡಿ ಸತ್ಸಂಗದ ಮೂಲಕ ಸಂಸ್ಕಾರ ನೀಡಿದರೆ ಸುಜ್ಞಾನಿಯಾಗಿ ಬದುಕಲು ಸತ್ಸಂಗ ಅಗತ್ಯವಿದೆ ಎಂದು ಆದಿಚುಂಚನಗಿರಿಯ ಡಾ.ನಿರ್ಮಲಾನಂದ ಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಮನುಷ್ಯನ ಜೀವನ ಅಜ್ಞಾನದಿಂದ ಕಲುಷಿತವಾಗಿ ಕತ್ತಲೆಯಿಂದ ಕೂಡಿದೆ. ಜ್ಞಾನದತ್ತ ಹೊರ ಬರಬೇಕಾದರೆ ಶ್ರದ್ದೆಯಿಂದ ಮನಸ್ಸು ನಿಗ್ರಹ ಮಾಡಿ ಸತ್ಸಂಗದ ಮೂಲಕ ಸಂಸ್ಕಾರ ನೀಡಿದರೆ ಸುಜ್ಞಾನಿಯಾಗಿ ಬದುಕಲು ಸತ್ಸಂಗ ಅಗತ್ಯವಿದೆ ಎಂದು ಆದಿಚುಂಚನಗಿರಿಯ ಡಾ.ನಿರ್ಮಲಾನಂದ ಸ್ವಾಮಿಗಳು ಹೇಳಿದರು.

ಸೋಮವಾರ ತಾಲೂಕಿನ ತೊಂಡಿಕಟ್ಟಿಯ ಗಾಳೇಶ್ವರಮಠದಲ್ಲಿ ಗಾಳೇಶ್ವರಸ್ವಾಮಿಗಳ 80ನೇ ಪುಣ್ಯಾರಾಧನೆ ಮತ್ತು ಪಂಡಲೀಕ ಮಹಾರಾಜರ ಶೀಲಾಮೂರ್ತಿ ಲೋಕಾರ್ಪಣೆ ನಂತರ ನಡೆದ ಧರ್ಮಸಭೆಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರು ಜವನದಲ್ಲಿ ಮುಕ್ತಿ ಹೊಂದಲು ಶ್ರದ್ಧೆಯಿಂದ ಯಾವುದೇ ಕೆಲಸ ಮಾಡಿದರೆ ಅದರಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ನಾವು ಏನನ್ನಾದರೂ ಕಲಿಯಬೇಕಾದರೆ ಫಲಗಳತ್ತ ಗಮನಹರಿಸದೇ ನಮ್ಮ ಕಾರ್ಯದಲ್ಲಿ ಮಗ್ನರಾಗಬೇಕಿದೆ ಎಂದು ಹೇಳಿದರು.

ಅಜ್ಞಾನದಿಂದ ಹಲವರ ಸಂಘ ಮಾಡಿ ಮನಷ್ಯ ಜೀವನದಲ್ಲಿ ಬೇರೆ ಬೇರೆ ಕೆಲಸ ಮಾಡುತ್ತ ಜ್ಞಾನದಿಂದ ದೂರವಿರುತ್ತಾನೆ. ಮಾನಸ ಸರೋವರದಷ್ಟೆ ಮನುಷ್ಯನ ಪಂಚೇಂದ್ರೀಯಗಳು ಸ್ವಚ್ಛವಾಗಿರಬೇಕು. ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಇದಕ್ಕೆಲ್ಲ ಮನುಷ್ಯ ಸತ್ಸಂಗಿಗಳ ಸಹವಾಸ ಮಾಡಿದರೆ ಮಾತ್ರ ಸಾಧ್ಯ ಎಂದು ತಿಳಿಸಿ ತೊಂಡಿಕಟ್ಟಿ ಅವದೂತಗಾಳೇಶ್ವರ ಕ್ಷೇತ್ರ ಜಾಗೃತ ಕ್ಷೇತ್ರವಾಗಲಿ ಎಂದು ಆಶಿಸಿದರು.

ಹುಬ್ಬಳ್ಳಿಯ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ಸತ್ಸಂಗ ಬೌದ್ಧಿಕ ಸಂಪತ್ತು. ಗಳಿಕೆಯ ಮೂಲವಲ್ಲ. ಆಂತರಿಕ ಸಂಪತ್ತು, ಸುಖ, ಶಾಂತಿ, ನೆಮ್ಮದಿ ಹೊಂದುವುದೇ ಸತ್ಸಂಗದ ಮೂಲ ಉದ್ದೇಶವಾಗಿದೆ. ಸತ್ಸಂಗದಿಂದ ಭಗವಂತನ ಕೃಪೆಗೆ ಪಾತ್ರವಾಗಬಹುದು ಎಂದು ತಿಳಿಸಿದರು.

ಸೂರ್ಯಚಂದ್ರರು ಹಗಲು ಮತ್ತು ಇರುಳಿನಲ್ಲಿ ಬೆಳಕು ನೀಡಿದರೆ ದೀಪ ಮನೆಯಲ್ಲಿ ಬೆಳಕು ನೀಡಿದಂತೆ ಮನಷ್ಯರು ಸತ್ಸಂಗದಲ್ಲಿ ಪಾಳ್ಗೊಂಡರೆ ಜೀವನದಲ್ಲಿ ಬೆಳಕು ಕಾಣಲು ಸಾಧ್ಯವಿದೆ ಪ್ರತಿಯೊಬ್ಬರು ಮಠ ಮಂದಿರಗಳಲ್ಲಿ ನಡೆಯುವ ಸತ್ಸಂಗಗಳಲ್ಲಿ ಪಾಳ್ಗೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗದ ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಸಜ್ಜನರ ಸಂಗವು ಹೆಜ್ಜೇನು ಸವಿದಂತೆ ಎನ್ನುವಂತೆ ಸಜ್ಜನರೊಂದಿಗೆ ಜೀವಿಸುವುದು. ಎಲ್ಲರೂ ಸತ್ಸಂಗಿಗಳಾಗಿ ಜೀವನವನ್ನು ನಿಸ್ಸಂಗಿಯಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕರಿಕಟ್ಟಿಯ ಗುರುನಾಥ ಶಾಸ್ತ್ರೀಜಿ ಕಾರ್ಯಕ್ರಮ ನಿರೂಪಿಸಿದರು. ತೊಂಡಿಕಟ್ಟಿಯ ಅವಧೂತ ವೆಂಕಟೇಶ್ವರ ಸ್ವಾಮೀಜಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಣೆ ಮಾಡಿದರು.

ವೇದಿಕೆಯಲ್ಲಿ ಹುಣಶ್ಯಾಳದ ನಿಜಗುಣದೇವರು, ಕೊಟಬಾಗಿಯ ಪ್ರಭುದೇವ ಸ್ವಾಮೀಜಿ, ಬುದ್ನಿಖುರ್ದ್ನ ರವೀಂದ್ರ ಸ್ವಾಮೀಜಿ, ದಾದನಟ್ಟಿಯ ನಿಜಾನಂದ ಸ್ವಾಮೀಜಿ, ಶಿವಪುತ್ರ ಅವಧೂತರು ಇದ್ದರು.