ಸಾರಾಂಶ
ಭಟ್ಕಳ: ಶಿರಾಲಿಯ ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜನತಾ ವಿದ್ಯಾಲಯದ ಸಹಯೋಗದಲ್ಲಿ ದಿನಕರ ದೇಸಾಯಿ ಸಂಸ್ಮರಣೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸಾಹಿತಿ ನಾರಾಯಣ ಯಾಜಿ ಉದ್ಘಾಟಿಸಿದರು.
ಆನಂತರ ಮಾತನಾಡಿದ ಅವರು, ದಿನಕರ ದೇಸಾಯಿ ಅವರು ತಮ್ಮ ಹೆಸರಿಗೆ ಅನುಗುಣವಾಗಿ ಸಾಹಿತ್ಯ ಕ್ಷೇತ್ರ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅಪೂರ್ವ ಕೊಡುಗೆಗಳನ್ನು ನೀಡಿ ಸೂರ್ಯನಂತೆ ಬೆಳಗಿದರು. ಜನತಾ ವಿದ್ಯಾಲಯ ಸ್ಥಾಪಿಸಿ ಅಕ್ಷರ ಕ್ರಾಂತಿ ಮಾಡಿದ್ದಾರೆ. ಅವರ ಆದರ್ಶಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ದಿನಕರ ದೇಸಾಯಿ ಅವರು ಕವಿಯಾಗಿ, ಲೇಖಕರಾಗಿ, ಪತ್ರಕರ್ತರಾಗಿ, ಸಂಸದರಾಗಿ, ಸಾಮಾಜಿಕ ಹೋರಾಟಗಾರರಾಗಿ ಮಾತ್ರವಲ್ಲ, ಶಿಕ್ಷಣ ತಜ್ಞರಾಗಿ ಹತ್ತು ಹಲವು ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಲಕ ಇಂದಿಗೂ ನೆನಪಿಸುವಂಥ ವ್ಯಕ್ತಿಯಾಗಿದ್ದಾರೆ. ಅವರ ಸಾಧನೆಯಿಂದ ಪ್ರೇರಿತರಾಗಿ ವಿದ್ಯಾರ್ಥಿಗಳು ತಮ್ಮ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ನಮ್ಮ ನಂತರವೂ ನೆನಪಿಸುವಂತಹ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು.
ಸಾಹಿತಿ ಮಾನಾಸುತ ಶಂಭು ಹೆಗಡೆ ಚುಟುಕು ವಾಚನದ ಮೂಲಕ ನುಡಿನಮನ ಸಲ್ಲಿಸಿದರು. ಪ್ರಾಂಶುಪಾಲ ಅಮೃತ ರಾಮರಥ ದಿನಕರ ದೇಸಾಯಿ ಅವರ ಬದುಕು-ಸಾಧನೆಯ ಕುರಿತು ಮಾತನಾಡಿದರು. ಶಿಕ್ಷಕರಾದ ಸುರೇಶ ನಾಯ್ಕ, ನಾಗರತ್ನಾ ನಾಯ್ಕ, ಎಸ್.ಎಂ. ಹೊಂಬಳ ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿಗಳು ದೇಸಾಯಿ ಅವರ ಚುಟುಕು ವಾಚನ ಮಾಡಿದರು. ಮುಖ್ಯಾಧ್ಯಾಪಕಿ ಆಶಾ ಭಟ್ ಸ್ವಾಗತಿಸಿದರು. ದಿನಕರ ದೇಸಾಯಿ ಸಂಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಚುಟುಕು ವಾಚನ, ಗೀತ ಗಾಯನ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ ನೀಡಲಾಯಿತು. ಶಿಕ್ಷಕಿ ಲೀಲಾವತಿ ಮೊಗೇರ ಹಾಗೂ ಶಿಕ್ಷಕ ಅರುಣ ಗೌಡ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕೃಷ್ಣ ಕಾಂಬಳೆ ವಂದಿಸಿದರು.