ರಾಜ್ಯದಲ್ಲಿ ಮತ್ತೆ ಜೋರಾದ ದಲಿತ ಸಿಎಂ ಕೂಗು

| N/A | Published : Oct 28 2025, 12:15 AM IST

Dr G Parameshwar

ಸಾರಾಂಶ

ರಾಜ್ಯದಲ್ಲಿ ನವೆಂಬರ್‌ ಕ್ರಾಂತಿ ಚರ್ಚೆ ಬೆನ್ನಲ್ಲೇ ದಲಿತ ಮುಖ್ಯಮಂತ್ರಿ ಕೂಗು ಮತ್ತೊಮ್ಮೆ ಜೋರಾಗಿದ್ದು, ದಲಿತ ಸಂಘಟನೆಗಳ ಜತೆಗೆ ಹಿರಿಯ ಸಚಿವರೂ ‘ದಲಿತ ಮುಖ್ಯಮಂತ್ರಿ ಆದರೆ ಸಂತೋಷ. ರಾಜ್ಯದಲ್ಲಿ ಹಲವರಿಗೆ ಆ ಅರ್ಹತೆಯೂ ಇದೆ’ ಎಂದು ಧ್ವನಿ ಎತ್ತಿದ್ದಾರೆ.

 ಬೆಂಗಳೂರು :  ರಾಜ್ಯದಲ್ಲಿ ನವೆಂಬರ್‌ ಕ್ರಾಂತಿ ಚರ್ಚೆ ಬೆನ್ನಲ್ಲೇ ದಲಿತ ಮುಖ್ಯಮಂತ್ರಿ ಕೂಗು ಮತ್ತೊಮ್ಮೆ ಜೋರಾಗಿದ್ದು, ದಲಿತ ಸಂಘಟನೆಗಳ ಜತೆಗೆ ಹಿರಿಯ ಸಚಿವರೂ ‘ದಲಿತ ಮುಖ್ಯಮಂತ್ರಿ ಆದರೆ ಸಂತೋಷ. ರಾಜ್ಯದಲ್ಲಿ ಹಲವರಿಗೆ ಆ ಅರ್ಹತೆಯೂ ಇದೆ’ ಎಂದು ಧ್ವನಿ ಎತ್ತಿದ್ದಾರೆ.

ಸಚಿವ ಕೆ.ಎಚ್.ಮುನಿಯಪ್ಪ ಬೆಂಬಲಿಗರು, ‘ದಲಿತ ಮುಖ್ಯಮಂತ್ರಿ ಕೆ.ಎಚ್.ಮುನಿಯಪ್ಪ’ ಎಂದು ಘೋಷಣೆ ಕೂಗಿದ ಬೆನ್ನಲ್ಲೇ ರಾಜ್ಯಾದ್ಯಂತ ದಲಿತ ಮುಖ್ಯಮಂತ್ರಿ ಕೂಗು ಎದ್ದಿದೆ.

ದಲಿತ ಸಂಘಟನೆಗಳು ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಧ್ವನಿ ಎತ್ತಿದ್ದು, ಸಚಿವರಾದ ಡಾ.ಜಿ.ಪರಮೇಶ್ವರ್‌, ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಕೆ.ಎನ್‌.ರಾಜಣ್ಣ ಸೇರಿ ಹಲವರು ಇದಕ್ಕೆ ಪೂರಕವಾಗಿ ಮಾತನಾಡಿದ್ದಾರೆ.

ದಲಿತರಿಗೆ ಸಿಎಂ ಸ್ಥಾನ ಸಿಕ್ರೆ ಸಂತೋಷ-ಪರಂ:

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಮುನಿಯಪ್ಪ ಅವರು ಮುಖ್ಯಮಂತ್ರಿ ಆಗಬೇಕು ಎಂಬುದರಲ್ಲಿ ತಪ್ಪೇನೂ ಇಲ್ಲ. ಅವರು ಸಮರ್ಥರಿದ್ದು ಅರ್ಹತೆಯೂ ಇದೆ. ಅವರು ಮುಖ್ಯಮಂತ್ರಿಯಾದರೆ ನಾನು ಸಂತೋಷ ಪಡುತ್ತೇನೆ. ನಮ್ಮ ವರ್ಗಕ್ಕೆ ಅವಕಾಶ ಸಿಕ್ಕಿದೆ ಎಂದು ಸಂತೋಷಪಡುತ್ತೇನೆ ಎಂದು ಹೇಳಿದ್ದಾರೆ.

ಮುನಿಯಪ್ಪ ಅವರು ಏಳು ಬಾರಿ ಸಂಸದರಾಗಿದ್ದವರು. ಈ ಸಾಧನೆ ಸಾಮಾನ್ಯದ್ದಲ್ಲ. ಪಕ್ಷದಲ್ಲಿ ಹಿರಿಯರು, ಕೇಂದ್ರದಲ್ಲಿ ಸಚಿವರಾಗಿದ್ದವರು. ಈಗ ರಾಜ್ಯದಲ್ಲಿ ಸಚಿವರಾಗಿದ್ದಾರೆ. ಅವರು ಮುಖ್ಯಮಂತ್ರಿಯಾದರೆ ಸಂತೋಷ. ಯಾವ ವರ್ಗ ತುಳಿತಕ್ಕೆ ಒಳಗಾಗಿತ್ತು, ಆ ವರ್ಗ ಆಡಳಿತ ವರ್ಗ ಆಗುತ್ತದೆ ಅಂದರೆ ಸಂತೋಷ‌ವಲ್ಲವೇ? ಆದರೆ ಇದನ್ನು ಹೈಕಮಾಂಡ್‌ ನಿರ್ಧರಿಸಬೇಕು ಎಂದು ಪರಮೇಶ್ವರ್‌ ಹೇಳಿದರು.

ದಲಿತ ಸಿಎಂ ಕೂಗು ತಪ್ಪೇನಿದೆ?-ರಾಜಣ್ಣ:

ಮಾಜಿ ಸಚಿವ ಕೆ.ಎನ್‌.ರಾಜಣ್ಣ ಮಾತನಾಡಿ, ದಲಿತ ಮುಖ್ಯಮಂತ್ರಿ ಕೂಗಿನಲ್ಲಿ ತಪ್ಪೇನಿದೆ? ದಲಿತ ಮುಖ್ಯಮಂತ್ರಿ ಆದರೆ ಸಂತೋಷ ಪಡಬೇಕು. ಅದರೆ ಯಾರು ಆಗಬೇಕು ಎಂಬುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಸದ್ಯಕ್ಕೆ ಅವಕಾಶವಿಲ್ಲ-ಜಾರಕಿಹೊಳಿ:

ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ದಲಿತ ಮುಖ್ಯಮಂತ್ರಿ ಆದರೆ ಒಳ್ಳೆಯದು. ಸಮುದಾಯದ ಎಲ್ಲರಿಗೂ ಖುಷಿಯಾಗುತ್ತದೆ. ಶೋಷಿತರಿಗೆ ಅಧಿಕಾರ ದೊರೆಯಬೇಕು. ಆದರೆ, ಅದಕ್ಕೆ ಅವಕಾಶ ಬರುವವರೆಗೂ ಕಾಯಬೇಕು. ಈಗಂತೂ ಅವಕಾಶ ಇಲ್ಲ. ಸಮಯಕ್ಕಾಗಿ ಕಾಯಬೇಕು. ಅವಕಾಶ ಸೃಷ್ಟಿ ಆಗಬೇಕು, ಅಲ್ಲಿ ತನಕ ಕಾಯಬೇಕು ಎಂದು ಹೇಳಿದರು.ದಲಿತ ಸಮಾವೇಶಕ್ಕೆ ಸಚಿವರ ಸಿದ್ಧತೆ?:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಚರ್ಚೆ ಹಾಗೂ ದಲಿತ ಮುಖ್ಯಮಂತ್ರಿ ಕೂಗು ಜೋರಾಗುತ್ತಿರುವ ಬೆನ್ನಲ್ಲೇ ದಲಿತ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗುತ್ತಿರುವ ಮಾತು ಕೇಳಿ ಬಂದಿದೆ.ಸಚಿವರಾದ ಡಾ.ಜಿ.ಪರಮೇಶ್ವರ್‌, ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಅವರು ಈ ಕುರಿತು ಸದ್ಯದಲ್ಲೇ ಸಭೆ ನಡೆಸಿ ರೂಪುರೇಷೆ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಂದ ಸಿದ್ದರಾಮಯ್ಯ ಅವರ ಸೈದ್ಧಾಂತಿಕ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂಬ ಹೇಳಿಕೆ ಹೊರ ಬಿದ್ದಿದೆ. ಬೆನ್ನಲ್ಲೇ ದಲಿತ ಮುಖ್ಯಮಂತ್ರಿ ಕೂಗು ಜೋರಾಗಿದ್ದು ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಹೆಸರಿನಲ್ಲಿ ಚರ್ಚೆಗಳು ಶುರುವಾಗಿವೆ. ಹೀಗಾಗಿ ನವೆಂಬರ್‌ ಕ್ರಾಂತಿಯ ಚರ್ಚೆ ನಡುವೆ ದಲಿತರ ಶಕ್ತಿ ಪ್ರದರ್ಶನಕ್ಕೆ ಮೂವರು ಸಚಿವರೂ ಸಜ್ಜಾಗಿದ್ದಾರೆ.

ಸದ್ಯದಲ್ಲೇ ದಲಿತರ ಸಮಾವೇಶ ನಡೆಸಿ ಒಗ್ಗಟ್ಟಿನ ಪ್ರದರ್ಶನ ಮಾಡಲಿದ್ದಾರೆ. ಚಿತ್ರದುರ್ಗ ಅಥವಾ ದಾವಣಗೆರೆಯಲ್ಲಿ ಸಮಾವೇಶ ನಡೆಸಿ ಕಾಂಗ್ರೆಸ್ ನೀಡಿರುವ ಕೊಡುಗೆಗಳ ಬಗ್ಗೆ ತಿಳಿಸುವ ಜತೆಗೆ ಪಕ್ಷದ ಜತೆಗೆ ಇರುವ ದಲಿತ ಶಕ್ತಿ ಕುರಿತು ಹೈಕಮಾಂಡ್‌ಗೆ ಸಂದೇಶ ರವಾನಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.ಈಗಾಗಲೇ ಪ್ರಾಥಮಿಕ ಚರ್ಚೆ ನಡೆದಿದ್ದು, ಸದ್ಯದಲ್ಲೇ ಅಂತಿಮ ರೂಪುರೇಷೆ ಕುರಿತು ಸಭೆ ನಡೆಯಲಿದೆ. ಮುಖ್ಯಮಂತ್ರಿ ಬದಲಾವಣೆ ಆದರೆ ದಲಿತರಿಗೆ ಅವಕಾಶ ನೀಡಬೇಕು ಎಂಬ ಕೂಗಿಗೆ ಬಲ ತುಂಬಲು ಈ ಸಿದ್ಧತೆ ನಡೆಸಲಾಗುತ್ತಿದೆ. ಈ ಮೂಲಕ ಹೈಕಮಾಂಡ್‌ಗೆ ನಾಯಕತ್ವ ಬದಲಾವಣೆ ವಿರುದ್ಧ ಸಂದೇಶ ರವಾನಿಸುವ ಪ್ರಯತ್ನ ನಡೆಯಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

Read more Articles on