ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಕುಡಿಯುವ ನೀರನ್ನು ಕೊಡಿ ಎಂದು ಆಗ್ರಹಿಸಿ ತಾಲೂಕಿನ ದಿಂಡಾವರ ಗ್ರಾಮದ ಜನರು ಸೋಮವಾರ ದಿಂಡಾವರ ಗ್ರಾಮ ಪಂಚಾಯಿತಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಪಂಚಾಯಿತಿ ಆವರಣದಲ್ಲಿಯೇ ಕುಡಿಯುವ ನೀರು ಕೊಡುವವರೆಗೂ ಇಲ್ಲಿಯೇ ಅಡುಗೆ ಮಾಡಿಕೊಂಡು ಕೂರುತ್ತೇವೆ ಎಂದು ಪ್ರತಿಭಟಿಸಿದ್ದಾರೆ.ಗ್ರಾಮಸ್ಥರು ಮಾತನಾಡಿ, ಕಳೆದ 50 ವರ್ಷಗಳಿಂದಲೂ ತಾಲೂಕಿನ ಕಲ್ವಳ್ಳಿ ಭಾಗದಲ್ಲಿ ಸದಾ ಬರಗಾಲದ ಛಾಯೆ ಆವರಿಸುತ್ತಲೇ ಇದೆ. ಈ ಭಾಗದ ಜನರು ಪ್ರತಿವರ್ಷವೂ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಲೇ ಇದ್ದಾರೆ. ಯಾವ ಪಕ್ಷದ ಸರ್ಕಾರ ಬಂದರೂ ನಮಗೆ ಶಾಶ್ವತ ಕುಡಿಯುವ ನೀರು ಒದಗಿಸಲಾಗಿಲ್ಲ. ದಿಂಡಾವರ ಗ್ರಾಮದಿಂದ ಕೇವಲ 12 ಕಿಮೀ ದೂರದಲ್ಲಿ ವಿವಿ ಸಾಗರದ ನಾಲೆ ಹಾದು ಹೋಗಿದ್ದರು ಸಹ ನಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿಲ್ಲ. ಸುಮಾರು 500 ಮನೆಗಳಿರುವ ಗ್ರಾಮದಲ್ಲಿ 1500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈಗಾಗಲೇ ನಮಗೆ ನೀರು ಕೊಡಿ ಎಂದು ಹಲವು ಬಾರಿ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಆದುದರಿಂದ ನಾವು ಬೇಸತ್ತು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ್ದೇವೆ. ಊರಲ್ಲಿರುವ ಬೋರ್‌ನಲ್ಲಿ ಒಂದು ಇಂಚು ಸಹ ನೀರು ಬರುತ್ತಿಲ್ಲ. ಹಾಗೇ ಬಂದ ನೀರು ಓವರ್ ಹೆಡ್‌ಟ್ಯಾಂಕ್‌ಗೆ ಹತ್ತುವುದಿಲ್ಲ. ಗ್ರಾಮದ ಮಹಿಳೆಯರು, ಮುದುಕರು ಸಹ ನೀರು ತರಲು ರಾತ್ರಿ ಹೊತ್ತು ಜಮೀನುಗಳಲ್ಲಿನ ಬೋರ್‌ಗಳಿಗೆ ಹೋಗುವಂತಹ ಹೀನಾಯ ಪರಿಸ್ಥಿತಿ ಇದೆ. ಶಾಲೆಗಳಲ್ಲಿ ಮಕ್ಕಳು ಊಟ ಮಾಡಿ ಕೈ ತೊಳೆಯಲು ಸಹ ನೀರಿಲ್ಲದೆ ಪೇಪರ್‌ನಲ್ಲಿ ಕೈ ಒರೆಸಿಕೊಳ್ಳುತ್ತದ್ದಾರೆ. ಇದು ಹೀಗೆಯೇ ಮುಂದುವರೆದು ನಮಗೆ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ ಮಾಡದಿದ್ದಲ್ಲಿ ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಾಲಾ ಮಕ್ಕಳು ಗ್ರಾಮದ ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.ದಿಂಡಾವರ ಗ್ರಾಮಕ್ಕೆ ಕುಡಿಯುವ ನೀರಿನ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದೆವು. ಸದ್ಯದ ಮಟ್ಟಿಗೆ ಗ್ರಾಮದ ಜನರಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ನಿರ್ಧರಿಸಲಾಗಿದೆ. ಈಗಾಗಲೇ ಅಲ್ಲಿ 4 ಬೋರ್‌ವೆಲ್ ಕೊರೆಸಲಾಗಿದ್ದು, ಎರಡರಲ್ಲಿ ಮಾತ್ರ ಸ್ವಲ್ಪ ನೀರು ಬರುತ್ತಿದೆ. ಊರಿನ ಅಕ್ಕಪಕ್ಕದ ರೈತರ ಜಮೀನುಗಳಿಂದ ಈಗಾಗಲೇ ಬೇರೆ ಬೇರೆ ಹಳ್ಳಿಗಳಿಗೆ ನೀರು ಸಾಗಿಸಲಾಗುತ್ತಿದೆ. ಆದ್ದರಿಂದ ದಿಂಡಾವರ ಗ್ರಾಮದ ಜನರಿಗೆ ಬೇರೆ ಕಡೆಯಿಂದ ದಿನವೂ ಟ್ಯಾಂಕರ್‌ನಲ್ಲಿ ನೀರು ಸಾಗಿಸಿ ಓವರ್ ಹೆಡ್ ಟ್ಯಾಂಕ್ ತುಂಬಿಸಿ ಎಲ್ಲರಿಗೂ ನೀಡಲಾಗುವುದು. ಮನೆ ಮನೆಗೂ ಶುದ್ಧ ಕುಡಿಯುವ ನೀರಿನ ಯೋಜನೆ ಕಾರ್ಯ ರೂಪದಲ್ಲಿದ್ದು, ಸ್ವಲ್ಪ ದಿನದಲ್ಲಿ ಅಲ್ಲಿನ ಜನರ ನೀರಿನ ಬವಣೆ ತೀರಿಸಲಾಗುವುದು ಎಂದು ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್ ಹೇಳಿದರು.
ನಾವೇನು ಬೇರೆ ದೇಶದ ಪ್ರಜೆಗಳಾ? ಸಣ್ಣ ಮಕ್ಕಳು, ವೃದ್ಧರು ಸಹ ಕುಡಿಯುವ ನೀರಿಗೆ ಪರಿತಪಿಸುವ ಸ್ಥಿತಿ ತಲುಪಿದ್ದೇವೆ ಎಂದರೆ ನಾವು ಯಾವ ಪರಿಸ್ಥಿತಿಯಲ್ಲಿದ್ದೇವೆ. ಇಲ್ಲಿಂದ 5 ಕಿಮೀ ದೂರದಲ್ಲಿ ಗಾಯಿತ್ರಿ ಜಲಾಶಯವಿದೆ. ಪರಶುರಾಮಪುರದವರೆಗೂ ಇಲ್ಲಿಂದ ನೀರು ಹೋಗಿವೆ. ಆದರೆ ಇಲ್ಲಿನ ಜನರಿಗೇ ಕುಡಿಯುವ ನೀರಿಲ್ಲ. ನಾವೇನು ಪಾಕಿಸ್ತಾನದವರಾ? ಕುಡಿಯುವ ನೀರು ಕೇಳುವ ಹಕ್ಕು ನಮಗಿಲ್ಲವಾ? ನಮ್ಮ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಕುಡಿಯುವ ನೀರು ಕೊಡಲಾಗದ ಮೇಲೆ ಅಧಿಕಾರ ಯಾಕೆ ಬೇಕು. ನಮಗೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲು ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥ ಚಂದ್ರಗಿರಿ ಹೇಳಿದರು.