ತಾತ್ಕಾಲಿಕ ಬಸ್‌ ನಿಲ್ದಾಣ ತೆರವಿಗೆ ದಿನೇಶ ಶೆಟ್ಟಿ ತಾಕೀತು

| Published : Jan 25 2025, 01:01 AM IST

ಸಾರಾಂಶ

ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ತೆರವುಗೊಳಿಸುವಂತೆ ಜಿಲ್ಲಾ ಕ್ರೀಡಾಪಟುಗಳ ಸಂಘ ಅಧ್ಯಕ್ಷ, ಬಾಲಕರ ಪ್ರೌಢಶಾಲಾ ಸಮಿತಿ ಉಪಾಧ್ಯಕ್ಷ ದಿನೇಶ ಕೆ. ಶೆಟ್ಟಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ನೀವು ಮಾಡದಿದ್ದರೆ ಬಂದು ಪರಿಕರ ಒಯ್ಯಲು ಜನರಿಗೆ ಕರೆ ನೀಡಬೇಕಾಗುತ್ತದೆ, ಎಚ್ಚರಿಕೆ!

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ತೆರವುಗೊಳಿಸುವಂತೆ ಜಿಲ್ಲಾ ಕ್ರೀಡಾಪಟುಗಳ ಸಂಘ ಅಧ್ಯಕ್ಷ, ಬಾಲಕರ ಪ್ರೌಢಶಾಲಾ ಸಮಿತಿ ಉಪಾಧ್ಯಕ್ಷ ದಿನೇಶ ಕೆ. ಶೆಟ್ಟಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

ನಗರದ ಹೈಸ್ಕೂಲ್ ಮೈದಾನದ ತಾತ್ಕಾಲಿಕ ಬಸ್‌ ನಿಲ್ದಾಣದ ಸ್ಥಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಈಗ ಮೂಲ ಸ್ಥಾನದಲ್ಲೇ ವಿಶಾಲವಾಗಿ ತಲೆಎತ್ತಿದ್ದು, ಅಲ್ಲಿಗೆ ಸ್ಥಳಾಂತರವಾಗಿದೆ. ಖಾಸಗಿ ಬಸ್‌ ನಿಲ್ದಾಣವೂ ಸ್ಥಳಾಂತರವಾಗಿದೆ. ಹಾಗಿದ್ದರೂ ಇನ್ನೂ ತಾತ್ಕಾಲಿಕ ನಿಲ್ದಾಣಗಳನ್ನು ತೆರವುಗೊಳಿಸದಿರುವುದು ಸರಿಯಲ್ಲ ಎಂದರು.

ಎರಡೂ ತಾತ್ಕಾಲಿಕ ನಿಲ್ದಾಣ ತೆರವುಗೊಳಿಸಿ, ಕ್ರೀಡಾಪಟುಗಳಿಗೆ, ಕ್ರೀಡಾ ಚಟುವಟಿಕೆಗೆ ಅನುವು ಮಾಡಿಕೊಡುವಂತೆ 6 ತಿಂಗಳ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಆದೇಶಿಸಿದ್ದರು. ಆದರೆ, ಇದುವರೆಗೂ ತೆರವು ಕಾರ್ಯ ಕೈಗೊಂಡಿಲ್ಲ ಎಂದು ದೂರಿದರು.

ಖಾಸಗಿ ಬಸ್‌ ನಿಲ್ದಾಣ ಆಧುನೀಕರಣ ಮಾಡಲೆಂದು ಸಮೀಪವೇ ಇದೆಯೆಂಬ ಕಾರಣಕ್ಕೆ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ಒಪ್ಪಿಗೆ ಕೊಟ್ಟಿದ್ದೆವು. ಅನಂತರ ಕೆಎಸ್ಸಾರ್ಟಿಸಿ ನಿಲ್ದಾಣವನ್ನೂ ಹೊಸದಾಗಿ ನಿರ್ಮಿಸಬೇಕೆಂದಾಗ ಆವರಗೆರೆ ಬಳಿ 5 ಎಕರೆಯಲ್ಲಿ ತಾತ್ಕಾಲಿಕ ಬಸ್‌ ನಿಲ್ದಾಣ ನಿರ್ಮಿಸಲು ಶಾಸಕ ಶಾಮನೂರು ಶಿವಶಂಕರಪ್ಪ ಸೂಚಿಸಿದ್ದರು. ಆಗ ಪ್ರತಿಭಟನೆ ಮಾಡಿದ್ದರಿಂದ ನನ್ನನ್ನು ಬಂಧಿಸಲಾಗಿತ್ತು ಎಂದರು.

ನನ್ನ ಬಂಧನ ವಿರುದ್ಧ ನ್ಯಾಯಾಲಯಕ್ಕೆ ಹೋದಾಗ ಕೆಎಸ್ಸಾರ್ಟಿಸಿ ಡಿಸಿ 6 ತಿಂಗಳಲ್ಲೇ ಬದಲಾವಣೆ ಮಾಡುವುದಾಗಿ ಲಿಖಿತವಾಗಿ ಬರೆದುಕೊಟ್ಟಿದ್ದರು. 4 ವರ್ಷವಾದರೂ ಇಂದಿಗೂ ತಾತ್ಕಾಲಿಕ ಬಸ್‌ ನಿಲ್ದಾಣ ತೆರವು ಮಾಡಿಲ್ಲ. ಮುಂದಿನ ಸೋಮವಾರದ ಒಳಗಾಗಿ ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳ ತಾತ್ಕಾಲಿಕ ನಿಲ್ದಾಣ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾವೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಾಯುವಿಹಾರಿಗಳು, ಕ್ರೀಡಾಪಟುಗಳು, ಸಾರ್ವಜನಿಕರಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದೆ. ತಾತ್ಕಾಲಿಕ ನಿಲ್ದಾಣಗಳನ್ನು ತೆರವು ಮಾಡದಿದ್ದರೆ, ಪ್ರೌಢಶಾಲಾ ಸಮಿತಿ ಮೂಲಕ ಎಲ್ಲ ಪರಿಕರಗಳನ್ನು ಹರಾಜು ಮಾಡಲಾಗುವುದು ಅಥವಾ ಸಾರ್ವಜನಿಕರಿಗೆ ಮುಕ್ತವಾಗಿ ಬಂದು, ಅವುಗಳನ್ನು ತೆಗೆದುಕೊಂಡು ಹೋಗುವಂತೆ ತಿಳಿಸಲಾಗುವುದು. ಆಗ ಆಗುವ ಏನೇ ನಷ್ಟ, ಅನಾಹುತಕ್ಕೆ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಯೇ ನೇರ ಹೊಣೆ ಎಂದರು.

ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್‌ನ ಮುಜಾಹಿದ್‌, ಕ್ರಿಕೆಟ್ ಕ್ಲಬ್‌ಗಳ ಜಯಪ್ರಕಾಶ, ಅಶ್ರಫ್‌, ಫರೀದ್ ಖಾನ್, ಚಂದ್ರಶೇಖರ, ಅಲ್ಲಾಭಕ್ಷಿ, ಮೋಹನ್, ಪರಶುರಾಮ, ಕೇರಂ ಅಸೋಸಿಯೇಷನ್‌ನ ಕೇರಂ ವಿ.ಗಣೇಶ, ಚೆಸ್ ಅಸೋಸಿಯೇಷನ್‌ನ ಟಿ.ಯುವರಾಜ ಇತರರು ಇದ್ದರು.

- - - -

ದಿನೇಶ ಶೆಟ್ಟಿ ಸುದ್ದಿಗೋಷ್ಠಿ, ದೌಡಾಯಿಸಿದ ಜೆಸಿಬಿ! ಹೈಸ್ಕೂಲ್ ಮೈದಾನದ ತಾತ್ಕಾಲಿಕ ಬಸ್‌ ನಿಲ್ದಾಣ ತೆರವಿಗೆ ದಿನೇಶ ಕೆ. ಶೆಟ್ಟಿ ಗಡುವು ನೀಡಿದ ಬೆನ್ನಲ್ಲೇ ಸಂಬಂಧಿಸಿದ ಅಧಿಕಾರಿಗಳು ಜೆಸಿಬಿ, ದೈತ್ಯ ಲಾರಿಗಳನ್ನು ತಾತ್ಕಾಲಿಕವಾಗಿ ನಿಲ್ದಾಣ ತೆರವು ಕಾರ್ಯಕ್ಕೆ ಕಳಿಸಿದ್ದು ವಿಶೇಷವಾಗಿತ್ತು. ಕೆಎಸ್ಸಾರ್ಟಿಸಿ ನಿಲ್ದಾಣ ಉದ್ಘಾಟನೆಯಾಗಿ ತಿಂಗಳುಗಳೇ ಕಳೆದರೂ ಇತ್ತ ಗಮನಹರಿಸದ ಕೆಎಸ್ಸಾರ್ಟಿಸಿ ಅಧಿಕಾರಿಗಳು ಒಂದು ಸುದ್ದಿಗೋಷ್ಠಿಯಾದ ಕೆಲವೇ ಗಂಟೆಯಲ್ಲಿ ಎಚ್ಚೆತ್ತಿದ್ದು ಸಹ ಗಮನಾರ್ಹ!

- - - -24ಕೆಡಿವಿಜಿ10, 11: ದಾವಣಗೆರೆ ಹೈಸ್ಕೂಲ್ ಮೈದಾನದ ಕೆಎಸ್ಸಾರ್ಟಿಸಿ ತಾತ್ಕಾಲಿಕ ನಿಲ್ದಾಣದಲ್ಲಿ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. -24ಕೆಡಿವಿಜಿ12, 13.ಜೆಪಿಜಿ: ದಾವಣಗೆರೆ ಹೈಸ್ಕೂಲ್ ಮೈದಾನದ ಕೆಎಸ್ಸಾರ್ಟಿಸಿ ತಾತ್ಕಾಲಿಕ ನಿಲ್ದಾಣದಲ್ಲಿ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಲ ಗಂಟೆಯಲ್ಲೇ ತಾತ್ಕಾಲಿಕ ನಿಲ್ದಾಣ ತೆರವು ಕಾರ್ಯಕ್ಕೆ ಜೆಸಿಬಿ, ದೈತ್ಯ ಲಾರಿಗಳು ಪ್ರವೇಶಿಸಿರುವುದು.