ಗೋಕರ್ಣ: ಪ್ರತಿಯೊಬ್ಬ ಮನುಷ್ಯನಿಗೂ ಇಷ್ಟು ಬಾರಿ ಉಸಿರಾಟ ಎಂದು ವಿಧಿ ಮೊದಲೇ ನಿಗದಿಪಡಿಸಿದಂತೆ, ಪ್ರತಿಯೊಬ್ಬ ಮನುಷ್ಯನಿಗೂ ಅವನ ಜೀವಿತಾವಧಿಯಲ್ಲಿ ಇಷ್ಟು ಆಹಾರ ಸ್ವೀಕರಿಸಬಹುದು ಎಂದು ವಿಧಿ ಬರೆದಿರುತ್ತದೆ. ದೀರ್ಘ ಉಸಿರಾಟದ ಮೂಲಕ ಹೆಚ್ಚು ಕಾಲ ಜೀವಿಸಬಹುದು. ಹಾಗೆಯೇ ಅಗತ್ಯಕ್ಕಿಂತ ಹೆಚ್ಚೆಚ್ಚೇ ಆಹಾರ ಸ್ವೀಕರಿಸಿದಂತೆ ಅವನು ಮೃತ್ಯುವಿಗೆ ಹೆಚ್ಚೆಚ್ಚೇ ಹತ್ತಿರವಾಗುತ್ತಾ ಸಾಗುತ್ತಾನೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ''''''''ಅನ್ನಬ್ರಹ್ಮ ಚಾತುರ್ಮಾಸ್ಯ''''''''ದ ಧರ್ಮಸಭೆಯಲ್ಲಿ ''''''''ಅನ್ನಂ ಬ್ರಹ್ಮ'''''''' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಅನ್ನವೇ ಮೃತ್ಯು ಹಾಗೂ ಅನ್ನವೇ ಜೀವನಕ್ಕೆ ಕಾರಣ ಎಂದು ಭಾರತೀಯ ಶಾಸ್ತ್ರಗಳು ಹೇಳಿವೆ. ಆಹಾರವನ್ನು ಸರಿಯಾಗಿ ಬಳಸಿದಾಗ ಅದು ಜೀವಕ್ಕೆ ಪೂರಕ ಮತ್ತು ವ್ಯತಿರಿಕ್ತವಾಗಿ ಬಳಸಿದಾಗ ಅದೇ ಸಾವಿಗೆ ಕಾರಣವಾಗುತ್ತದೆ. ಬೋಧಾಯನರು ಧರ್ಮಸೂತ್ರಗಳಲ್ಲಿ ಭೋಜನವನ್ನು ಯಜ್ಞ ಎಂದಿದ್ದು, ಶಂಕರಾಚಾರ್ಯರು ತಮ್ಮ ಪ್ರಪಂಚಸಾರ ತಂತ್ರದಲ್ಲಿ ಇದೇ ಅಭಿಪ್ರಾಯವನ್ನು ಹೇಳಿದ್ದಾರೆ. ಆಯುರ್ವೇದ ತಜ್ಞರಾದ ಚರಕ - ಸುಶ್ರುತರು ಕೂಡ ಭೋಜನವನ್ನು ಯಜ್ಞ ಎಂದು ಕರೆದಿದ್ದು, ಉಪನಿಷತ್ತುಗಳೂ ಭೋಜನವನ್ನು ಯಜ್ಞ ಎಂದಿವೆ ಎಂದು ತಿಳಿಸಿದರು.ನಮ್ಮೊಳಗಿರುವ ಜಠರಾಗ್ನಿಯೇ ಅಗ್ನಿಯಾಗಿದ್ದು, ನಾವು ಮಾಡುವ ಊಟವೇ ಇದಕ್ಕೆ ಅರ್ಪಿಸುವ ಹವಿಸ್ಸಾಗಿದೆ. ನಮಗೆ ಎಂದುಕೊಳ್ಳದೇ ನಮ್ಮೊಳಗಿರುವ ಪರಮಾತ್ಮನಿಗೆ ಎಂದು ಊಟವನ್ನು ವಿಧಿವತ್ತಾಗಿ ಸೇವಿಸಿದಾಗ ಅದು ನಿಜವಾಗಿ ಯಜ್ಞವೇ ಆಗುತ್ತದೆ. ಸರಿಯಾದ ಕ್ರಮ ಹಾಗೂ ಹೊತ್ತಿನಲ್ಲಿ ಮಾಡುವ ಭೋಜನವು ಅಗ್ನಿಹೋತ್ರವೇ ಆಗುತ್ತದೆ. ಈ ಕುರಿತಾಗಿ ಪ್ರಾಣಾಗ್ನಿಹೋತ್ರೋಪನಿಷತ್ ಎಂಬ ಉಪನಿಷತ್ತೇ ಇದ್ದು, ಇದು ಆಹಾರದ ವಿಧಿ - ನಿಷೇಧಗಳನ್ನು ಹಾಗೂ ಅದರಂತೆ ನಡೆದುಕೊಂಡಾಗ ಆಗುವ ವಿವಿಧ ಲಾಭಗಳನ್ನು ತಿಳಿಸುತ್ತದೆ ಎಂದು ವಿವರಿಸಿದರು. ಭೋಜನವನ್ನು ಸ್ವೀಕರಿಸುವಾಗ ಭಾವವೇ ಪ್ರಧಾನವಾಗಿದ್ದು, ಜತೆಗೆ ಯಾವ ಕಾಲದಲ್ಲಿ, ಯಾವ ಸ್ಥಳದಲ್ಲಿ, ಯಾವ ಪ್ರಮಾಣದಲ್ಲಿ ಹಾಗೂ ಯಾವುದನ್ನು ಊಟ ಮಾಡಬೇಕು ಎಂದು ಸರಿಯಾಗಿ ತಿಳಿದು ಆಹಾರವನ್ನು ಸ್ವೀಕರಿಸಿದಾಗ ಅದು ಯಜ್ಞಕ್ಕಿಂತ ಕಡಿಮೆಯಲ್ಲ ಎಂದು ಶ್ರೀಗಳು ನಿರೂಪಿಸಿದರು.
ಸಿಎಂಆರ್ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ. ಶಿವಕುಮಾರ್ ಅವರು ಶ್ರೀಗಳಿಂದ ಆಶೀರ್ವಾದ ಪಡೆದರು. ಚಂದ್ರಶೇಖರ ದಂಟಿನಮನೆ ಮತ್ತು ಕುಟುಂಬದವರು ಗುರುಭಿಕ್ಷಾ ಸೇವೆ ನೆರವೇರಿಸಿದರು. ಭಂಡಾರಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನೆರವೇರಿತು. ಭಂಡಾರಿ ಸಮಾಜದ ಅಧ್ಯಕ್ಷ ಶಿವು ಭಂಡಾರಿ, ಸುಬ್ರಾಯ ಭಂಡಾರಿ ಮನುವಳ್ಳಿ, ಹರಿಹರ ಭಂಡಾರಿ ಕಡತೋಕ ಹಾಗೂ ಭಂಡಾರಿ ಸಮಾಜದ ನೂರಾರು ಗುರುಬಂಧುಗಳು ಪಾದುಕಾ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಜಿ.ವಿ. ಹೆಗಡೆ, ಸತೀಶ ಭಟ್ಟ ಧಾರೇಶ್ವರ, ದಿನ ಪ್ರಧಾನರಾದ ಪಾದೇಕಲ್ಲು ವಿಷ್ಣು ಭಟ್ ದಂಪತಿಗಳು ಉಪಸ್ಥಿತರಿದ್ದರು.ಊಟವನ್ನು ಹೇಗೆ ಮಾಡಬೇಕು?: ನಮಗಾಗಿ ಎಂದೂ ಆಹಾರವನ್ನು ತಯಾರಿಸಬಾರದು. ಅತಿಥಿಗಳು, ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಹಾಗೂ ಕಷ್ಟದಲ್ಲಿ ಇರುವವರಿಗೆ ಆಹಾರ ನೀಡಬೇಕು. ಆನಂತರವಷ್ಟೇ ನಾವು ಆಹಾರವನ್ನು ಸ್ವೀಕರಿಸಬೇಕು. ಹೀಗೆ ಮಾಡದೇ, ನಾವೇ ಮೊದಲು ಊಟ ಮಾಡಿದರೆ ಅದು ಪಾಪವಾಗಿ ತಾಪದಿಂದ ನಮ್ಮನ್ನೇ ಸುಡುತ್ತದೆ ಎಂದು ಹೇಳಲಾಗಿದೆ. ಇದು ಪ್ರಾಚೀನ ಭಾರತದ ಶಾಸ್ತ್ರಕಾರರ ಹೃದಯ ವೈಶಾಲ್ಯವನ್ನು ತೋರಿಸುತ್ತದೆ ಎಂದರು.ಪ್ರಾಣ ಘಾತಕವಾಗಬಹುದಾದ ಕುಲಾಂತರಿ ಗೋದಿ: ಗೋಧೂಮ ಎಂದು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಗೋದಿ ಇಂದು ತನ್ನ ಮೂಲಸ್ವರೂಪವನ್ನೇ ಕಳೆದುಕೊಂಡಿದೆ. ಇಂದು ಸಿಗುವ ಗೋದಿ ಸಂಪೂರ್ಣ ರೂಪಾಂತರಗೊಂಡಿದೆ. ಕೃಷಿತೋಟದಲ್ಲಿ ಕ್ರಿಮಿಗಳಿಂದ ರಕ್ಷಿಸಲು ಗೋದಿಯನ್ನು ರೂಪಾಂತರ ಮಾಡಲಾಗಿದ್ದು, ಇಂದು ಸಿಗುವ ಗೋದಿಯನ್ನು ಮನುಷ್ಯನು ತಿನ್ನಲು ಯೋಗ್ಯವೇ ಎಂದು ಪ್ರಶ್ನಿಸುವಂತಾಗಿದೆ. ಕೆಟ್ಟ ಗೋದಿಯನ್ನು ಮತ್ತಷ್ಟು ಕೆಡಿಸಿರುವ ವಸ್ತುವೇ ಮೈದಾ. ಅದು ಮನುೇಷ್ಯನ ಜೀರ್ಣಾಂಗದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಆಧುನಿಕ ವಿಜ್ಞಾನ ಹೇಳುತ್ತಿದೆ. ಜೀರ್ಣಕ್ಕೆ ಕಷ್ಟವಾಗುವ ಆಹಾರವನ್ನು ತಿನ್ನಬಾರದು ಎಂದು ಶ್ರೀಗಳು ಅಭಿಪ್ರಾಯಪಟ್ಟರು.