ಮೈಸೂರಲ್ಲಿ ಆಗಿದ್ದು ಇಲ್ಲೇಕೆ ಆಗುತ್ತಿಲ್ಲ?

| Published : Jul 27 2024, 12:47 AM IST

ಮೈಸೂರಲ್ಲಿ ಆಗಿದ್ದು ಇಲ್ಲೇಕೆ ಆಗುತ್ತಿಲ್ಲ?
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನಲ್ಲಿ ಪ್ರತಿ ವರ್ಷ ದಸರಾ ನಡೆಯುವುದರಿಂದ ಕೋಟ್ಯಂತರ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಅಲ್ಲಿ ಹೆಚ್ಚಿನ ಪೌರ ಕಾರ್ಮಿಕರ ಅವಶ್ಯಕತೆ ಇದೆ ಎಂದು ಅಲ್ಲಿನ ಮಹಾನಗರ ಪಾಲಿಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದಿದೆ. ಆದರೆ, ಹುಬ್ಬಳ್ಳಿ-ಧಾರವಾರ ಮಹಾನಗರ ಪಾಲಿಕೆಯಲ್ಲಿ ನಿಗದಿಗಿಂತ ಹೆಚ್ಚುವರಿ ಪೌರಕಾರ್ಮಿಕರು ಇರುವುದರಿಂದ ನೇರನೇಮಕಾತಿ ಸಾಧ್ಯವಿಲ್ಲ ಎಂದು ಪಾಲಿಕೆ ಆಯುಕ್ತರು ಹೇಳುತ್ತಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಮೈಸೂರು ಮಹಾನಗರ ಪಾಲಿಕೆಗೆ ಸಾಧ್ಯವಾಗಿದ್ದು ಹುಬ್ಬಳ್ಳಿ-ಧಾರವಾಡ ಪಾಲಿಕೆಗೆ ಏಕೆ ಆಗುತ್ತಿಲ್ಲ? ಎಂಟ್ಹತ್ತು ದಿನಗಳಾದರೂ ಪೌರಕಾರ್ಮಿಕರ ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಲು ಪಾಲಿಕೆಗೆ ಏಕೆ ಆಗುತ್ತಿಲ್ಲ?

ಈ ಪ್ರಶ್ನೆಗಳೀಗ ಪ್ರಜ್ಞಾವಂತರಲ್ಲಿ ಉಂಟಾಗಿವೆ.

ಕಾರಣ, ಮೈಸೂರು ಪಾಲಿಕೆಯಂತೆ ತಮನ್ನೂ ನೇರ ವೇತನ ಪಾವತಿಯಡಿ ನೇಮಿಸಿಕೊಳ್ಳಿ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಕಳೆದ ಒಂದು ವಾರದಿಂದ ಮಳೆ-ಗಾಳಿ ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿರುವುದನ್ನು ಕಂಡು ಮಹಾನಗರದ ಜನತೆ ಇಂಥದೊಂದು ಪ್ರಶ್ನೆ ಮಾಡುತ್ತಿದ್ದಾರೆ.

2017ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಾಲಿಕೆ ಸೇರಿದಂತೆ ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿ ಇರುವಂತಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ಪೌರಕಾರ್ಮಿಕರನ್ನು ತೆಗೆದುಕೊಳ್ಳಬೇಕು. 700 ಜನರಿಗೊಬ್ಬರಂತೆ ಪೌರಕಾರ್ಮಿಕರು ಆ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಬೇಕಾಗುವ ಪೌರಕಾರ್ಮಿಕರಲ್ಲಿ ಅರ್ಧದಷ್ಟು ನೇರ ನೇಮಕಾತಿ ಮಾಡಿಕೊಳ್ಳಬೇಕು. ಇನ್ನುಳಿದ ಅರ್ಧದಷ್ಟು ಪೌರಕಾರ್ಮಿಕರನ್ನು ನೇರ ವೇತನ ಪಾವತಿ ಎಂಬ ಪದ್ಧತಿ ಪರಿಚಯಿಸಿ ಆ ಮೂಲಕ ಕೆಲಸಕ್ಕೆ ನಿಯೋಜಿಸಿಕೊಳ್ಳಬೇಕು ಎಂದು ಹೇಳಿತ್ತು.

ಪಾಲಿಕೆಯಲ್ಲಿ ಆಗಿರುವುದೇನು?:

700 ಜನರಿಗೊಬ್ಬರಂತೆ ಪಾಲಿಕೆಗೆ ಬೇಕಾಗುವ ಪೌರಕಾರ್ಮಿಕರ ಸಂಖ್ಯೆ 1662 ಮಾತ್ರ. ಆದರೆ ಈಗಿರುವುದು 2,112. ಇದರಲ್ಲಿ 384 ಜನ ಕಾಯಂ ನೌಕರರಿದ್ದಾರೆ. 134 ಜನರ ನೇರ ನೇಮಕಾತಿ ಅಂತಿಮ ಹಂತಕ್ಕೆ ತಲುಪಿದೆ. ಇದಾದ ಬಳಿಕ 252 ಜನರ ನೇಮಕಾತಿಗೆ ನೋಟಿಫಿಕೇಶನ್‌ ಹೊರಡಿಸಲಾಗುತ್ತಿದೆ. ಅದಾದ ಬಳಿಕ 3ನೇ ಹಂತದಲ್ಲಿ ಮತ್ತೆ ನೇಮಕಾತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗುತ್ತಿದೆ. ಇನ್ನು 1662ರಲ್ಲಿ 831 ಜನ ನೇರ ನೇಮಕಾತಿ ಪರಿಸ್ಥಿತಿ ಇದಾದರೆ, ಇನ್ನುಳಿದ 831 ಜನರನ್ನು ನೇರ ವೇತನ ಪಾವತಿಯಡಿ ನೇಮಿಸಿಕೊಳ್ಳಬೇಕು. ಈಗಾಗಲೇ 954 ಜನರನ್ನು ನೇರ ವೇತನ ಪಾವತಿಯಡಿ ನೇಮಿಸಿಕೊಳ್ಳಲಾಗಿದೆ. ಹಾಗೆ ನೋಡಿದರೆ 123 ಜನ ಪೌರಕಾರ್ಮಿಕರು ನೇರ ವೇತನದಡಿ ಹೆಚ್ಚಿಗೆ ಇದ್ದಾರೆ ಎಂಬುದು ಪಾಲಿಕೆ ವಿವರಣೆ.

ಇನ್ನು ಇವರನ್ನು ಹೊರತುಪಡಿಸಿ 799 ಜನರು ಹೊರಗುತ್ತಿಗೆ ಆಧಾರದ ಮೇಲಿದ್ದಾರೆ. ಮೈಸೂರಲ್ಲೂ ಇದೇ ರೀತಿ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರಿದ್ದರು. ಅಲ್ಲಿ ಶೇ. 50ರಷ್ಟು ನೇರ ವೇತನದಡಿ ನೇಮಿಸಿಕೊಂಡ ಮೇಲೂ 700ರಿಂದ 800 ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕಿದ್ದರು. ಬಳಿಕ ಅವರನ್ನು ನೇರ ವೇತನದಡಿ ನೇಮಿಸಿಕೊಳ್ಳಲಾಯಿತು. ಅದೇ ರೀತಿ ಇಲ್ಲೂ ಮಾಡಿ ಎಂಬ ಬೇಡಿಕೆ ಪೌರಕಾರ್ಮಿಕರದ್ದು.

ಇಲ್ಲಿ ಮಾಡಲು ಸಮಸ್ಯೆಯೇನು?:

ಮೈಸೂರಿನಲ್ಲಿ ಪ್ರತಿವರ್ಷ ನಡೆಯುವ ದಸರಾಕ್ಕೆ ಕೋಟ್ಯಂತರ ಪ್ರವಾಸಿಗರು ಬರುತ್ತಾರೆ. ಆಗ ಪೌರಕಾರ್ಮಿಕರ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೇರ ವೇತನದಡಿ ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡಿ ಎಂಬ ಕಾರಣ ನೀಡಿ ಅಲ್ಲಿನ ಪಾಲಿಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತು. ಸರ್ಕಾರ ಅಸ್ತು ಎಂದಿತು. ಹೀಗಾಗಿ ನೇರ ವೇತನದಡಿ ಹೆಚ್ಚಿನ ಸಿಬ್ಬಂದಿ ಇದ್ದಾರೆ. ಅಲ್ಲಿನಂತೆ ಇಲ್ಲಿನ ಪರಿಸ್ಥಿತಿ ಇಲ್ಲ. ಆದರೂ ಪಾಲಿಕೆ ಸಾಮಾನ್ಯಸಭೆಯಲ್ಲಿ 799 ಜನರನ್ನು ನೇರ ವೇತನದಡಿ ನೇಮಿಸಿಕೊಳ್ಳುವ ಕುರಿತು ಸಾಮಾನ್ಯ ಸಭೆಯಲ್ಲಿ ಠರಾವ್‌ ಪಾಸು ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಸರ್ಕಾರದಿಂದ ಅನುಮತಿ ಸಿಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿರುವುದರಿಂದ ಅಲ್ಲೇ ನಿರ್ಧಾರವಾಗಬೇಕು ಎಂಬುದು ಪಾಲಿಕೆ ಸ್ಪಷ್ಟನೆ.

ಆದರೆ ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ಪಟ್ಟು ಪೌರಕಾರ್ಮಿಕರದ್ದು. ಈ ನಡುವೆ ಪೌರಕಾರ್ಮಿಕರ ಮುಷ್ಕರ ನಡೆದಿರುವುದರಿಂದ ನಗರದ ಸ್ವಚ್ಛತೆಗೆ ಸಮಸ್ಯೆಯಾಗಿ ನಾಗರಿಕರು ತೊಂದರೆ ಅನುಭವಿಸುತ್ತಿರುವುದಂತೂ ಸತ್ಯ.ಮೈಸೂರು ಪಾಲಿಕೆಯಂತೆ ಇಲ್ಲೂ ಗುತ್ತಿಗೆ ಪದ್ಧತಿ ರದ್ದು ಮಾಡಿ ನೇರ ವೇತನದಡಿ ನೇಮಿಸಿಕೊಳ್ಳಲಿ. ಪಾಲಿಕೆ ಮನಸು ಮಾಡಿದರೆ ಕಷ್ಟವೇನು ಇಲ್ಲ. ಸಾಮಾನ್ಯ ಸಭೆಯಲ್ಲಿ ಠರಾವ್‌ ಪಾಸು ಮಾಡಿ ಈವರೆಗೂ ಅನುಮೋದನೆ ಪಡೆಯದೇ ಪೌರಕಾರ್ಮಿಕರನ್ನು ಸತಾಯಿಸಲಾಗುತ್ತಿದೆ ಎಂದು ಪೌರಕಾರ್ಮಿಕರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಹೇಳಿದ್ದಾರೆ.ಮೈಸೂರಿನಲ್ಲಿ ದಸರಾ ನಡೆಯುತ್ತದೆ. ಲೆಕ್ಕವಿಲ್ಲದಷ್ಟು ಪ್ರವಾಸಿಗರ ಆಗಮನ-ನಿರ್ಗಮನ ಇರುತ್ತದೆ. ಈ ಕಾರಣ ನೀಡಿ ಅಲ್ಲಿ ನೇರ ವೇತನದಡಿ ನೇಮಿಸಿಕೊಳ್ಳಲಾಗಿದೆ. ಆದರೆ ಇಲ್ಲಿ ಆ ಪರಿಸ್ಥಿತಿ ಇಲ್ಲ. ಆದರೂ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಸರ್ಕಾರ ಏನು ನಿರ್ದೇಶನ ನೀಡುತ್ತದೆಯೋ ಆ ರೀತಿ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.