ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪೌರ ಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಸದಾ ಸಿದ್ಧವಿದ್ದು, ಶೀಘ್ರದಲ್ಲೇ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಗೆ ಕ್ರಮ ವಹಿಸಲಾಗುವುದು ಎಂದು ಮಂಡ್ಯ ವಿಧಾನಸಭಾ ಶಾಸಕ ಪಿ. ರವಿಕುಮಾರ್ ಅವರು ತಿಳಿಸಿದರು.ಗುರುವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಹಾಗೂ ಶ್ರಮಜೀವಿ ಪೌರ ಕಾರ್ಮಿಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಲವು ದಿನಗಳ ಬೇಡಿಕೆಯಾದ ಪೌರಕಾರ್ಮಿಕರ ನೇರ ವೇತನ ಪಾವತಿ ಸಂಬಂಧ ಕಡತ ಈಗಾಗಲೇ ಸರ್ಕಾರದ ಮುಂದಿದ್ದು, ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪೌರ ಕಾರ್ಮಿಕರಿಲ್ಲದೇ ಹೋದರೆ ನಗರವನ್ನು ಸ್ವಚ್ಛತೆಯಿಂದಿಡಲು ಸಾಧ್ಯವಿಲ್ಲ. ಕೊರೋನಾ ಸಂದರ್ಭದಲ್ಲಿ ಪೌರ ಕಾರ್ಮಿಕರು ಮಾಡಿದ ಸೇವೆಯನ್ನು ಇಡೀ ದೇಶ ನೋಡಿದೆ. ಪೌರ ಕಾರ್ಮಿಕರ ಸೇವೆ ಶ್ಲಾಘನೀಯವಾದುದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
5000 ಮನೆಗಳ ನಿರ್ಮಾಣಕ್ಕೆ ಗುರಿ:ಸೂರಿಲ್ಲದವರಿಗೆ ಮಂಡ್ಯದಲ್ಲಿ 5000 ಮನೆಗಳ ನಿರ್ಮಾಣ ಮಾಡಲು ಗುರಿ ಹೊಂದಲಾಗಿದ್ದು, ಈಗಾಗಲೇ 600 ಮನೆಗಳನ್ನು ನಿರ್ಮಿಸಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಶೀಘ್ರದಲ್ಲೇ ಹಂಚಿಕೆ ಮಾಡಲಾಗುವುದು. ಮಂಡ್ಯ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಅಥವಾ ಖಾಸಗಿ ಜಾಗ ಖರೀದಿಸಿ ಉಳಿದ 4400 ಮನೆಗಳನ್ನು ಹಂತ ಹಂತವಾಗಿ ನಿರ್ಮಿಸಿ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಹಕ್ಕುಪತ್ರ ವಿತರಣೆ:ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು. ಈಗಾಗಲೇ ಹಾಲಹಳ್ಳಿ ಸ್ಲಂ ನಿವಾಸಿಗಳಿಗೆ 700 ಮಂದಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. 15 ದಿನದೊಳಗೆ ನಗರದ ಆರ್.ಟಿ.ಒ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಹೇಳಿದರು.ಮೂರುವರೆ ವರ್ಷದಲ್ಲಿ ಯಾರೊಬ್ಬರೂ ಹಕ್ಕುಪತ್ರದಿಂದ ವಂಚಿತರಾಗಬಾರದು, ಆ ನಿಟ್ಟಿನಲ್ಲಿ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸಲಾಗುವುದು. ಸ್ಲಂ ನಿವಾಸಿಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಗಾಂಧಿನಗರದಲ್ಲಿ ನಿರ್ಮಾಣವಾಗುತ್ತಿರುವ 203 ಮನೆಗಳ ಕಾಮಗಾರಿ ಶೇ.10 ರಷ್ಟು ಮುಗಿದಿದ್ದು, ಉಳಿದ ಶೇ.10 ರಷ್ಟು ಕಾಮಗಾರಿ ಪೂರ್ಣಗೊಳ್ಳಲು ಫಲಾನುಭವಿಗಳು ಸ್ಲಂ ಬೋರ್ಡ್ಗೆ 47 ಸಾವಿರ ಹಣ ಪಾವತಿ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಡಾ ಕುಮಾರ್ ಮಾತನಾಡಿ, ಪ್ರತಿಯೊಂದು ವೃತ್ತಿಗೂ ಕೂಡ ಅದರದ್ದೇ ಆದ ಘನತೆ, ಗೌರವ, ಮಹತ್ವ, ಪ್ರಾಮುಖ್ಯತೆ ಇರುತ್ತದೆ. ಅದರಲ್ಲಿ ಪೌರ ಕಾರ್ಮಿಕರ ವೃತ್ತಿಯು ವಿಶೇಷವಾಗಿದ್ದು, ಇವರ ಕೆಲಸವನ್ನು ಯಾವ ವಿಧದಲ್ಲೂ ಅಳೆಯಲಿಕ್ಕೆ ಸಾಧ್ಯವಿಲ್ಲ. ಪೌರ ಕಾರ್ಮಿಕರು ನಿಮ್ಮ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡಬೇಕು. ಪೌರ ಕಾರ್ಮಿಕರ ಮಕ್ಕಳು ಪೌರ ಕಾರ್ಮಿಕರಾಗಬೇಕು ಎಂಬ ಮನೋಭಾವನೆಯನ್ನು ತೊರೆಯಬೇಕು. ಸಮಾಜದಲ್ಲಿ ಒಳ್ಳೆಯ ಶಿಕ್ಷಣ, ಒಳ್ಳೆಯ ಹುದ್ದೆಯನ್ನು ಅಲಂಕರಿಸಬೇಕು ಎಂದು ತಿಳಿಸಿದರು.ಪೌರ ಕಾರ್ಮಿಕರ ಕ್ಷೇಮಾನಿಧಿಗೆ 2 ಲಕ್ಷ ರು. ನೆರವು:
ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ತುಷಾರಮಣಿ ತಮ್ಮ ತಂದೆ ವೀರಪ್ಪ, ತಾಯಿ ಶಕುಂತಲಾ ಅವರ ಹೆಸರಿನಲ್ಲಿ ಪೌರಕಾರ್ಮಿಕರ ಕ್ಷೇಮಾನಿಧಿಗೆ ವೈಯಕ್ತಿಕವಾಗಿ 2 ಲಕ್ಷ ರು. ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು.ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ನಗರಸಭೆ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಅರುಣ್ ಕುಮಾರ್, ಮಾಜಿ ಅಧ್ಯಕ್ಷ ಎಂ ಎಸ್ ಮಂಜು, ನಗರಾಭಿವೃದ್ದಿ ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ. ಬಿ. ನಾಗಣ್ಣಗೌಡ, ನಗರಸಭೆ ಆಯುಕ್ತ ಕೃಷ್ಣಕುಮಾರ್, ನಗರಸಭೆ ಎಂಜಿನಿಯರ್ ರುದ್ರೇಗೌಡ, ನಗರಸಭೆ ಸದಸ್ಯರಾದ ಮಂಜುಳಾ, ಮೀನಾಕ್ಷಿ, ಶ್ರೀಧರ್, ರವಿಕುಮಾರ್, ಪುಟ್ಟಸ್ವಾಮಿ, ಗೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.