ಕಟೋನ್ಮೆಂಟ್‌ ರೈಲು ನಿಲ್ದಾಣ ಪ್ರವೇಶಕ್ಕೆ ಮಾರ್ಗಸೂಚಿ

| Published : Mar 12 2025, 01:46 AM IST

ಕಟೋನ್ಮೆಂಟ್‌ ರೈಲು ನಿಲ್ದಾಣ ಪ್ರವೇಶಕ್ಕೆ ಮಾರ್ಗಸೂಚಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಕಂಟೋನ್ಮೆಂಟ್‌ ರೈಲು ನಿಲ್ದಾಣ ಮರುನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ನಿಲ್ದಾಣ ಪ್ರವೇಶ ಸೇರಿದಂತೆ ಪ್ರಯಾಣಿಕರಿಗೆ ಕೆಲವು ಮಾರ್ಗಸೂಚಿ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಕಂಟೋನ್ಮೆಂಟ್‌ ರೈಲು ನಿಲ್ದಾಣ ಮರುನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ನಿಲ್ದಾಣ ಪ್ರವೇಶ ಸೇರಿದಂತೆ ಪ್ರಯಾಣಿಕರಿಗೆ ಕೆಲವು ಮಾರ್ಗಸೂಚಿ ನೀಡಲಾಗಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ಲಾಟ್‌ಫಾರ್ಮ್ 1ರ ಕೊನೆಯಲ್ಲಿ ಹೊಸದಾಗಿ ನಿರ್ಮಿಸಲಾದ 1ಎ , 1ಇ ಪ್ಲಾಟ್‌ಫಾರ್ಮ್‌ಗಳಲ್ಲಿ ನಿರ್ವಹಿಸಲಾಗುತ್ತಿದೆ. ನಿಲ್ದಾಣಕ್ಕೆ ಬಸ್ಸಿನಲ್ಲಿ ಬರುವ ಪ್ರಯಾಣಿಕರು ಕಂಟೋನ್ಮೆಂಟ್ ಬಸ್ ನಿಲ್ದಾಣದಲ್ಲಿ ಇಳಿದು ಪ್ಲಾಟ್‌ಫಾರ್ಮ್ 1ರ ಬದಿಯಲ್ಲಿರುವ ಮುಖ್ಯದ್ವಾರದ ಮೂಲಕ ರೈಲುಗಳು ನಿಲ್ಲುವ 1ಎ ನಿಂದ 1ಇ ವರೆಗಿನ ಪ್ಲಾಟ್‌ಫಾರ್ಮ್‌ಗಳಿಗೆ ತಲುಪಬಹುದು.

ನಿಲ್ದಾಣದ ಮುಂಭಾಗದಲ್ಲಿರುವ ಟರ್ಮಿನಲ್ 1ರ ಬಳಿ ಇರುವ ತಾತ್ಕಾಲಿಕ ಪ್ರವೇಶವನ್ನು ಕೂಡ ಬಳಸಬಹುದು. ತಾತ್ಕಾಲಿಕ ಪ್ರವೇಶದ್ವಾರದಿಂದ ಸುಮಾರು 100 ಮೀಟರ್‌ ದೂರ ಕ್ರಮಿಸಿದರೆ ಪ್ಲಾಟ್‌ಫಾರ್ಮ್ 1ಎ-1ಇಗಳಿಗೆ ತಲುಪಬಹುದು. ಇತರ ಎಲ್ಲ ರೈಲುಗಳಿಗೆ ಪ್ರಯಾಣಿಕರು ಟರ್ಮಿನಲ್ ಎರಡನ್ನು ಬಳಸಬಹುದು. ಅಭಿವೃದ್ಧಿ ಕಾಮಗಾರಿ ಕಾರಣದಿಂದ ಟರ್ಮಿನಲ್ 2ರಲ್ಲಿ ಪಾರ್ಕಿಂಗ್ ಸೌಲಭ್ಯವಿಲ್ಲ. ಟರ್ಮಿನಲ್-1ರ ಮುಂಭಾಗದಲ್ಲಿ ಇರುವ ಪಾರ್ಕಿಂಗ್ ಸೌಲಭ್ಯ ಬಳಸಬಹುದು. ತಪ್ಪಾದ ಟರ್ಮಿನಲ್ ಮೂಲಕ ಪ್ರಯಾಣಿಕರು ನಿಲ್ದಾಣವನ್ನು ಪ್ರವೇಶಿಸಿದರೆ, ಪ್ಲಾಟ್‌ಫಾರ್ಮ್‌ಗಳ ನಡುವೆ ದಾಟಲು ಪಾದಚಾರಿ ಮೇಲ್ಸೇತುವೆ ಬಳಸಬಹುದು.

ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣದ ಪ್ಲಾಟ್‌ಫಾರ್ಮ್ 1ರ ಬದಿಯಲ್ಲಿ ಟಿಕೆಟ್ ಕಾಯ್ದಿರಿಸುವ ಒಂದು ಕೌಂಟರ್ ಮತ್ತು ಕಾಯ್ದಿರಿಸದ ಟಿಕೆಟ್‌ಗಳ ನಾಲ್ಕು ಕೌಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ಲಾಟ್‌ಫಾರ್ಮ್ 2ರ ಕಡೆಯಲ್ಲಿ ಕಾಯ್ದಿರಿಸದ ಟಿಕೆಟ್‌ಗಳ ಎರಡು ಕೌಂಟರ್‌ಗಳು ಮತ್ತು ಒಂದು ಸ್ವಯಂಚಾಲಿತ ಟಿಕೆಟ್ ವೆಂಡಿಂಗ್ ಮೆಷಿನ್ (ಎಟಿವಿಎಂ) ಕಾರ್ಯ ನಿರ್ವಹಿಸುತ್ತಿವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಇಂಟರ್‌ಸಿಟಿ ಎಕ್ಸ್‌ಪ್ರೆಸ್

ನಿಲುಗಡೆ ಮುಂದುವರಿಕೆ

ಬೆಂಗಳೂರಿನ ಯಶವಂತಪುರ ಮತ್ತು ಶಿವಮೊಗ್ಗ ಟೌನ್ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಇಂಟರ್‌ಸಿಟಿ ಎಕ್ಸ್ ಪ್ರೆಸ್ (16579/16580) ರೈಲುಗಳಿಗೆ ಚಿಕ್ಕಬಾಣಾವರ ನಿಲ್ದಾಣದಲ್ಲಿದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಮಾ.16 ರಿಂದ ಜೂನ್ 15ರವರೆಗೆ ಮುಂದುವರಿಸಲಾಗುತ್ತಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಮತ್ತು ಅಶೋಕಪುರಂ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಮೆಮು ವಿಶೇಷ ರೈಲುಗಳಿಗೆ (06525/06526) ನಾಯಂಡಹಳ್ಳಿ ನಿಲ್ದಾಣದಲ್ಲಿದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಮಾ.21 ರಿಂದ ಮುಂದಿನ ಸೂಚನೆವರೆಗೆ ಮುಂದುವರಿಸಲಾಗುತ್ತಿದೆ.