ಭಟ್ಕಳದಲ್ಲಿ ಮ್ಯಾನ್‌ಹೋಲ್‌ನಿಂದ ಬಾವಿಗಳಿಗೆ ಕೊಳಕು ನೀರು ಸೇರ್ಡಡೆ: ಪುರಸಭೆ ಸದಸ್ಯರ ಆರೋಪ

| Published : Oct 12 2024, 12:02 AM IST

ಭಟ್ಕಳದಲ್ಲಿ ಮ್ಯಾನ್‌ಹೋಲ್‌ನಿಂದ ಬಾವಿಗಳಿಗೆ ಕೊಳಕು ನೀರು ಸೇರ್ಡಡೆ: ಪುರಸಭೆ ಸದಸ್ಯರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಹೊಲಸು ನೀರು ಕುಡಿಯುವ ನೀರಿನ ಬಾವಿಗೆ ಸೇರುತ್ತಿರುವುದರಿಂದ ಜನರು ಪುರಸಭೆ ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಯಾರೋ ಮಾಡಿದ ಕೆಲಸಕ್ಕೆ ಇನ್ಯಾರೋ ಬೈಸಿಕೊಳ್ಳುವಂತಾಗಿದೆ. ಕಾಮಗಾರಿ ನಿರ್ಮಿಸಿದವರ ಮೇಲೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಪುರಸಭಾ ಸದಸ್ಯರು ಆಗ್ರಹಿಸಿದರು.

ಭಟ್ಕಳ: ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಒಳಚರಂಡಿ ಮ್ಯಾನ್‌ಹೋಲ್‌ನಿಂದ ತ್ಯಾಜ್ಯದ ನೀರು ಸೋರಿಕೆಯಾಗಿ ಕುಡಿಯುವ ನೀರಿನ ಬಾವಿಗೆ ಸೇರಿ ಬಾವಿಯ ನೀರು ಕುಡಿಯದಂತಾಗಿದೆ ಎಂದು ಪುರಸಭೆ ಸದಸ್ಯರು ಆರೋಪಿಸಿದರು.

ಇಲ್ಲಿನ ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹಲವು ಸಮಸ್ಯೆಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಸಿ ಪರಿಹಾರಕ್ಕೆ ಆಗ್ರಹಿಸಿದರು.

ಹೊಲಸು ನೀರು ಕುಡಿಯುವ ನೀರಿನ ಬಾವಿಗೆ ಸೇರುತ್ತಿರುವುದರಿಂದ ಜನರು ಪುರಸಭೆ ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಯಾರೋ ಮಾಡಿದ ಕೆಲಸಕ್ಕೆ ಇನ್ಯಾರೋ ಬೈಸಿಕೊಳ್ಳುವಂತಾಗಿದೆ. ಕಾಮಗಾರಿ ನಿರ್ಮಿಸಿದವರ ಮೇಲೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು, ಸಾಗರ ರಸ್ತೆಯಲ್ಲಿರುವ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಾಲಿ ಪಟ್ಟಣ ಪಂಚಾಯಿತಿಯಿಂದ ಒಣಕಸ ಮರು ಉತ್ಪಾದನೆ ಘಟಕ ನಿರ್ಮಿಸಲು ₹80 ಲಕ್ಷ ನೀಡಲಾಗುತ್ತಿದೆ ಎಂದು ಹೇಳಿದಾಗ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪುರಸಭೆ ಮಾಜಿ ಅಧ್ಯಕ್ಷ ಪರ್ವೇಜ ಕಾಶೀಮಜಿ, ಕಳೆದ ಹಲವು ವರ್ಷಗಳಿಂದ ಜಾಲಿ ಪಪಂನವರು ಪುರಸಭೆಯ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯ ಹಾಕುತ್ತಿದ್ದರೂ ಒಂದು ರುಪಾಯಿಯೂ ಭರಣ ಮಾಡಿಲ್ಲ.

ಜಾಲಿ ಪಟ್ಟಣ ಪಂಚಾಯಿತಿಯನವರು ತ್ಯಾಜ್ಯ ಹಾಕುವ ಸಲುವಾಗಿ ₹25 ಲಕ್ಷ ಬಾಡಿಗೆಯನ್ನು ಪುರಸಭೆಗೆ ಭರಣ ಮಾಡಬೇಕಾಗಿದ್ದು, ಬಾಡಿಗೆ ಪಾವತಿ ಮಾಡುವ ತನಕ ತ್ಯಾಜ್ಯ ಘಟಕದಲ್ಲಿ ಜಾಲಿ ಪಪಂನವರಿಗೆ ತಾಜ್ಯ ಹಾಕಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಪುರಸಭೆಯ ತ್ಯಾಜ್ಯ ಘಟಕದಲ್ಲಿ ಜಾಲಿ ಪಪಂನವರು ಘಟಕ ನಿರ್ಮಿಸುವುದು ಯಾಕೆ? ಹೆಬಳೆ ಹಾಗೂ ಮಾವಳ್ಳಿಯಿಂದಲೂ ಕೂಡ ಕಸವನ್ನು ತಂದು ನಮ್ಮ ಘಟಕಕ್ಕೆ ಹಾಕಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಅವರು ತಂದು ಹಾಕುವ ಕಸಕ್ಕೆ ನಾವು ನಿರ್ವಹಣೆ ಮಾಡಬೇಕೆ ಎಂದು ಖಾರವಾಗಿ ಪ್ರಶ್ನಿಸಿದರು.

ಪರ್ವೇಜ ಅವರ ಮಾತಿಗೆ ಧ್ವನಿಗೂಡಿಸಿದ ಸದಸ್ಯರು ಪುರಸಭೆಗೆ ನಿರ್ದಿಷ್ಟ ಬಾಡಿಗೆ ನೀಡುವ ತನಕ ಯಾರಿಗೂ ನಮ್ಮ ಘಟಕದಲ್ಲಿ ತ್ಯಾಜ್ಯ ಹಾಕಲು ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ಪುರಸಭಾ ವ್ಯಾಪ್ತಿಯಲ್ಲಿ ಕಟ್ಟಡ ಹಾಗೂ ಜಾಗದ ನಕ್ಷೆಯ ಅನುಮೋದನೆ ಮಾಡುವ ನಗರ ಯೋಜನಾ ಅಧಿಕಾರಿ ಸ್ಥಳಕ್ಕೆ ಬಂದು ರಸ್ತೆ ಇನ್ನಿತರ ಬಗ್ಗೆ ಪರಿಶೀಲನೆ ನಡಸದೇ ಸ್ಥಳದಲ್ಲಿಯೇ ಕುಳಿತು ಅನುಮೋದನೆ ನೀಡುತ್ತಿದ್ದಾರೆ. ಇದರಿಂದಾಗಿ ರಸ್ತೆಯ ಮೇಲೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಪುರಸಭಾ ಸದಸ್ಯ ಕೃಷ್ಣಾನಂದ ಪೈ ಸಭೆಯ ಗಮನಕ್ಕೆ ತಂದರು.

ಪಟ್ಟಣದ ವಾರದ ಸಂತೆ ಮಾರುಕಟ್ಟೆ ಸನಿಹದಲ್ಲಿ ನಿರ್ಮಿಸುತ್ತಿರುವ ಗ್ಯಾಸ್ ಪಂಪ್ ಗೋಡೆಗೆ ತಾಗಿಕೊಂಡು ಮನೆಯೊಂದರ ಅಡುಗೆಕೋಣೆ ಇದೆ. ಪುರಸಭೆ ಸದಸ್ಯರ ವಿರೋಧದ ನಡುವೆಯೂ ಬಂಕ್ ನಿರ್ಮಾಣಕ್ಕೆ ಪರವಾನಗಿ ನೀಡಲಾಗಿದೆ. ಗ್ಯಾಸ್ ಪಂಪ್‌ನಿಂದ ಏನಾದರೂ ಅನಾಹುತವಾದರೆ ಇದಕ್ಕೆ ಹೊಣೆ ಯಾರು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೈಸರ್ ಮುಖ್ಯಾಧಿಕಾರಿ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು, ಬಂಕ್‌ ನವರು ವಿದ್ಯುತ್ ನಿರಾಪಕ್ಷಣೆಗೆ ಅರ್ಜಿ ನೀಡಿದ್ದು, ಪುರಸಭೆಯಿಂದ ತಡೆಹಿಡಿಯಲಾಗಿದೆ ಎಂದರು.

ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಸದಸ್ಯರು ಚರ್ಚೆ ನಡೆಸಿದರು. ಅಭಿಯಂತರ ಅರವಿಂದ ರಾವ್, ಪರಿಸರ ಅಭಿಯಂತರ ವೆಂಕಟೇಶ ನಾವುಡ, ವ್ಯವಸ್ಥಾಪಕ ವೆಂಕಟೇಶ ನಾಯ್ಕ ಮುಂತಾದ ಅಧಿಕಾರಿಗಳು, ಸಿಬ್ಬಂದಿ ಇದ್ದರು.