ವಿಕಲಚೇತನರು ಅವಕಾಶ, ಸೌಲಭ್ಯ ಸದುಪಯೋಗಪಡಿಸಿ: ಅನಿಲ್‌ ಕುಮಾರ್

| Published : Feb 02 2025, 01:00 AM IST

ಸಾರಾಂಶ

ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ನೇತೃತ್ವದಲ್ಲಿ ‘ವಾತ್ಸಲ್ಯ’ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಕಿಟ್‌ಗಳ ಮೂಲಕ ಬಟ್ಟೆ, ಪೌಷ್ಟಿಕ ಆಹಾರ ಮೊದಲಾದ ಮೂಲಭೂತ ಸೌಲಭ್ಯಗನ್ನು ಒದಗಿಸಲಾಗಿದೆ. ಇಪ್ಪತ್ತು ಸಾವಿರ ನಿರ್ಗತಿಕರಿಗೆ ಮಾಸಾಶನ ನೀಡಲಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವಿಕಲಾಂಗರಲ್ಲಿ ವಿಶೇಷಚೇತನ ಮತ್ತು ಪ್ರತಿಭೆ ಇದ್ದು, ತಮಗೆ ಸಿಗುವ ಅವಕಾಶಗಳು ಮತ್ತು ಸೌಲಭ್ಯಗಳ ಸದುಪಯೋಗ ಪಡೆದು ಉನ್ನತ ಸಾಧನೆ ಮಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಎಸ್.ಎಸ್. ಹೇಳಿದರು.

ಅವರು ಶನಿವಾರ ಉಜಿರೆಯಲ್ಲಿ ಟಿ.ಬಿ. ಆಸ್ಪತ್ರೆ ಆವರಣದಲ್ಲಿರುವ ಜಾಗೃತಿಸೌಧದಲ್ಲಿ ಮದ್ದಡ್ಕದಲ್ಲಿರುವ ಬ್ರೈಟ್ ಇಂಡಿಯಾ ಸಂಸ್ಥೆಯ ಆಶ್ರಯದಲ್ಲಿ ವಿಕಲಚೇತನರಿಗೆ ಸಾಧನಾ ಸಲಕರಣೆಗಳನ್ನು ವಿತರಿಸಿ ಶುಭ ಹಾರೈಸಿದರು.

ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ನೇತೃತ್ವದಲ್ಲಿ ‘ವಾತ್ಸಲ್ಯ’ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಕಿಟ್‌ಗಳ ಮೂಲಕ ಬಟ್ಟೆ, ಪೌಷ್ಟಿಕ ಆಹಾರ ಮೊದಲಾದ ಮೂಲಭೂತ ಸೌಲಭ್ಯಗನ್ನು ಒದಗಿಸಲಾಗಿದೆ. ಇಪ್ಪತ್ತು ಸಾವಿರ ನಿರ್ಗತಿಕರಿಗೆ ಮಾಸಾಶನ ನೀಡಲಾಗುತ್ತಿದೆ ಎಂದರು.

ಸಾಧನಾ ಸಲಕರಣೆಗಳ ವಿತರಣೆ: ಗಾಲಿಕುರ್ಚಿ ೮, ಊರುಗೋಲು ೬, ವಾಕರ್ ೬, ಎಲ್ಬೊ ಕ್ಲಚ್ ೯, ವಾಟರ್‌ಬೆಡ್ ೪, ಒಟ್ಟು ೩೩ ಮಂದಿ ವಿಕಲಚೇತನರಿಗೆ ಸಾಧನಾ ಸಲಕರಣೆಗಳನ್ನು ವಿತರಿಸಲಾಯಿತು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್‌ ಪಾಯಸ್‌, ಬ್ರೈಟ್‌ ಇಂಡಿಯಾದ ಸದಸ್ಯ ಜಯಶಂಕರ ಶರ್ಮಾ ಉಪಸ್ಥಿತರಿದ್ದರು. ಬ್ರೈಟ್‌ ಇಂಡಿಯಾದ ಕೋಶಾಧಿಕಾರಿ ಶಿಶುಪಾಲ ಪೂವಣಿ ಸ್ವಾಗತಿಸಿದರು. ವಜ್ರನಾಭಯ್ಯ ವಂದಿಸಿದರು.