ಅಂಗವೈಕಲ್ಯತೆ ದೌರ್ಬಲ್ಯ ಅಲ್ಲ : ಪೌರಾಯುಕ್ತ ರಾಯಪ್ಪ

| Published : Jul 11 2024, 01:39 AM IST

ಸಾರಾಂಶ

ದಿವ್ಯಾಂಗ ವ್ಯಕ್ತಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ವಿತರಣೆಗಾಗಿ ತಪಾಸಣಾ ಶಿಬಿರ ನಡೆಯಿತು. ಪೌರಾಯುಕ್ತ ರಾಯಪ್ಪ ಶಿಬಿರವನ್ನು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಅಂಗ ವೈಕಲ್ಯವನ್ನು ದುರ್ಬಲತೆ ಎಂದು ಭಾವಿಸದೇ, ತಮಗಾಗಿಯೇ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗವನ್ನು ಪಡೆದುಕೊಂಡು, ತಮ್ಮ ಕೆಲಸಗಳಿಗಾಗಿ ಯಾರ ಮೇಲೂ ಅವಲಂಬಿತವಾಗದೇ ತಾವೇ ನಿಭಾಯಿಸಲು ಶಕ್ತರಾಗಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಪೌರಾಯುಕ್ತ ರಾಯಪ್ಪ ಕರೆ ನೀಡಿದ್ದಾರೆ.

ಅವರು ಬುಧವಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿ.ಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಉಡುಪಿ (ಅನುಷ್ಠಾನ-ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ) ಹಾಗೂ ಕೃತಕ ಅಂಗಾಂಗ ತಯಾರಿಕ ಕಾರ್ಪೊರೇಷನ್ ಆಫ್ ಇಂಡಿಯಾ (ಅಲಿಂಕೋ) ಇವರ ಸಂಯುಕ್ತ ಆಶ್ರಯದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಎ.ಡಿ.ಐ.ಪಿ ಮತ್ತು ಆರ್.ವಿ.ವೈ ಯೋಜನೆಯಡಿಯಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ವಿತರಣೆಗಾಗಿ ನಡೆದ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಭಾರತ ಸರ್ಕಾರವು ದಿವ್ಯಾಂಗ ವ್ಯಕ್ತಿಗಳಿಗೆ ಹಾಗೂ ಹಿರಿಯ ನಾಗರಿಕರಿಕೆ ಅವಶ್ಯವಿರುವ ಕೃತಕ ಸಲಕರಣೆಗಳನ್ನು ತಯಾರಿಸಿ ನೀಡುವ ಉದ್ದೇಶದಿಂದ ಜಿಲ್ಲೆಯ ವಿವಿಧೆಡೆ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ವಿಶೇಷ ಚೇತನರಿಗೆ ಹಾಗೂ ದಿವ್ಯಾಂಗರಿಗೆ ಅನುಕಂಪದ ಅವಶ್ಯಕತೆ ಇರುವುದಿಲ್ಲ, ಅದರ ಹೊರತು ಅವರಿಗೆ ಉತ್ತಮ ಜೀವನ ನಡೆಸಲು ಬೇಕಾಗಿರುವ ಸೌಲಭ್ಯವನ್ನು ಕಲ್ಪಿಸುವ ಜವಾಬ್ದಾರಿ ಸಮಾಜದ ಮೇಲಿದ್ದು, ಸೌಲಭ್ಯಗಳ ಕುರಿತ ಮಾಹಿತಿಗಳು ಪ್ರತಿಯೊಬ್ಬ ಫಲನುಭವಿಗಳಿಗೂ ತಲುಪುವಂತಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಾತ್ವಿಕ್, ಅಲಿಂಕೋದ ಜಿಗಿಶಾ, ಕೆ.ಎಂ.ಸಿಯ ವೈದ್ಯಾಧಿಕಾರಿ ಡಾ. ಪಾರ್ಥ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರೆಡ್‌ಕ್ರಾಸ್ ಸಂಸ್ಥೆಯ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್‌ನ ಸದಸ್ಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ ನಿರೂಪಿಸಿದರು. ಎಮ್. ಮಧುಸೂದನ್ ವಂದಿಸಿದರು.