ಬಿಡಿಸಿಸಿ ಬ್ಯಾಂಕಿನಲ್ಲಿ ಬಣಗಳ ರಾಜಕೀಯ ನಡೆಯುತ್ತಿದೆ. ಆ ವಾತಾವರಣಕ್ಕೆ ನನಗೆ ಹೊಂದುವುದಕ್ಕೆ ಆಗುತ್ತಿಲ್ಲ. ಡಿಸಿಸಿ ಬ್ಯಾಂಕ್‌ ಬೆಳವಣಿಗೆ ವಿಚಾರ ಬೇಸರ ತಂದಿದೆ ಎಂದು ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ, ಶಾಸಕ ರಾಜು ಕಾಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಿಡಿಸಿಸಿ ಬ್ಯಾಂಕಿನಲ್ಲಿ ಬಣಗಳ ರಾಜಕೀಯ ನಡೆಯುತ್ತಿದೆ. ಆ ವಾತಾವರಣಕ್ಕೆ ನನಗೆ ಹೊಂದುವುದಕ್ಕೆ ಆಗುತ್ತಿಲ್ಲ. ಡಿಸಿಸಿ ಬ್ಯಾಂಕ್‌ ಬೆಳವಣಿಗೆ ವಿಚಾರ ಬೇಸರ ತಂದಿದೆ ಎಂದು ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ, ಶಾಸಕ ರಾಜು ಕಾಗೆ ಹೇಳಿದರು.

ಕಾಗವಾಡದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನೇರ ನಿಷ್ಠುರ ರಾಜಕಾರಣಿ, ಸುಳ್ಳು , ಚಾಡಿ ಚುಚ್ಚಿ ಅಧಿಕಾರ ಹಿಡಿದವನಲ್ಲ ಎಂದರು.ನಿಂಗರಾಜ ಕರೆನ್ನವರ ಮೇಲೆ ಶಾಸಕ ಲಕ್ಷ್ಮಣ ಸವದಿ ಹಲ್ಲೆ ನಡೆಸಿರುವ ವಿಚಾರ ಮಾಧ್ಯಮಗಳಿಂದ ನನಗೆ ಗೊತ್ತಾಗಿದೆ. ಬ್ಯಾಂಕ್‌ ಸಿಬ್ಬಂದಿ ಜಗಳದಿಂದಾಗಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈಗಾಗಲೇ ಸವದಿ ಅವರು ಹಲ್ಲೆ ಪ್ರಕರಣಕ್ಕೂ, ತಮಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಎಲ್ಲ ಘಟನೆಯನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದರು.ಡಿಸಿಸಿ ಬ್ಯಾಂಕ್‌ ಸಭೆಗೆ ಬರುವಂತೆ ಜನರಲ್ ಮ್ಯಾನೇಜರ್ ಸಂದೇಶ ನೀಡಿದ್ದರು. ಆದರೆ, ನನಗೆ ಸಭೆಗೆ ಬರಲಾಗುವುದಿಲ್ಲ ಎಂದು ತಿಳಿಸಿದ್ದೆ. ಈ ಘಟನೆ ಆಗಬಾರದಿತ್ತು. ಶಾಸಕ ಲಕ್ಷ್ಮಣ ಸವದಿ ಹಲ್ಲೆ ಮಾಡಿದ್ದರೇ ಅದು ಕೂಡ ತಪ್ಪು. ರಾಜಕೀಯ ಷಡ್ಯಂತ್ರದಿಂದ ಕರೆಣ್ಣವರ ಏನಾದರೂ ಮಾಡಿದರೆ ಅದು ಕೂಡ ತಪ್ಪು. ಮುಂದಿನ ದಿನದಲ್ಲಿ ಸಂಧಾನ ಮಾಡಿ ಮಾತುಕತೆ ಮಾಡಲಾಗುವುದು. ಈ ವಿಚಾರವಾಗಿ ಸವದಿ ನಾನು ದೂರವಾಣಿ ಮೂಲಕ ಮಾತನಾಡಿಲ್ಲ ಎಂದರು. ಶಂಕರ ನಂದೇಶ್ವರ ವರ್ಗಾವಣೆ ಹಿನ್ನೆಲೆಯಲ್ಲಿ ಎಲ್ಲ ಸ್ಥಳೀಯ ಸೊಸೈಟಿ ಮೆಂಬರ್‌ಗಳು ನನ್ನನ್ನು ಭೇಟಿ ಮಾಡಿದ್ದರು. ನಾನು ಯಾವುದೇ ತರಹದ ತಪ್ಪು ಮಾತನಾಡಿಲ್ಲ. ನಾನು ಯಾರ ಪರವಾಗಿಯೂ ಮಾತನಾಡುತ್ತಿಲ್ಲ ಎಂದರು.ಜಾರಕಿಹೊಳಿ ಹಾಗೂ ಸವದಿ ಕುಟುಂಬಗಳ ನಡುವೆ ವೈಮನಸ್ಸಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಯಾರ ಪರವಾಗಿ ಇಲ್ಲ, ಯಾವ ಬಣಗಳಲ್ಲಿ ಗುರುತಿಸಿಕೊಂಡಿಲ್ಲ. ರಾಜಕೀಯ ವೈಮನ್ಸುಗಳಿಂದ ನಾನು ದೂರನಿದ್ದೇನೆ. ನಾನು ಸಾಮಾನ್ಯ ಓರ್ವ ಶಾಸಕ. ನನಗೆ ಯಾವುದೇ ಸಚಿವ ಸ್ಥಾನವಾಗಲಿ, ದೊಡ್ಡ ಹುದ್ದೆಯಾಗಲಿ ಸಿಕ್ಕಿಲ್ಲ. ಇದರಿಂದ ನಾನು ಜನರ ಜೊತೆಗೆ ಬೆರೆತು ಸಾಮಾನ್ಯರಂತೆ ಇದ್ದೇನೆ ಎಂದರು.ಅಧಿಕಾರ ಆಸೆಗಾಗಿ ಚಾಡಿ ಚುಚ್ಚುವ ಕೆಲಸ ಮಾಡಿಲ್ಲ. ಕಳೆದ 35 ವರ್ಷಗಳಿಂದ ಸವದಿ ಬಗ್ಗೆ ನನಗೆ ಯಾವುದೇ ವೈಮನಸ್ಸಿಲ್ಲ. ನಾನು ಡಿಸಿಸಿ ಸ್ಪರ್ಧೆಯಿಂದಲೇ ಇಷ್ಟೆಲ್ಲ ಆಗುತ್ತಿದೆ ಎಂದು ನನಗೆ ಬೇಜಾರಾಗಿದೆ. ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಬಣ ರಾಜಕೀಯ ನಡೆಯುತ್ತಿದೆ. ನನಗೆ ಈ ವಾತಾವರಣ ಹೊಂದುತ್ತಿಲ್ಲ. ಏಕೆ ನಾನು ಇಲ್ಲಿ ಸ್ಪರ್ಧೆ ಮಾಡಿನೆಂದು ನನಗೆ ಬೇಸರ ಮೂಡಿಸುತ್ತಿದೆ.

-ರಾಜು ಕಾಗೆ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ, ಶಾಸಕರು.