ಸಾರಾಂಶ
ಎಸ್.ಎಂ. ಸೈಯದ್ಗಜೇಂದ್ರಗಡ: ತಾಲೂಕಿನಲ್ಲಿ ಬಗರ್ ಹುಕುಂ ಸಾಗುವಳಿಯಲ್ಲಿ ತೊಡಗಿರುವ ನೈಜ ಅರ್ಜಿದಾರರಿಗೆ ಹಕ್ಕು ಪತ್ರಗಳನ್ನು ಒದಗಿಸಬೇಕು ಎಂದು ಸರ್ಕಾರ ತಾಲೂಕು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚಿಸಿ ಅಂದಾಜು ೨ ವರ್ಷ ಸಮೀಪಿಸುತ್ತಿದ್ದರೂ ಸಹ ಸಮಿತಿ ಒಂದೇ ಸಭೆ ನಡೆಸಿ, ವರದಿಗೆ ಸೂಚಿಸಿ ಸುಮ್ಮನಾಗಿದ್ದು, ಸಕ್ರಮದ ನಿರೀಕ್ಷೆಯಲ್ಲಿದ್ದ ಫಲಾನುಭವಿಗಳ ನಿದ್ದೆ ಹಾರಿಸಿದೆ.
ತಾಲೂಕಿನಲ್ಲಿ ಹಲವಾರು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನು ಸಕ್ರಮಗೊಳಿಸಿ ಎಂದು ಮನವಿ, ಆಗ್ರಹ ಹಾಗೂ ಹೋರಾಟಗಳನ್ನು ಈ ಭಾಗದ ರೈತರು ಮಾಡುತ್ತಾ ಬರುತ್ತಿದ್ದಾರೆ. ಆದರೆ ತಾಲೂಕಿನಲ್ಲಿ ಸಕ್ರಮಕ್ಕೆ ಸಲ್ಲಿಕೆಯಾಗಿದ್ದ ೫೧೧ ಅರ್ಜಿಗಳು ತಿರಸ್ಕೃತಗೊಂಡಿವೆ. ಆದರೆ ಮರು ಸರ್ವೇಗೆ ಸೂಚಿಸಿದ ಸಮಿತಿಯು ತಾಲೂಕಿನ ಬಗರ್ ಹುಕುಂ ಸಾಗುವಳಿದಾರರ ಅಭಿವೃದ್ಧಿಗೆ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.ತಾಲೂಕಿನಲ್ಲಿನ ಬಗರ್ ಹುಕುಂ ಅಂಕಿ ಸಂಖ್ಯೆಗಳನ್ನು ಮುಂದಿಟ್ಟುಕೊಂಡು ಯಾಕೆ ಸಭೆಗಳನ್ನು ನಡೆಸುತ್ತಿಲ್ಲ ಹಾಗೂ ರೈತರ ಕುರಿತು ಗಂಭೀರವಾಗಿ ಚರ್ಚಿಸುತ್ತಿಲ್ಲ. ಆದರೆ ಸಭೆ ಅಥವಾ ಚರ್ಚೆ ಇಲ್ಲದೆ ನಿರ್ಣಯ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳನ್ನು ಹೋರಾಟಗಾರರು ಆಡಳಿತವನ್ನು ಖಾರವಾಗಿ ಪ್ರಶ್ನಿಸುತ್ತಿದ್ದಾರೆ. ತಾಲೂಕಿನಲ್ಲಿ ಸುಮಾರು ಎರಡು ವರ್ಷಗಳಿಂದ ಬಗರ್ ಹುಕುಂ ಸಾಗುವಳಿದಾರರ ಸಭೆಗಳು ನಡೆದಿಲ್ಲ ಎಂದು ಹೇಳಲಾಗಿದೆ. ಪರಿಣಾಮ ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳ ವಿಲೇವಾರಿಗೆ ಹೇಗೆ ಸಾಧ್ಯ, ಹೀಗಾಗಿ ತಾಲೂಕಾಡಳಿತ ಇನ್ನಾದರೂ ತಾಲೂಕಿನಲ್ಲಿನ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಗಳ ಪರಿಹಾರಕ್ಕೆ ತ್ವರಿತಗತಿ ಕ್ರಮಕ್ಕೆ ಮುಂದಾಗಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ.ಕೃಷಿ ಯೋಗ್ಯವಲ್ಲ ಹಾಗೂ ಪಶು ಸಂಗೋಪನೆ ಮತ್ತು ಗೋ ಮಾಳಕ್ಕೆ ಇಷ್ಟಕ್ಕೆ ಜಾಗ ಮೀಸಲಿಡಬೇಕು ಎಂಬ ಷರಾ ಬರೆದು, ಸಲ್ಲಿಸಿದ್ದ ಅರ್ಜಿಗಳನ್ನು ಸಂಬಂಧಿಸಿದ ಅಧಿಕಾರಿಗಳು ತಿರಸ್ಕರಿಸಿ ಅರ್ಜಿಗಳ ವಿಲೇವಾರಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಸರ್ಕಾರಿ ಜಮೀನು ಹಾಗೂ ಗುಡ್ಡದಲ್ಲಿ ಗಾಳಿ ವಿದ್ಯುತ್ ಉತ್ಪಾದನಾ ಫ್ಯಾನ್‌ಗಳಿಗೆ ಗೋ ಮಾಳ ಜಾಗ ಸೇರಿ ಎಂಬ ಇನ್ನಿತರ ನಿಯಮ ಹಾಗೂ ಕಾರಣಗಳು ಅಡ್ಡಿ ಬರಲಿಲ್ಲವೇ ಎಂದು ತಾಲೂಕಿನ ರೈತರು ಬಲವಾಗಿ ಆಡಳಿತವನ್ನು ಪ್ರಶ್ನಿಸುತ್ತಿದ್ದಾರೆ.ತಾಲೂಕಿನಲ್ಲಿ ಕರಾಬ್ ಹಾಗೂ ಗೋಮಾಳ ಜಮೀನು ಎನ್ನುವ ಕಾರಣಕ್ಕೆ ಬಗರ್ ಹುಕುಂ ಸಾಗುವಳಿದಾರರು ಸಲ್ಲಿಸಿದ್ದ ೫೧೧ ಅರ್ಜಿಗಳು ತಿರಸ್ಕಾರವಾಗಿದ್ದವು. ಆದರೆ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಶಾಸಕ ಜಿ.ಎಸ್.ಪಾಟೀಲ ಅವರು ತಿರಸ್ಕೃತಗೊಂಡ ಅರ್ಜಿಗಳ ಮರುಪರಿಶೀಲನೆ ಜತೆಗೆ ಸಮಗ್ರ ಮರು ಸರ್ವೇಗೆ ಸೂಚಿಸಿದ್ದರು. ಹೀಗಾಗಿ ಪುನರ್ ಸರ್ವೇ ನಡೆಸಿದ ವರದಿಯನ್ನು ಜಿಲ್ಲಾಡಳಿತಕ್ಕೆ ಈಗಾಗಲೇ ರವಾನಿಸಲಾಗಿದೆ ಎಂದು ಗಜೇಂದ್ರಗಡ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಹೇಳಿದರು.ತಾಲೂಕಿನಲ್ಲಿನ ಬಗರ್ ಹುಕುಂ ಸಾಗುವಳಿ ಮಾಡಿಕೊಂಡಿರುವ ರೈತರಿಗೆ ಹಕ್ಕುಪತ್ರಗಳನ್ನು ನೀಡಿ ಎಂದರೆ ಹತ್ತಾರು ನಿಯಮಗಳನ್ನು ಆಡಳಿತ ಹೇಳುತ್ತದೆ. ಆದರೆ ಖಾಸಗಿ ಕ್ಷೇತ್ರಕ್ಕೆ ಮಾತ್ರ ಗೋಮಾಳ, ಪಶುಸಂಗೋಪನೆ ಸೇರಿ ಇತರ ನಿಯಮಗಳು ಕಾರಣಗಳು ಕಾಣುವದಿಲ್ಲ. ಪರಿಣಾಮ ಗುಡ್ಡದಲ್ಲಿ ಗಾಳಿ ವಿದ್ಯುತ್ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಏಕೆಂದರೆ ರೈತರಿಗೆ ಭೂಮಿ ಕೊಟ್ಟರೆ ಏನು ಸಿಗುತ್ತದೆ ಎನ್ನುವ ಮನಸ್ಥಿತಿಗೆ ಆಡಳಿತ ಒಗ್ಗಿಕೊಂಡಂತಿದೆ ಎಂದು ಕರ್ನಾಟಕ ಪ್ರಾಂತ ರೈತಸಂಘದ ತಾಲೂಕಾಧ್ಯಕ್ಷ ಎಂ.ಎಸ್. ಹಡಪದ ಹೇಳಿದರು. "ಗಜೇಂದ್ರಗಡ ತಾಲೂಕಿನ ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳು ತಿರಸ್ಕಾರಗೊಂಡ ಹಿನ್ನೆಲೆಯಲ್ಲಿ ಶಾಸಕ ಜಿ.ಎಸ್. ಪಾಟೀಲ ಅವರು ಸಭೆಯಲ್ಲಿ ತಹಸೀಲ್ದಾರ್ ಅವರಿಗೆ ಗೋಮಾಳ ಜಾಗದ ಮರು ಸರ್ವೇ ಹಾಗೂ ಜಾನುವಾರುಗಳ ಗಣತಿ ನಡೆಸಿ ವರದಿ ನೀಡಲು ಹಾಗೂ ತಿರಸ್ಕಾರಗೊಂಡ ಅರ್ಜಿಗಳ ಮರುಪರಿಶೀಲನೆಗೆ ಸೂಚಿಸಿದ್ದರು. ಹೀಗಾಗಿ ತಹಸೀಲ್ದಾರ್ ಅವರು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಸಚಿವರಿಗೆ ವರದಿ ಕಳುಹಿಸಿದ್ದಾರೆ ಎಂದು ತಾಲೂಕು ಬಗರ ಹುಕುಂ ಸಮಿತಿ ತಾಲೂಕು ಸದಸ್ಯ ಶಶಿಧರ ಹೂಗಾರ, ಸಂಜಯ್ ಆರ್.ದೊಡ್ಡಮನಿ ಹೇಳಿದರು.