ಮಂಡ್ಯ, ಮದ್ದೂರು ಕೃಷ್ಣ ಅಭಿಮಾನಿಗಳಿಗೆ ನಿರಾಸೆ

| Published : Dec 12 2024, 12:31 AM IST

ಸಾರಾಂಶ

ಇಹಲೋಕ ತ್ಯಜಿಸಿದ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರ ಜಿಲ್ಲಾ ಕೇಂದ್ರಕ್ಕೆ ಬರಬಹುದೆಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಅದೇ ರೀತಿ ಪಾರ್ಥಿವ ಶರೀರವನ್ನು ಮದ್ದೂರು ಪಟ್ಟಣದೊಳಗೆ ಮೆರವಣಿಗೆ ಮಾಡಬೇಕೆಂಬ ಆಸೆಯೂ ಸ್ಥಳೀಯ ಅಭಿಮಾನಿ ವರ್ಗದಲ್ಲಿತ್ತು. ಇವೆರಡಕ್ಕೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿಗೆಯನ್ನು ಸೂಚಿಸಲೇ ಇಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪಾರ್ಥಿವ ಶರೀರ ಮಂಡ್ಯಕ್ಕೆ ಬಾರದೇ ಹೋದದ್ದು ಹಾಗೂ ಮದ್ದೂರು ಪಟ್ಟಣದಲ್ಲಿ ಪಾರ್ಥಿವ ಶರೀರದ ಮೆರವಣಿಗೆಗೆ ಅವಕಾಶ ನಿರಾಕರಿಸಿದ್ದು ಕೃಷ್ಣ ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟುಮಾಡಿತು.

ಇಹಲೋಕ ತ್ಯಜಿಸಿದ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರ ಜಿಲ್ಲಾ ಕೇಂದ್ರಕ್ಕೆ ಬರಬಹುದೆಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಅದೇ ರೀತಿ ಪಾರ್ಥಿವ ಶರೀರವನ್ನು ಮದ್ದೂರು ಪಟ್ಟಣದೊಳಗೆ ಮೆರವಣಿಗೆ ಮಾಡಬೇಕೆಂಬ ಆಸೆಯೂ ಸ್ಥಳೀಯ ಅಭಿಮಾನಿ ವರ್ಗದಲ್ಲಿತ್ತು. ಇವೆರಡಕ್ಕೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿಗೆಯನ್ನು ಸೂಚಿಸಲೇ ಇಲ್ಲ.

ಮಂಗಳವಾರ ಅಂತ್ಯಕ್ರಿಯೆ ನಡೆಯುವ ಸ್ಥಳದ ವೀಕ್ಷಣೆಗೆ ಆಗಮಿಸಿದ್ದ ಸಮಯದಲ್ಲೇ ಡಿ.ಕೆ.ಶಿವಕುಮಾರ್ ಎದುರು ಕೃಷ್ಣ ಅವರ ಅಭಿಮಾನಿಗಳು ಈ ಎರಡೂ ಬೇಡಿಕೆಗಳನ್ನಿಟ್ಟಿದ್ದರು. ಆದರೆ, ಸಮಯದ ಅಭಾವ ಎದುರಾಗುವ ಕಾರಣದಿಂದ ಜಿಲ್ಲಾಕೇಂದ್ರಕ್ಕೆ ಪಾರ್ಥಿವ ಶರೀರವನ್ನು ತರುವುದು ಮತ್ತು ಮದ್ದೂರು ಪಟ್ಟಣದಲ್ಲಿ ಮೆರವಣಿಗೆ ಮಾಡುವುದಕ್ಕೆ ಸುತರಾಂ ಒಪ್ಪಿಗೆ ಸೂಚಿಸಲಿಲ್ಲ. ಸೋಮನಹಳ್ಳಿಯಲ್ಲೇ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವಂತೆ ಮನವಿ ಮಾಡಿದ್ದರು.ಎಸ್.ಎಂ.ಕೃಷ್ಣ ಅವರು ಪ್ರಬಲ ಒಕ್ಕಲಿಗ ನಾಯಕರಾಗಿದ್ದು, ಮಂಡ್ಯ ಜಿಲ್ಲೆ ಎಸ್.ಎಂ.ಕೃಷ್ಣ ಅವರಿಗೆ ರಾಜಕೀಯ ಜನ್ಮ ನೀಡಿದ ಜಿಲ್ಲೆಯಾಗಿತ್ತು. ಇಲ್ಲಿ ಪಕ್ಷಾತೀತವಾಗಿ ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಹಿತೈಷಿಗಳು, ಸ್ನೇಹಿತರು, ಅಭಿಮಾನಿಗಳಿದ್ದಾರೆ. ಎಲ್ಲ ಜನಾಂಗದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳನ್ನು ವಿಶ್ವಾಸವನ್ನು ಕೃಷ್ಣ ಅವರು ಸಂಪಾದಿಸಿದ್ದರು. ಎಸ್.ಎಂ.ಕೃಷ್ಣ ಅವರು ಸಕ್ರಿಯ ರಾಜಕಾರಣದಲ್ಲಿದ್ದಾಗ ಎಲ್ಲರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದು, ಜಿಲ್ಲೆಯ ಬಹುತೇಕ ಜನರು ಅವರ ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹಲವರು ಮಂಡ್ಯಕ್ಕೆ ಕೃಷ್ಣರವರ ಪಾರ್ಥಿವ ಶರೀರವನ್ನು ತರುತ್ತಾರೆ ಎಂದು ನಂಬಿದ್ದರು. ಆದರೆ, ಪಾರ್ಥಿವ ಶರೀರ ಮಂಡ್ಯಕ್ಕೆ ಬಾರದೆ ಅಭಿಮಾನಿಗಳ ಉತ್ಸಾಹ ಕಮರಿದಂತಾಯಿತು.

ಪ್ರಭಾವಿ ರಾಜಕಾರಣಿಯಾದ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಕೆಲಸ ಮಾಡಿದ್ದರು. ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಗ್ಗೆವರೆಗೂ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸಾರ್ವಜನಿಕರು, ಗಣ್ಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದೇ ರೀತಿ ಮಂಡ್ಯ ನಗರದಲ್ಲಿ ಅರ್ಧದಿನವಾದರೂ ಅಥವಾ ಕೆಲ ಗಂಟೆಗಳವರೆಗಾದರೂ ಎಸ್.ಎಂ.ಕೃಷ್ಣರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದರೆ ಅಭಿಮಾನಿಗಳು, ಕಾರ್ಯಕರ್ತರಿಗೆ ಖುಷಿಯಾಗುತ್ತಿತ್ತು.

ಮಂಡ್ಯ ನಗರದಲ್ಲಿ ಕೃಷ್ಣರವರ ಪಾರ್ಥಿವ ಶರೀರ ದರ್ಶನಕ್ಕೆ ಅವಕಾಶ ಕೊಟ್ಟಿದ್ದರೆ ಮಂಡ್ಯ ಸೇರಿದಂತೆ ಜಿಲ್ಲೆಯ ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ನಾಗಮಂಗಲ, ಪಾಂಡವಪುರ, ಮಳವಳ್ಳಿ ತಾಲೂಕಿನಲ್ಲಿರುವ ಅವರ ಅಭಿಮಾನಿಗಳು, ಕಾರ್ಯಕರ್ತರು ಬಂದು ಹೋಗಲು ಅನುಕೂಲವಾಗುತ್ತಿತ್ತು. ಅದೇ ರೀತಿ ಮದ್ದೂರು ಪಟ್ಟಣಕ್ಕೂ ಕೃಷ್ಣರವರ ಪಾರ್ಥಿವ ಶರೀರ ಕೊಂಡೊಯ್ಯಲು ಅವಕಾಶ ನೀಡಬೇಕಿತ್ತು ಎಂಬುದು ಬಹುತೇಕ ಅಭಿಮಾನಿಗಳ ಒತ್ತಾಯವಾಗಿತ್ತು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮದ್ದೂರಿನ ಸೋಮನಹಳ್ಳಿಯಲ್ಲಿಯೇ ಬೆಳಗ್ಗೆ ೧೦ರಿಂದ ಮಧ್ಯಾಹ್ನ ೩ ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲಿಸುವುದಾಗಿ ಮೊದಲು ಹೇಳಿದ್ದರು. ಅದಕ್ಕಾಗಿ ಸಾರ್ವಜನಿಕರು, ಅಭಿಮಾನಿಗಳು ಅಲ್ಲಿಗೇ ಬಂದು ಕಾದುಕುಳಿತಿದ್ದರು. ಆದರೆ, ಕೃಷ್ಣರವರ ಪಾರ್ಥಿವ ಶರೀರ ಸೋಮನಹಳ್ಳಿಗೆ ಬಂದಾಗ ಮಧ್ಯಾಹ್ನ ೨ ಗಂಟೆಯಾಗಿತ್ತು. ಒಂದು ಗಂಟೆಯಷ್ಟೇ ಅಂತಿಮ ದರ್ಶನಕ್ಕೆ ಅವಕಾಶ ದೊರಕಿತು.

ಸಮಯದ ಅಭಾವದಿಂದ ಬೇಗ ವಿಧಿ-ವಿಧಾನ ಕಾರ್ಯಗಳನ್ನು ನೆರವೇರಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಇದರಿಂದ ಜಿಲ್ಲೆಯ ಬಹುತೇಕ ಎಸ್.ಎಂ.ಕೃಷ್ಣ ಅಭಿಮಾನಿಗಳು, ಸಾರ್ವಜನಿಕರು, ಕಾರ್ಯಕರ್ತರಿಗೆ ಅವರ ಅಂತಿಮ ದರ್ಶನ ಭಾಗ್ಯ ಸಿಗದೇ ನಿರಾಸೆಯುಂಟಾಯಿತು.

ಯಾವಾಗ.. ಏನೇನಾಯ್ತು..!

ಮಧ್ಯಾಹ್ನ ೧.೪೫: ನಿಡಘಟ್ಟ ತಲುಪಿದ ಎಸ್.ಎಂ.ಕೃಷ್ಣ ಪಾರ್ಥಿವ ಶರೀರವಿದ್ದ ವಾಹನ

ಮಧ್ಯಾಹ್ನ ೨.೦೮ : ಸೋಮನಹಳ್ಳಿ ಅಂತ್ಯಕ್ರಿಯೆ ಸ್ಥಳಕ್ಕೆ ಆಗಮನ

ಮಧ್ಯಾಹ್ನ ೨.೧೦ : ಎಸ್.ಎಂ.ಕೃಷ್ಣ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ

ಮಧ್ಯಾಹ್ನ ೩.೫೩: ಪೊಲೀಸ್ ಬ್ಯಾಂಡ್‌ನವರಿಂದ ರಾಷ್ಟ್ರಗೀತೆ ನುಡಿಸಿ ಸರ್ಕಾರಿ ಗೌರವ ಸಲ್ಲಿಕೆ

ಮಧ್ಯಾಹ್ನ ೩.೫೫ : ಗಣ್ಯರು, ಸ್ವಾಮೀಜಿಗಳು, ಅಧಿಕಾರಿಗಳಿಂದ ಪುಷ್ಪನಮನ ಸಲ್ಲಿಕೆ

ಸಂಜೆ ೪.೩೫: ಕುಶಾಲ ತೋಪುಗಳ ಮೂಲಕ ಮೂರು ಸುತ್ತು ಗುಂಡು ಹಾರಿಕೆ

ಸಂಜೆ ೪.೪೦: ಎರಡು ನಿಮಿಷ ಮೌನಾಚರಣೆ

ಸಂಜೆ ೪.೪೫: ಪಾರ್ಥಿವ ಶರೀರವನ್ನು ಹೂವಿನ ಪಲ್ಲಕ್ಕಿಯಲ್ಲಿಟ್ಟು ಅಂತ್ಯಸಂಸ್ಕಾರ ಸ್ಥಳಕ್ಕೆ ತರಲಾಯಿತು.

ಸಂಜೆ ೪.೫೦ಕ್ಕೆ ಚಿತೆಯ ಮೇಲೆ ಪಾರ್ಥಿವ ಶರೀರ ಇಟ್ಟು ಪೂಜೆ ಸಲ್ಲಿಕೆ

ಸಂಜೆ ೫ ಗಂಟೆಗೆ ಕೃಷ್ಣ ಮತ್ತು ಕುಟುಂಬವರ್ಗದವರಿಂದ ಅಂತಿಮ ನಮನ

ಸಂಜೆ ೫.೧೫ಕ್ಕೆ ಮೊಮ್ಮಗ ಅಮರ್ಥ್ಯಹೆಗ್ಡೆ ಕುಡಿಕೆಯೊಂದಿಗೆ ಚಿತೆಯ ಸುತ್ತ ಮೂರು ಸುತ್ತು

ಸಂಜೆ ೫.೨೩ಕ್ಕೆ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ