ಸಾರಾಂಶ
ಶಿವಮೊಗ್ಗದಿಂದ ಚನ್ನಗಿರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಹೊಳೆಹೊನ್ನೂರು-ಅರಹತೊಳಲು ಕೈಮರ ಮಧ್ಯದಲ್ಲಿ ನಾಲ್ಕು ಬೃಹತ್ ಮರಗಳು ಸಂಪೂರ್ವಾಗಿ ಒಣಗಿ ರಸ್ತೆಗೆ ಬಾಗಿ ನಿಂತಿವೆ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಸರ್ಕಾರದ ಯಾವುದಾದರೂ ಅಭಿವೃದ್ಧಿ ಕಾರ್ಯಗಳಿಗೆ ಚೆನ್ನಾಗಿರುವ ಮರಗಳನ್ನೇ ಬಲಿ ಕೊಡುವ ಇಲಾಖೆ, ಅದೇ ಸಾರ್ವಜನಿಕರಿಗೆ ತೊಂದರೆಯಾಗುವಂತ ಒಣಗಿದ ಅನುಪಯುಕ್ತ ಮರಗಳನ್ನು ತೆರವು ಮಾಡಲು ಮೀನ-ಮೇಷ ಎಣಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಶಿವಮೊಗ್ಗದಿಂದ ಚನ್ನಗಿರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಹೊಳೆಹೊನ್ನೂರು-ಅರಹತೊಳಲು ಕೈಮರ ಮಧ್ಯದಲ್ಲಿ ನಾಲ್ಕು ಬೃಹತ್ ಮರಗಳು ಸಂಪೂರ್ವಾಗಿ ಒಣಗಿ ರಸ್ತೆಗೆ ಬಾಗಿ ನಿಂತಿವೆ. ಪ್ರತಿನಿತ್ಯ ಸಾವಿರಾರು ವಾಹನಗಳು ಹೆದ್ದಾರಿಯಲ್ಲಿ ಓಡಾಡುತ್ತವೆ. ಆದರೆ ಅವರೆಲ್ಲಾ ಈ ಮರಗಳ ಬಳಿ ಬರುವಾಗ ಜೀವವನ್ನು ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿ ಕಾರ್ಮಿಕರು, ದನ ಮೇಯಿಸುವವರು ಸೇರಿ ನೂರಾರು ದಾರಿಹೋಕರು ರಸ್ತೆಯಲ್ಲಿ ನಡೆದಾಡಲು ಭಯ ಪಡುತ್ತಿದ್ದಾರೆ.
ಈ ಒಣಗಿರುವ ಬೃಹತ್ ಮರಗಳ ಪಕ್ಕದಲ್ಲಿಯೇ 11 ಸಾವಿರ ಕಿ.ಲೋ.ವ್ಯಾಟ್ ಸಾಮರ್ಥ್ಯದ ವಿದ್ಯುತ್ ಲೈನ್ ಹಾದು ಹೋಗಿದೆ. ಯಾವುದೇ ಕ್ಷಣದಲ್ಲಾದರೂ ಮರಗಳು ಗಾಳಿ ಮಳೆಗೆ ಮುರಿದು ಬೀಳುವ ಸಾಧ್ಯತೆ ಇದೆ. ಕೆಲವೊಂದು ಬಾರಿ ಒಣ ಮರದ ರೆಂಬೆಗಳು ಬೈಕ್ ಸವಾರರ ಮೇಲೆ ಬಿದ್ದಿರುವ ಉದಾಹರಣೆಗಳು ಇವೆ.ಗಮನ ಹರಿಸುವುದೇ ಅರಣ್ಯ ಇಲಾಖೆ
ನಾಲ್ಕು ದೊಡ್ಡ ಮರಗಳು ಒಂದೇ ಜಾಗದಲ್ಲಿ ಒಣಗಿ ನಿಂತು ವರ್ಷಗಳೇ ಕಳೆಯುತ್ತಾ ಬಂದರೂ ಅರಣ್ಯ ಇಲಾಖೆಯವರು ಮರಗಳನ್ನು ಕಡಿಯದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಾವು ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಹೊಳೆಹೊನ್ನೂರಿನಿಂದ ಚನ್ನಗಿರಿಯ ಮಾರ್ಗ ಮಧ್ಯದಲ್ಲಿ ಸುಮಾರು 16 ಬೃಹತ್ ಮರಗಳು ಹೆದ್ದಾರಿಗೆ ಬಾಗಿ ನಿಂತಿವೆ. ಅದರಲ್ಲಿ ಐದಾರು ಮರಗಳು ಸಂಪೂರ್ಣವಾಗಿ ಒಣಗಿವೆ. ಯಾವ ಸಮಯಲ್ಲಿ ಮುರಿದು ಬೀಳುತ್ತವೋ ಗೊತ್ತಿಲ್ಲ. ಇದರಿಂದ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಆದ್ದರಿಂದ ಅರಣ್ಯ ಇಲಾಖೆಯವರು ಆದಷ್ಟು ಬೇಗ ಮರಗಳ ಕಡಿತಲೆ ಮಾಡಿಕೊಡಬೇಕು.ಚಂದ್ರಪ್ಪ, ಮೆಸ್ಕಾಂ ಎಂಜಿನಿಯರ್
ಚಲಿಸುತ್ತಿರುವ ವಾಹನಗಳ ಮೇಲೆ ಒಣಗಿದ ಮರದ ರೆಂಬೆಗಳು ಬಿದ್ದರೆ ಏನಾಗುವುದೆಂದು ಊಹಿಸಿಕೊಳ್ಳುವುದೂ ಕಷ್ಟವಾಗಿದೆ. ಈಗಿರುವಾಗ ಅರಣ್ಯ ಇಲಾಖೆಯಾಗಲೀ ಅಥವಾ ಕೆಇಬಿಯವರಾಗಲೀ ಒಣಗಿದ ಮರಗಳನ್ನು ತಕ್ಷಣ ಕಡಿಯಬೇಕು. ಇಲ್ಲವಾದರೆ ಆಗುವ ಅನಾಹುತಕ್ಕೆ ಇಲಾಖೆಯವರೆ ನೇರ ಹೊಣೆಯಾಗಬೇಕಾಗುತ್ತದೆ.ಎಸ್.ಪಿ.ಅರುಣ್ ಪಾಲಂಕರ್. ಹೊಳೆಹೊನ್ನೂರು