ಸಾರಾಂಶ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‍ಡಿಆರ್‌ಎಫ್) ಸಹಯೋಗದೊಂದಿಗೆ ನಗರದ ಎ.ಜೆ. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ವಿಪತ್ತು ನಿರ್ವಹಣೆ ತರಬೇತಿ ಕಾರ್ಯಕ್ರಮ ನಡೆಯಿತು.
ಅಪರ ಜಿಲ್ಲಾಧಿಕಾರಿ ರಾಜು ಕೆ ಉದ್ಘಾಟಿಸಿ, ವಿಪತ್ತು ನಿರ್ವಹಣೆಯಲ್ಲಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಹಂಚಿಕೆಯ ಜವಾಬ್ದಾರಿಯನ್ನು ತಿಳಿಸಿ, ಸಮುದಾಯಗಳನ್ನು ರಕ್ಷಿಸುವಲ್ಲಿ ವಿಪತ್ತು ಸನ್ನದ್ಧತೆಯ ಮಹತ್ವವನ್ನು ಹೇಳಿದರು.ಸಂಸ್ಥೆಯ ಡೀನ್ ಡಾ. ಅಶೋಕ್ ಹೆಗ್ಡೆ, ಎಸೋಸಿಯೇಟ್ ಡೀನ್ ಡಾ. ಸುಶಿತ್, ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಸಚ್ಚಿದಾನಂದ, ಎಚ್‍ಒಡಿ ಡಾ. ಸಂಜೀವ್ ಬಡಿಗೇರ್, ಪ್ರಾಧ್ಯಾಪಕ ಡಾ. ಮರಿಯಾ ಎನ್. ಮತ್ತು ಪ್ರಾಧ್ಯಾಪಕ ಮತ್ತು ಸಂಘಟನಾ ಕಾರ್ಯದರ್ಶಿ ಡಾ. ಪ್ರದೀಪ್ ಸೇನಾಪತಿ ಇದ್ದರು.
ತರಬೇತಿಯಲ್ಲಿ ವೈಯಕ್ತಿಕ ರಕ್ಷಣೆ, ಬಲಿಪಶುಗಳ ರಕ್ಷಣೆ ಮತ್ತು ಸಾರಿಗೆ ತಂತ್ರಗಳು, ವೈದ್ಯಕೀಯ ಪ್ರತಿಕ್ರಿಯೆ, ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು ತುರ್ತುಸ್ಥಿತಿಗಳನ್ನು ಎದುರಿಸುವ ಕುರಿತ ಪ್ರಾಯೋಗಿಕ ಪ್ರದರ್ಶನ ನಡೆಯಿತು.ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ತಿಮ್ಮಯ್ಯ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜಯ ಕುಮಾರ್, ಇನ್ಸ್‌ಪೆಕ್ಟರ್ ಶಾಂತಿ ಲಾಲ್ ಜತಿಯಾ ನೇತೃತ್ವದ ಎನ್‍ಡಿಆರ್‌ಎಫ್ ತಂಡದ 10ನೇ ಬೆಟಾಲಿಯನ್ ಸೇರಿದಂತೆ ಗಣ್ಯರು ಇದ್ದರು. ವೈದ್ಯಕೀಯ, ದಂತ, ನರ್ಸಿಂಗ್, ಭೌತಚಿಕಿತ್ಸೆ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನ ವಿಭಾಗಗಳಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿದಂತೆ 800ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.