ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತೆರೆದ ಕೊಳವೆ ಬಾವಿಗಳಿಗೆ ಯಾವುದೇ ಮಕ್ಕಳು ಹಾಗೂ ವ್ಯಕ್ತಿಗಳು ಬಿದ್ದು ಪ್ರಾಣ ಹಾನಿ ಆಗುವ ಪ್ರಸಂಗಗಳು ಜಿಲ್ಲೆಯಲ್ಲಿ ಜರುಗಬಾರದು. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಿ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಮಾನ್ಸೂನ್ ಮಳೆ ಬರುವವರೆಗೂ ಮುಂದಿನ 3ರಿಂದ 4 ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ನೀರು ಪೂರೈಕೆಯಲ್ಲಿ ವೆತ್ಯಯ ಆಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಕಾರ್ಯಪಾಲಕ ಅಭಿಯಂತರರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಲಜೀವನ್ ಮಿಷನ್ ಅನುಷ್ಠಾನದ ಅಭಿಯಂತರು ಯೋಜನೆಯನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕು.

ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸಿದ ಮೇಲೆ ಕೊಳವೆ ಬಾವಿಯಿಂದ ನೀರು ಹೊರತೆಗೆದ ನಂತರವೇ ಗ್ರಾಮ ಪಂಚಾಯಿತಿಗಳ ಸುಪರ್ದಿಗೆ ನೀಡಬೇಕು. ಜಲಜೀವನ್ ಯೋಜನೆಯಡಿ ಅನುಮೋದನೆ ಆಗಿರುವ ಕೊಳವೆ ಬಾವಿಗಳನ್ನು ಕೊರೆಸಿ ನೀರು ಪೂರೈಸುವಂತಹ ಕೆಲಸವಾದರೆ ನೀರಿನ ಸಮಸ್ಯೆಯೇ ಉದ್ಬವವಾಗುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಯೋಜನಾ ಅಭಿಯಂತರರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯ 19 ಗ್ರಾಮ ಪಂಚಾಯಿತಿಗಳ 23 ಗ್ರಾಮಗಳಿಗೆ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇದ್ದು, ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 66 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಖಾಸಗಿ ಕೊಳವೆ ಬಾವಿ ಮಾಲಿಕರ ಸಹಕಾರವನ್ನು ಪಡೆದು ಒಪ್ಪಂದವನ್ನು ಮಾಡಿಕೊಳ್ಳಬೇಕು. ನಗರಾಡಳಿತ ಪ್ರದೇಶದಲ್ಲಿಯೂ ಸಹ 14 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 9 ಖಾಸಗಿ ಟ್ಯಾಂಕರ್ ಮೂಲಕ ಹಾಗೂ 10 ಖಾಸಗಿ ಕೊಳವೆ ಬಾವಿ ಮೂಲಕ ಸದ್ಯಕ್ಕೆ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 21 ವಾರ್ಡ್ ಗಳಲ್ಲಿ ಸಮಸ್ಯೆ ಎದುರಾಗಬಹುದಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಮಂಜುನಾಥ್, ಸಿಬ್ಬಂದಿ ಇದ್ದರು. ಸಿಕೆಬಿ-5 ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿದರು.