ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನಿಂದ ವಿದ್ಯಾರ್ಥಿನಿಧಿ ವಿತರಣೆ

| Published : Feb 04 2024, 01:30 AM IST

ಸಾರಾಂಶ

ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ 11ನೇ ವರ್ಷದ ‘ವಿದ್ಯಾರ್ಥಿನಿಧಿ ವಿತರಣೆ’ ಕಾರ್ಯಕ್ರಮ ಬನ್ನಂಜೆ ಶ್ರೀ ನಾರಾಯಣಗುರು ಶಿವಗಿರಿ ಸಭಾಭವನದಲ್ಲಿ ಶನಿವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ವತಿಯಿಂದ 11ನೇ ವರ್ಷದ ‘ವಿದ್ಯಾರ್ಥಿನಿಧಿ ವಿತರಣೆ’ ಕಾರ್ಯಕ್ರಮ ಬನ್ನಂಜೆ ಶ್ರೀ ನಾರಾಯಣಗುರು ಶಿವಗಿರಿ ಸಭಾಭವನದಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮವನ್ನು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಉದ್ಘಾಟಿಸಿ, ಒಂದು ಸಂಸ್ಥೆಯು ಲಾಭದಾಯಕವಾಗಿ ಬೆಳೆದು ಸಮಾಜದ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದರೆ, ಆ ಸಂಸ್ಥೆ ನೂರಾರು ವರ್ಷಗಳ ಕಾಲ ಬದುಕುತ್ತದೆ. ಸಮಾಜದಲ್ಲಿನ ದುಡಿಯುವ ವರ್ಗಕ್ಕೆ ಸಾಲ ಸೌಲಭ್ಯದ ಜೊತೆ ಉದ್ಯೋಗ ಕಲ್ಪಿಸಿದ ಸಂಸ್ಥೆ 70 ವರ್ಷದಿಂದ ಬಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್ ಶಿಪ್ ನೀಡುತ್ತಾ ಬಂದಿರುವುದು ಉತ್ತಮ ಕಾರ್ಯ. ಈ ನಿಟ್ಟಿನಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಸಾಮಾಜಿಕ ಬದ್ಧತೆ ಶ್ಲಾಘನೀಯವಾದದ್ದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀರಾಮ್ ಫೈನಾನ್ಸ್ ವಿಭಾಗೀಯ ವ್ಯವಹಾರ ಮುಖ್ಯಸ್ಥ ಶರಶ್ಚಂದ್ರ ಭಟ್ ಕಾಕುಂಜೆ ಮಾತನಾಡಿ, ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವವರೂ ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉತ್ತಮ ಉದ್ಯೋಗ ಸಿಗಬೇಕು ಎಂಬ ಮಹತ್ತರವಾದ ಉದ್ದೇಶದಿಂದ ಶ್ರೀರಾಮ್ ಫೈನಾನ್ಸ್ ಆರಂಭಗೊಂಡಿತ್ತು. ಇಂದು ಸಂಸ್ಥೆ ದೇಶದಲ್ಲಿ 76 ಲಕ್ಷ ಗ್ರಾಹಕರನ್ನು ಹಾಗೂ 300ಕ್ಕೂ ಅಧಿಕ ಶಾಖೆಗಳನ್ನು ಹೊಂದಿದ್ದು, 70,000 ಸಾವಿರ ಸಿಬ್ಬಂದಿ ಉದ್ಯೋಗ ಪಡೆದುಕೊಂಡಿದ್ದಾರೆ ಹಾಗೂ ಶ್ರೀರಾಮ್ ಫೈನಾನ್ಸ್ 2.5 ಲಕ್ಷ ಕೋಟಿ ರು. ವಹಿವಾಟು ಹೊಂದಿದೆ ಎಂದರು.

ಈ ಸಂದರ್ಭದಲ್ಲಿ ಸಾಯಿ ರಾಧಾ ಗ್ರೂಪ್ ಆಫ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಮನೋಹರ ಶೆಟ್ಟಿ, ಉದ್ಯಮಿ ದಿನೇಶ್ ಪುತ್ರನ್, ಉಡುಪಿ ಸ್ನೇಹ ಟ್ಯೂಟೆರಿಯಲ್ ಕಾಲೇಜಿನ ಮುಖ್ಯಸ್ಥ ಉಮೇಶ್ ನಾಯ್ಕ್, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಮತ್ತು ವಕೀಲ ಪ್ರವೀಣ್ ಪೂಜಾರಿ, ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಸದಾಶಿವ ಅಮೀನ್, ನಾಗರಾಜ್ ಬಿ., ಉಡುಪಿ ವಿಭಾಗದ ಆರ್‌ಬಿಎಚ್ ಗಣಪತಿ ನಾಯ್ಕ್, ಸುರೇಶ್ ಎಸ್. ಉಪಸ್ಥಿತರಿದ್ದರು.

****