ಸಾರಾಂಶ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ತಾಲೂಕಿನ ಅಧಿಕೃತ ಬಿತ್ತನೆ ಬೀಜ ಹಾಗೂ ರಸ ಗೊಬ್ಬರ ಮಾರಾಟಗಾರರು, ಸೇರಿದಂತೆ ಇತರೆ ವ್ಯಕ್ತಿಗಳು ನಕಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಔಷಧಿಗಳನ್ನು ಮಾರಾಟ ಮಾಡಿದರೇ, ಆ ಅಂಗಡಿಗಳ ಪರವಾನಿಗಿ ರದ್ದು ಮಾಡುವ ಜತೆಗೆ, ಇವರ ಮೇಲೆ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು, ಕೃಷಿ ಉಪ ನಿರ್ದೇಶಕ ನಯೀಂ ಪಾಷ ಪಾಷ ಎಚ್ಚರಿಕೆ ನೀಡಿದ್ದಾರೆ.ಇಲ್ಲಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕಚೇರಿಯಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ, ಬಿತ್ತನೆ ಬೀಜ, ಕೀಟ ನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾರಾಟಗಾರರ ಅಂಗಡಿಗಳಲ್ಲಿ ರೈತರಿಗೆ ಕಾಣುವ ಹಾಗೆ ತಮ್ಮ ಅಂಗಡಿಗಳಲ್ಲಿ ಮರಾಟ ಮಾಡುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟ ನಾಶಕಗಳ ಮಾಹಿತಿ ಹಾಗೂ ದರ ಪಟ್ಟಿಯನ್ನು ಕಡ್ಡಾಯವಾಗಿ ಹಾಕಬೇಕು, ನಿತ್ಯ ಸ್ಟಾಕ್ ಮಾಹಿತಿ ಕೂಡಾ ಹಾಕಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ರೈತರು ಬರಗಾಲಕ್ಕೆ ತುತ್ತಾಗಿ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಯಾವುದೇ ಕಾರಣಕ್ಕೂ ಬೀಜ, ರಸಗೊಬ್ಬರದ ವಿಚಾರದಲ್ಲಿ ಮೋಸ ಮಾಡಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ, ಅಂತಹ ಪ್ರಕರಣಗಳು ಕಂಡು ಬಂದರೇ, ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ರೈತರು ಖರೀದಿ ಮಾಡಿದ ಪ್ರತಿಯೊಂದು ವಸ್ತುಗಳಿಗೂ ರಸೀದಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಹೇಳಿದರು.ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೆಲ ವ್ಯಕ್ತಿಗಳು ನಕಲಿ ಮೆಕ್ಕೆಜೋಳ ಬೀಜ ಮಾರಾಟ ಕುರಿತು ದೂರುಗಳಿವೆ. ಈ ಕುರಿತು ಕೃಷಿ ಇಲಾಖೆ ಖಂಡಿತ ಕ್ರಮ ಕೈಗೊಳ್ಳುತ್ತದೆ. ರೈತರೂ ಯಾವುದೇ ಕಾರಣಕ್ಕೂ ನಕಲಿ ಮೆಕ್ಕೆಜೋಳ ಖರೀದಿ ಮಾಡಬೇಡಿ, ಇದರಿಂದ ಇಳುವರಿ ಕುಂಠಿತ ಜತೆಗೆ ಬೆಳೆ ರೋಗಕ್ಕೆ ತುತ್ತಾಗಿ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ನಕಲಿ ಬೀಜ ಮಾರಾಟಗಾರರು ಕಂಡು ಬಂದಲ್ಲಿ ಕೃಷಿ ಇಲಾಖೆಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಮದ್ ಅಶ್ರಫ್ ಮಾತನಾಡಿ, ಮಳೆಗಾಲದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಬೇಡಿಕೆ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಮಾರಾಟಗಾರರು ದುಬಾರಿ ಬೆಲೆಗೆ ಮಾರಾಟ ಸೇರಿದಂತೆ, ಏನು ಬೇಕಾದರೂ ಮಾಡಬಹುದು ಎಂಬ ಭ್ರಮೆಯನ್ನು ಬಿಟ್ಟು, ಸರ್ಕಾರ ನಿಗಧಿ ಮಾಡಿರುವ ಎಂಆರ್‌ಪಿ ಬೆಲೆಯಲ್ಲಿ ಮಾರಾಟ ಮಾಡಬೇಕೆಂದು ಮಾರಾಟಗಾರರಿಗೆ ಹೇಳಿದರು.ಮಳೆ ಬಂದಾಗ ಸಹಜವಾಗಿಯೇ ರೈತರಿಂದ ರಸಗೊಬ್ಬರ ಬೇಡಿಕೆ ಹೆಚ್ಚಾಗುತ್ತದೆ, ಅದನ್ನೇ ಬಂಡವಾಳ ಮಾಡಿಕೊಂಡು, ಮಾರಾಟಗಾರರು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೇ ಕ್ರಮ ಕೈಗೊಳ್ಳಬೇಕಾಗುತ್ತದೆ. ರೈತರ ಬೇಡಿಕೆಗೆ ತಕ್ಕಂತೆ ರಸಗೊಬ್ಬರವನ್ನು ಪೂರೈಕೆ ಮಾಡಲಾಗುತ್ತಿದೆ ಎಂದ ಅವರು, ರೈತರಿಗೆ ಡಿಎಪಿ ಬಿಟ್ಟು ಉಳಿದ ಪೋಷಕಾಂಶಗಳವುಳ್ಳ, ರಸಗೊಬ್ಬರ ಬಳಕೆ ಮಾಡುವಂತೆ ಮಾರಾಟಗಾರರು ಮನವೊಲಿಸುವ ಕೆಲಸ ಮಾಡಬೇಕಿದೆ ಎಂದರು.
ರೈತ ಸಂಘದ ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ರೈತರು ಬರ ಬಿದ್ದು ಸಂಕಷ್ಟದಲ್ಲಿದ್ದಾರೆ. ಜಮೀನು ಬಿತ್ತನೆ ಮಾಡಲು ಸಾಲ ಮಾಡಿ ಬೀಜ, ಗೊಬ್ಬರ ಖರೀದಿ ಮಾಡುತ್ತಿದ್ದಾರೆ, ರೈತರಿಗೆ ಯಾವ ಅಂಗಡಿ ಮಾಲೀಕರೂ ಮೋಸ ಮಾಡಬೇಡಿ ಎಂದರು.ಬೀಜ ರಸಗೊಬ್ಬ ಮಾರಾಟಗಾರರ ಸಂಘದ ಕಾರ್ಯದರ್ಶಿ ಮಂಜುನಾಥ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಮಂಜುನಾಥ ಸೇರಿದಂತೆ ಇತರರು ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಕೊಟ್ಟೂರು ಪಟ್ಟಣದಲ್ಲಿ ರಸಗೊಬ್ಬರ ರೇಟ್ ಪಾಯಿಂಟ್ ಸ್ಥಾಪನೆ ಮಾಡುವಂತೆ ಒತ್ತಾಯಿಸಿ, ಕೃಷಿ ಉಪ ನಿರ್ದೇಶಕರಿಗೆ, ಅಖಂಡ ಕರ್ನಾಟಕ ರೈತ ಸಂಘದ ಸದಸ್ಯರು ಮನವಿ ಪತ್ರ ಸಲ್ಲಿಸಿದರು.