ಸಾರಾಂಶ
ಬೆಳಗಾವಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳ ನಿರ್ವಹಣೆಯಲ್ಲಿ ದೂರುಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ : ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳ ನಿರ್ವಹಣೆ ಕುರಿತು ದೂರುಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಭವನದಲ್ಲಿ ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿರು. ನಿಯಮಾನುಸಾರ ಇಲಾಖೆಯ ವಸತಿ ನಿಲಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು, ಹೊಸ ವಸತಿ ನಿಲಯ ನಿರ್ಮಾಣಕ್ಕೆ ನಿವೇಶನ ಪಡೆಯಲು ಹಾಗೂ ಈಗಾಗಲೇ ಇಲಾಖೆ ವಶದಲ್ಲಿರುವ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.
ಹೊಸದಾಗಿ ಮಂಜೂರಾದ ವಸತಿ ನಿಲಯಗಳಿಗೆ ನಿವೇಶನ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದು, ಕಟ್ಟಡಗಳ ತುರ್ತು ದುರಸ್ತಿ ಇದ್ದಲ್ಲಿ ಅನಿರ್ಬಂಧಿತ ಅನುದಾನದಡಿ ದುರಸ್ತಿಗೆ ಕ್ರಮ ಜರುಗಿಸಲು ಆಯಾ ತಾಪಂ ಇಒಗಳಿಗೆ ಪ್ರಸ್ತಾವನೆ ಸಲ್ಲಿಸಿ ಕಟ್ಟಡಗಳ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳುವುದು, ಹೊರಗುತ್ತಿಗೆ ಸಿಬ್ಬಂದಿಗೆ ನಿಯಮಿತವಾಗಿ ವೇತನ ಪಾವತಿಸಬೇಕು. ಖರ್ಚುವೆಚ್ಚವನ್ನು ಕ್ರಮಬದ್ಧವಾಗಿ ಇಟ್ಟುಕೊಳ್ಳುವಂತೆ ಸೂಚನೆ ನೀಡಿದರು.
ಇಲಾಖೆಯ ಆರ್ಥಿಕ ಪ್ರಗತಿ ಕಡಿಮೆಯಾಗಿರುವುದನ್ನು ಗಮನಿಸಿದ್ದು, ಇಲಾಖೆಯ ಎಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿ ಆರ್ಥಿಕ ಪ್ರಗತಿ ಸಾಧಿಸಬೇಕು. ಇಲಾಖೆಯ ಪ್ರಮುಖ ಯೋಜನೆಯಾದ ವಿದ್ಯಾಸಿರಿ ಮತ್ತು ಶುಲ್ಕ ವಿನಾಯಿತಿ ಯೋಜನೆಗಳ ಫಲಾನುಭವಿಗಳ ಆಧಾರ್ ಸೀಡಿಂಗ್ ಹಾಗೂ ಡಾಟಾ ಪರಿಶೀಲಿಸಿ ಮಂಜೂರಾತಿಗೆ ತುರ್ತು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು
ಪ್ರಗತಿ ಪರಿಶೀಲನಾ ಸಭೆಗೆ ಗೈರು ಹಾಜರಾದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ಮುಂದಿನ ಪ್ರಗತಿ ಪರಿಶೀಲನೆ ಸಭೆ ಒಳಗಾಗಿ ಆರ್ಥಿಕ ಪ್ರಗತಿ ಸಾಧಿಸಿ, ಎಲ್ಲ ಅವಶ್ಯಕ ಮಾಹಿತಿಗಳ ಬುಕ್ ಲೆಟ್ ನೊಂದಿಗೆ ಸಭೆಗೆ ಹಾಜರಿರಲು ಸಂಬಂಧಿಸಿದ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ಅಬ್ದುಲ್ ರಶೀಸ್ ಮಿರಜನ್ನವರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಬಸವರಾಜ ಕುರಿಹುಲಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಪ್ರಿಯಾ ಕಡೆಚೂರ ಇತರರು ಇದ್ದರು.
;Resize=(128,128))
;Resize=(128,128))