ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನಲ್ಲಿ ಯೂರಿಯಾ ಸೇರಿದಂತೆ ಯಾವುದೇ ರಸಗೊಬ್ಬರದ ಕೊರತೆಯಿಲ್ಲ. ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಜಿ.ಆದರ್ಶ ರಸಗೊಬ್ಬರ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಕೃಷಿ ಇಲಾಖೆಯಿಂದ ರಸಗೊಬ್ಬರಗಳ ಸಮರ್ಪಕ ನಿರ್ವಹಣೆ ಹಾಗೂ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳ ಬಳಕೆಗೆ ತಡೆಗಟ್ಟುವ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ರೈತರು ಕೃಷಿ ಚಟುವಟಿಕೆ ಕಾರ್ಯ ಆರಂಭಿಸುತ್ತಿದ್ದಾರೆ. ಹಾಗಾಗಿ ಮಾರಾಟಗಾರರು ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರಗಳ ಸಮರ್ಪಕ ನಿರ್ವಹಣೆ ಮಾಡಬೇಕು ಎಂದರು.ಕೃಷಿ ಭೂಮಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಯೂರಿಯಾ ಮತ್ತು ರಾಸಾಯನಿಕ ಯುಕ್ತ ರಸಗೊಬ್ಬರ ಬಳಕೆ ಮಾಡುವುದರಿಂದ ಆಗಬಹುದಾದ ದುಷ್ಪರಿಣಾಮ ಕುರಿತು ರೈತರಿಗೆ ಅರಿವು ಮೂಡಿಸಬೇಕು. ಹಸಿರೆಲೆ, ಕೊಟ್ಟಿಗೆ ಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಸುವುದರಿಂದ ಭೂಮಿ ಫಲವತ್ತತೆ ಹೆಚ್ಚಿಸಬಹುದಾಗಿದೆ. ರಸಗೊಬ್ಬರ ಮಾರಾಟಗಾರರು ಈ ಬಗ್ಗೆಯೂ ರೈತರ ಮನವೋಲಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಜಂಟಿ ಕೃಷಿ ನಿದೇಶಕ ಅಶೋಕ್ ಮಾತನಾಡಿ, ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ದಾಸ್ತಾನಿದೆ. ರೈತರು ತಾವು ಬೆಳೆಯುವ ಯಾವುದೇ ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಯೂರಿಯಾ ಬಳಸುತ್ತಿದ್ದಾರೆ. ಯೂರಿಯಾ ಗೊಬ್ಬರಕ್ಕೆ ಪರ್‍ಯಾಯವಾಗಿ ಪೊಟ್ಯಾಷ್‌ಯುಕ್ತ ಕಾಂಪ್ಲೆಕ್ಸ್ ಗೊಬ್ಬರಗಳನ್ನು ಬಳಸಿದರೆ ಅಧಿಕ ಇಳುವರಿ ಜೊತೆಗೆ ಹೆಚ್ಚು ಲಾಭವೂ ಸಿಗಲಿದೆ ಎಂದು ರೈತರಿಗೆ ತಿಳಿವಳಿಕೆ ನೀಡಬೇಕು ಎಂದರು.ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್ ಮಾತನಾಡಿ, ಎಲ್ಲಾ ಪಿಒಎಸ್ ಯಂತ್ರದಲ್ಲಿರುವ ದಾಸ್ತಾನಿಗೂ ಮತ್ತು ಭೌತಿಕವಾಗಿರುವ ದಾಸ್ತಾನಿಗೂ ತಾಳೆಯಾಗಬೇಕು. ಸಣ್ಣ ಪುಟ್ಟ ವ್ಯತ್ಯಾಸವಿದ್ದರೂ ಕೂಡ ಅಂತಹ ಮಾರಾಟಗಾರರಿಗೆ ಯಾವುದೇ ರಸಗೊಬ್ಬರಗಳನ್ನು ಪೂರೈಕೆ ಮಾಡುವುದಿಲ್ಲ ಮತ್ತು ಸದರಿ ಮಾರಾಟಗಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಹಾಗಾಗಿ ರಸಗೊಬ್ಬರ ಮಾರಾಟದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಪಾಂಡವಪುರ ಉಪವಿಭಾಗದ ಕೃಷಿ ನಿರ್ದೇಶಕ ಭಾನುಪ್ರಕಾಶ್ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಉಪಯುಕ್ತತೆಗಳ ಕುರಿತು ಮಾಹಿತಿ ನೀಡಿದರು. ರಸಗೊಬ್ಬರ ಮತ್ತು ಕೀಟನಾಶಕಗಳ ಕಾಯ್ದೆ ಕಾನೂನುಗಳ ಕುರಿತು ಜಾಗೃತದಳದ ಸಹಾಯಕ ಕೃಷಿ ನಿರ್ದೇಶಕ ಚನ್ನಕೇಶವಮೂರ್ತಿ ವಿವರಿಸಿದರು.ಆರಕ್ಷಕ ವೃತ್ತ ನಿರೀಕ್ಷಕ ನಿರಂಜನ್, ಕೃಷಿ ಅಧಿಕಾರಿ ಯುವರಾಜ್ ಸೇರಿದಂತೆ ತಾಲೂಕಿನ ರಸಗೊಬ್ಬರಗಳ ಸಗಟು ಮತ್ತು ರೀಟೈಲ್ ಮಾರಾಟಗಾರರು ಮತ್ತು ರೈತರು ಇದ್ದರು.