ಕರಾವಳಿ ಬಿಜೆಪಿ ಕಾರ್ಯಕರ್ತರಿಗೆ ಶಿಸ್ತು, ಶಿಕ್ಷೆಯೂ ಜಾಸ್ತಿ: ರಘುಪತಿ ಭಟ್‌

| Published : May 27 2024, 01:03 AM IST / Updated: May 27 2024, 10:03 AM IST

ಕರಾವಳಿ ಬಿಜೆಪಿ ಕಾರ್ಯಕರ್ತರಿಗೆ ಶಿಸ್ತು, ಶಿಕ್ಷೆಯೂ ಜಾಸ್ತಿ: ರಘುಪತಿ ಭಟ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿರುವ ರಘುಪತಿ ಭಟ್ಟರನ್ನು ಪಕ್ಷ ಉಚ್ಛಾಟಿಸಿದ್ದು, ಈ ಬಗ್ಗೆ ಅವರು ಭಾನುವಾರ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

  ಉಡುಪಿ :  ಕರಾವಳಿಯ ವಿಚಾರದಲ್ಲಿ ಬಿಜೆಪಿ ಮನ ಬಂದಂತೆ ನಡೆದುಕೊಳ್ಳುತ್ತಿದೆ. ಕರಾವಳಿ ಬಿಜೆಪಿ ಕಾರ್ಯಕರ್ತರಿಗೆ ಶಿಸ್ತು ಜಾಸ್ತಿ, ಶಿಕ್ಷೆಯೂ ಜಾಸ್ತಿ. ಉಡುಪಿಯಲ್ಲಿ ನಾಲ್ವರು ಸಿಟ್ಟಿಂಗ್ ಎಂಎಲ್ಎಗಳನ್ನು ಬದಲಿಸಲಾಯಿತು. ಇದನ್ನೇ ಶಿವಮೊಗ್ಗ, ಬೆಂಗಳೂರು, ಬಾಗಲಕೋಟೆ, ಹುಬ್ಬಳ್ಳಿಯಲ್ಲಿ ಮಾಡಕ್ಕಾಗುತ್ತಾ? ಉಡುಪಿಯಲ್ಲಿ ಪಾಪದ ಕಾರ್ಯಕರ್ತರು ಸಂಘ ಪಕ್ಷ ಅಂತ ಕೆಲಸ ಮಾಡುತ್ತಾರೆ. ಕರಾವಳಿಗೆ ಮೀಸಲಿಟ್ಟ ಸ್ಥಾನವನ್ನು ಶಿವಮೊಗ್ಗಕ್ಕೆ ಕೊಟ್ಟಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ಕಾರ್ಯಕರ್ತರು ಸರಿಯಾದ ಉತ್ತರ ಕೊಡುತ್ತಾರೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್‌ ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿರುವ ರಘುಪತಿ ಭಟ್ಟರನ್ನು ಪಕ್ಷ ಉಚ್ಛಾಟಿಸಿದ್ದು, ಈ ಬಗ್ಗೆ ಅವರು ಭಾನುವಾರ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತಮಗೆ ಉಚ್ಛಾಟನೆಯ ನೋಟಿಸ್ ಸಿಕ್ಕಿಲ್ಲ, ಮಾಧ್ಯಮಗಳ ಮೂಲಕ ಉಚ್ಛಾಟನೆಯ ವಿಷಯ ತಿಳಿಯಿತು ಎಂದವರು ಹೇಳಿದ್ದಾರೆ.

ಪಕ್ಷದ ಉಚ್ಛಾಟನೆಯಿಂದ ನಾನು ವಿಚಲಿತನಾಗಿಲ್ಲ. ನನಗೆ ಜಗದೀಶ್ ಶೆಟ್ಟರ್ ಮಾದರಿ ಇದ್ದಾರೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದ ಮೇಲೆ ಮತ್ತೆ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಪಕ್ಷ ನಾಯಕರನ್ನು ಟೀಕೆ ಮಾಡಿದ ಜಗದೀಶ್ ಶೆಟ್ಟರ್ ಅವರೇ ಒಂದು ವರ್ಷದೊಳಗೆ ಪಕ್ಷಕ್ಕೆ ವಾಪಸ್ಸಾಗಿ ಲೋಕಸಭಾ ಟಿಕೆಟನ್ನೂ ಪಡೆದುಕೊಂಡಿದ್ದಾರೆ. ನಾನು ಮೋದಿ ಅಥವಾ ಪಕ್ಷದ ಯಾವ ನಾಯಕರನ್ನೂ ಬೈದಿಲ್ಲ. ಪಕ್ಷದ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದೇನೆ. ಆದ್ದರಿಂದ ನನ್ನ ಉಚ್ಛಾಟನೆ ಕೂಡ ಶಾಶ್ವತ ಅಲ್ಲ. ಚುನಾವಣೆಯಲ್ಲಿ ಗೆದ್ದ ಮೇಲೆ ನನ್ನ ಉಚ್ಛಾಟನೆಯೂ ರದ್ದಾಗುತ್ತದೆ ಎಂದವರು ಪೂರ್ಣ ವಿಶ್ವಾಸದಲ್ಲಿ ಹೇಳಿದರು.

ಪಕ್ಷದ ಎಲ್ಲ ಹುದ್ದೆಯಿಂದ ವಜಾ ಮಾಡುವುದಾಗಿ ಹೇಳಿದ್ದಾರೆ. ಆದರೆ ನನಗೆ ಪಕ್ಷದಲ್ಲಿ ಯಾವ ಹುದ್ದೆಯನ್ನು ಕೊಟ್ಟಿಲ್ಲ. ವಿಧಾನಸಭಾ ಚುನಾವಣೆಯ ಟಿಕೆಟ್ ತಪ್ಪಿದಾಗ ಪಕ್ಷದಲ್ಲಿ ಸ್ಥಾನಮಾನ ಕೊಡುತ್ತೇವೆ ಎಂದಿದ್ದರು. ಆದರೆ ಪಕ್ಷ ನನ್ನನ್ನು ರಾಜ್ಯ ಕಾರ್ಯಕಾರಿ ಸದಸ್ಯನನ್ನಾಗಿಯೂ ಮಾಡಿಲ್ಲ. ಆದ್ದರಿಂದ ನನ್ನನ್ನು ಯಾವ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಸ್ಪಷ್ಟಪಡಿಸಬೇಕು. ನನ್ನದು ಸಾಮಾನ್ಯ ಕಾರ್ಯಕರ್ತನ ಹುದ್ದೆ. ಕಾರ್ಯಕರ್ತನನ್ನು ವಜಾ ಮಾಡಲು ಸಾಧ್ಯವಿಲ್ಲ. ಈ ವಜಾಕ್ಕೆಲ್ಲ ನಾನು ತಲೆ ಬಿಸಿ ಮಾಡಿಕೊಳ್ಳುವುದಿಲ್ಲ ಎಂದರು.

ನಾನು ಕೈಹಿಡಿದು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದ ಭಟ್ಟರು, ಪಕ್ಷದ ದೃಷ್ಟಿಯಿಂದ ಜಿಲ್ಲಾಧ್ಯಕ್ಷರು, ಶಾಸಕರು, ರಾಜ್ಯ ಕಾರ್ಯದರ್ಶಿ ಸುನಿಲ್ ಕುಮಾರ್ ಮಾಡಿದ್ದು ಸರಿ ಇರಬಹುದು. ಆದರೆ ಪಕ್ಷದಿಂದ ವಜಾ ಮಾಡುವಾಗ ಸಮಾನ ನ್ಯಾಯ ಜಾರಿಗೆ ತನ್ನಿ, ನಾನೊಬ್ಬ ಪಾಪದವ, ಬಡಪಾಯಿ ಮಾತ್ರ ನಿಮಗೆ ವಜಾಮಾಡಲು ಸಿಕ್ಕಿದ್ದಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಸ್ತು ಸಮಿತಿಗೆ ಹಲವು ಪ್ರಶ್ನೆ!

ಬಿಜೆಪಿಯ ಶಿಸ್ತು ಸಮಿತಿಗೆ ನನ್ನ ಹಲವು ಪ್ರಶ್ನೆಗಳಿವೆ ಎಂದ ರಘುಪತಿ ಭಟ್, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಮೇಲೆ ಏನು ಶಿಸ್ತು ಕ್ರಮವಾಗಿದೆ? ಅಡ್ಡ ಮತದಾನ ಮಾಡಿದ ಇಬ್ಬರೂ ಶಾಸಕರನ್ನು ಯಾಕೆ ವಜಾ ಮಾಡಿಲ್ಲ? ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲಿಸಿದ ಶಾಸಕರನ್ನು ವಜಾ ಮಾಡಿದ್ದೀರಾ? ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ಕೊಡುವ, ಭ್ರಷ್ಟಾಚಾರ ಆರೋಪ ಮಾಡುವ ನಾಯಕರ ಮೇಲೆ ನಿಮ್ಮ ಕ್ರಮ ಏನು? ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಸಲು ಯಾರಿಗೆ ಎಷ್ಟು ಹಣ ಹೋಗಿದೆ? ವಿಪ್ ಉಲ್ಲಂಘನೆ ಮಾಡಿದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ಎಂದವರು ಖಾರವಾಗಿ ಪ್ರಶ್ನಿಸಿದರು.