ಸಾರಾಂಶ
ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಆಸಕ್ತಿ, ಸಮಯಪಾಲನೆ ಮತ್ತು ನಿರಂತರತೆ ಹೊಂದಿದ್ದರೆ ತಮ್ಮ ಗುರಿಯನ್ನು ನಿರಾತಂಕವಾಗಿ ಮುಟ್ಟಬಹುದು ಎಂದು ಸಾಹಿತಿ, ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಹೇಳಿದರು.
ನರೇಗಲ್ಲ: ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಆಸಕ್ತಿ, ಸಮಯಪಾಲನೆ ಮತ್ತು ನಿರಂತರತೆ ಹೊಂದಿದ್ದರೆ ತಮ್ಮ ಗುರಿಯನ್ನು ನಿರಾತಂಕವಾಗಿ ಮುಟ್ಟಬಹುದು ಎಂದು ಸಾಹಿತಿ, ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದ ಶ್ರೀ ಅಂದಾನಪ್ಪ ಜ್ಞಾನಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಮಹಾ ಸರಸ್ವತಿ ಪೂಜೆ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷೆಯ ಭಯ ಬಿಟ್ಟು ತಾಳ್ಮೆಯಿಂದ ಪ್ರಶ್ನೆಗಳಿಗೆ ಉತ್ತರಿಸಿ ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಬಿ.ಆರ್. ಗದುಗಿನ ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿ, ಕಲಿತ ಶಾಲೆ, ಕಲಿಸಿದ ಗುರು ಮತ್ತು ಹೊತ್ತು ಭೂಮಿಯ ಋಣ ತೀರಿಸಬೇಕಾದರೆ ಸಮಾಜ ಮೆಚ್ಚುವ ರೀತಿಯಲ್ಲಿ ಉತ್ತಮ ಪ್ರಜೆಗಳಾಗಬೇಕು. ಹಾಗಾಗ ಬೇಕಾದರೆ ಅಧ್ಯಯನಶೀಲ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಈ ವೇಳೆ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಾದ ಚಂದ್ರಶೇಖರ ಅಂಬಿಗೇರ, ಡಿ.ಎಸ್. ಆಲಮೇಲ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಗಂಗಮ್ಮ ಜಂಗಣ್ಣವರ, ಉಪಾಧ್ಯಕ್ಷೆ ಯಲ್ಲವ್ವ ಮಾದರ, ಆರ್.ಡಿ. ಬಡಿಗೇರ, ಪರಶುರಾಮ ಹರಿಜನ, ಕಮಲಮ್ಮ ಜೋಗಿನ ಇದ್ದರು. ಶಿಕ್ಷಕಿ ಗೌರಮ್ಮ ಸ್ವಾಗತಿಸಿದರು. ಯು.ಎಸ್. ಕಣವಿ ವಾರ್ಷಿಕ ವರದಿ ವಾಚಿಸಿದರು. ದೀಪಾ ತುಕ್ಕೋಜಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಸುನೀತಾ ಪಾಟೀಲ್ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು. ಆನಂತರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ವಿ.ವಿ. ಅಣ್ಣಿಗೇರಿ ಕಾರ್ಯಕ್ರಮ ನಿರೂಪಿಸಿದರು. ನೆಹರು ಮನೋಳಿ ವಂದಿಸಿದರು.