ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯದ ಕಾಳಜಿ, ಶಿಸ್ತುಬದ್ಧ ಜೀವನ ಹಾಗೂ ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ಸದೃಢ ದೇಹಕ್ಕೆ ಸದೃಢ ಮನಸ್ಸು ಅಗತ್ಯವಾಗಿದ್ದು, ಮನಸ್ಸನ್ನು ಚಂಚಲಗೊಳ್ಳದಂತೆ ಏಕಾಗ್ರತೆಯಿಂದ ಕಾಪಾಡಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಕೆಇಬಿ ಪವರ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಸುಬ್ರಹ್ಮಣ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯದ ಕಾಳಜಿ, ಶಿಸ್ತುಬದ್ಧ ಜೀವನ ಹಾಗೂ ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ಸದೃಢ ದೇಹಕ್ಕೆ ಸದೃಢ ಮನಸ್ಸು ಅಗತ್ಯವಾಗಿದ್ದು, ಮನಸ್ಸನ್ನು ಚಂಚಲಗೊಳ್ಳದಂತೆ ಏಕಾಗ್ರತೆಯಿಂದ ಕಾಪಾಡಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಕೆಇಬಿ ಪವರ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಸುಬ್ರಹ್ಮಣ್ಯ ಹೇಳಿದರು.ನಗರದ ಬಾಲಕಿಯರ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪ್ರಕೃತಿ ಮನುಷ್ಯನಿಗೆ ಅಗತ್ಯವಿರುವ ಎಲ್ಲವನ್ನೂ ನೀಡಿದೆ. ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ಪ್ರಕೃತಿಯ ಶಕ್ತಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಪರಸ್ಪರ ಗೌರವ ಹಾಗೂ ಸಮಾನತೆಯ ಮನೋಭಾವದಿಂದ ಬದುಕಬೇಕು ಎಂದರು. ಮನುಷ್ಯ ಬುದ್ಧಿವಂತ ಜೀವಿಯಾಗಿದ್ದರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಸ್ವತಃ ಸೃಷ್ಟಿಸಿಕೊಂಡಿದ್ದಾನೆ. ಪರಿಸರ ಸಂರಕ್ಷಣೆ, ಆರೋಗ್ಯದ ಕಾಳಜಿ ಹಾಗೂ ಉತ್ತಮ ಚಿಂತನೆಗಳನ್ನು ಜೀವನದ ಭಾಗವಾಗಿಸಿಕೊಳ್ಳಬೇಕು. ನಾವು ನಮ್ಮನ್ನು ಮೊದಲು ಬದಲಾಯಿಸಿಕೊಂಡರೆ ಸಮಾಜದಲ್ಲಿಯೂ ಬದಲಾವಣೆ ತರಲು ಸಾಧ್ಯ. ‘ನಾನು ಸರಿಯಾದರೆ ದೇಶ ಸರಿಯಾಗುತ್ತದೆ’ ಎಂಬ ಜವಾಬ್ದಾರಿಯುತ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಸಲಹೆ ನೀಡಿದರು.ಪ್ರೌಢಶಾಲಾ ಶಿಕ್ಷಣ ವಿದ್ಯಾರ್ಥಿಗಳ ಬದುಕಿನಲ್ಲಿ ಮಹತ್ವದ ತಿರುವಿನ ಹಂತವಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯತ್ತ ಹೆಚ್ಚಿನ ಏಕಾಗ್ರತೆಯಿಂದ ಸಾಗಬೇಕು. ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ತ್ಯಾಗ ಮಾಡುತ್ತಿದ್ದಾರೆ. ಆದ್ದರಿಂದ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಪೋಷಕರು ಹಾಗೂ ಶಿಕ್ಷಕರ ಸಲಹೆ ಪಡೆಯಬೇಕು. ಸ್ವಾಮಿ ವಿವೇಕಾನಂದರ ಆದರ್ಶ ಹಾಗೂ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಹೇಳಿದರು.ಶಾಲೆಯ ಉಪಪ್ರಾಂಶುಪಾಲ ಪಾಲಾಕ್ಷಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿ, ಹಿರಿಯರು ಹಾಗೂ ಗುರುಗಳಿಗೆ ಗೌರವ ನೀಡುವುದರೊಂದಿಗೆ ಶಿಕ್ಷಣದ ಕಡೆಗೆ ಸಂಪೂರ್ಣ ಗಮನಹರಿಸಬೇಕು. ಕಾರ್ಯಕ್ರಮದಲ್ಲಿ ನೀಡಲಾದ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಆರೋಗ್ಯ ಮತ್ತು ಜೀವನ ಮೌಲ್ಯಗಳ ಕುರಿತು ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಿವೆ ಎಂದರು.ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಶಶಿಕಲಾ, ನಯನ ಹಾಗೂ ಸೇವಾ ಪ್ರತಿನಿಧಿ ಚಂದ್ರಕಲಾ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.