ಶಿಸ್ತಿನ ನಡಿಗೆ; ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿ!

| N/A | Published : Oct 06 2025, 02:00 AM IST

ಶಿಸ್ತಿನ ನಡಿಗೆ; ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿ!
Share this Article
  • FB
  • TW
  • Linkdin
  • Email

ಸಾರಾಂಶ

ಮಹಾನಗರ ಘಟಕದ ನೇತೃತ್ವದಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್‌ ಪಥ ಸಂಚಲನದ ನೋಟ.ಗಣವೇಷಧಾರಿಗಳು ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದರೆ, ರಸ್ತೆಯ ಎರಡು ಬದಿಗಳ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಪಥ ಸಂಚಲನ ವೀಕ್ಷಿಸಿದರು.

ಹುಬ್ಬಳ್ಳಿ: ಶಿಸ್ತಿನ ನಡಿಗೆಯ ಗಣವೇಷಧಾರಿಗಳು, ಅವರ ಮೇಲೆ ಪುಷ್ಪಾರ್ಚನೆ ಮೂಲಕ ಸ್ವಾಗತಿಸುತ್ತಿದ್ದ ನಾಗರಿಕರು, ಅಲ್ಲಲ್ಲಿ ಭಾರತಮಾತೆ, ದೇಶಭಕ್ತರ ವೇಷಭೂಷಣಗಳಲ್ಲಿ ಕಂಗೊಳಿಸಿದ ಚಿಣ್ಣರು!

ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷ ಹಾಗೂ ವಿಜಯ ದಶಮಿ ಅಂಗವಾಗಿ ಹುಬ್ಬಳ್ಳಿ ಮಹಾನಗರ ಘಟಕದ ನೇತೃತ್ವದಲ್ಲಿ ಭಾನುವಾರ ನಡೆದ ಆರ್‌ಎಸ್‌ಎಸ್‌ ಪಥ ಸಂಚಲನದ ನೋಟ.

ಗಣವೇಷಧಾರಿಗಳು ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದರೆ, ರಸ್ತೆಯ ಎರಡು ಬದಿಗಳ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಪಥ ಸಂಚಲನ ವೀಕ್ಷಿಸಿದರು. ನಗರದ ಪ್ರಮುಖ ಬೀದಿಗಳನ್ನು ರಂಗೋಲಿ, ಪುಷ್ಪಗಳಿಂದ ಅಲಂಕರಿಸಿ ಪಥ ಸಂಚಲನವನ್ನು ಸ್ವಾಗತಿಸಿದರು. ಗಣವೇಷಧಾರಿಗಳ ಮೇಲೆ ಪುಷ್ಪಗಳ ಮಳೆಗರೆದು, ಜಯಘೋಷ ಮೊಳಗಿಸಿದರು. ಭಗವಾ ಧ್ವಜ ಹಾಗೂ ಸಂಘದ ಸಂಸ್ಥಾಪಕರ ಭಾವಚಿತ್ರಕ್ಕೆ ಜನರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಇನ್ನು ಕೊಯಿನ್ ರಸ್ತೆಯಲ್ಲಿ ಬಾನಿ ಓಣಿಯ ಗೆಳೆಯರ ಬಳಗ ಸೇರಿದಂತೆ ವಿವಿಧೆಡೆ ಪಥ ಸಂಚಲನ ಬಂದ ಸಮಯದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆರ್‌ಎಸ್‌ಎಸ್ ಗಣವೇಷಧಾರಿ, ಭಾರತ ಮಾತೆ, ಸ್ವಾಮಿ ವಿವೇಕಾನಂದ ಸೇರಿದಂತೆ ವಿವಿಧ ವೇಷಭೂಷಣದಲ್ಲಿ ತಯಾರಾಗಿದ್ದ ಮಕ್ಕಳು ರಸ್ತೆ ಬದಿಯಲ್ಲಿ ನಿಂತು ಪಥ ಸಂಚಲನವನ್ನು ಸ್ವಾಗತಿಸುತ್ತಿದ್ದ ದೃಶ್ಯ ಗಮನ ಸೆಳೆಯಿತು.

ಇಲ್ಲಿಯ ನೆಹರು ಮೈದಾನದಿಂದ ಎರಡು ಮಾರ್ಗದಲ್ಲಿ ಪಥ ಸಂಚಲನ ಸಂಚರಿಸಿತು. ಒಂದು ತಂಡವು ನೆಹರು ಮೈದಾನದಿಂದ ಕೃಷ್ಣ ಭವನ, ಸರ್ ಸಿದ್ದಪ್ಪ ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ್ ಪೇಟೆ, ತುಳಜಾ ಭವಾನಿ ವೃತ್ತ, ಪೆಂಡಾರ ಗಲ್ಲಿ ಶಂಕರ ಮಠ, ಕಂಚಗಾರ ಗಲ್ಲಿ, ಹಿರೇಪೇಟೆ, ಸರಾಫ್‌ ಗಟ್ಟಿ ವೃತ್ತ, ಜವಳಿ ಸಾಲ, ಬೆಳಗಾವಿ ಗಲ್ಲಿ ತಲುಪಿತು.

ಇನ್ನೊಂದು ತಂಡವು ಮೈದಾನದಿಂದ ಟೌನ್ ಹಾಲ್, ಜೆಸಿ ನಗರ, ಶಕ್ತಿ ರಸ್ತೆ, ಸ್ಟೇಶನ್ ರಸ್ತೆ, ಗಣೇಶ ಪೇಟೆ ವೃತ್ತ, ಸಿಬಿಟಿ, ಮಕಾನದಾರ ಗಲ್ಲಿ, ಮಂಗಳವಾರ ಪೇಟೆ, ಇಟಗಿ ಮಾರುತಿ ಗಲ್ಲಿ, ರಾಧಾಕೃಷ್ಣ ಗಲ್ಲಿ ತಲುಪಿತು.

ನಂತರ ಎರಡೂ ಸಂಚಲನ ದುರ್ಗದ ಬೈಲ್ ವೃತ್ತದಲ್ಲಿ ಸಂಗಮಗೊಂಡು ಅತ್ಯಂತ ಆರ್ಷಣೀಯವಾಗಿತ್ತು. ನಂತರ ಬ್ರಾಡ್‌ವೇ, ಶಿವಾಜಿ ವೃತ್ತ, ಕೊಪ್ಪಿಕರ ರಸ್ತೆ, ಕೃಷ್ಣ ಭವನ ಮಾರ್ಗವಾಗಿ ಪಥ ಸಂಚಲನವು ನೆಹರು ಮೈದಾನಕ್ಕೆ ಮರಳಿ ಸಂಪನ್ನಗೊಂಡಿತು. ಇದಕ್ಕೂ ಮೊದಲು ಸಂಘದ ಕಾರ್ಯಕರ್ತರಿಂದ ಶಾರೀರಿಕ, ಮಾನಸಿಕ ಬೆಳವಣಿಗೆಗೆ ದಂಡ ಮತ್ತು ಸಮತಾ ಪ್ರದರ್ಶನ, ವ್ಯಾಯಾಮದ ಜತೆಗೆ ವಿವಿಧ ಆಟಗಳು ಜರುಗಿದವು.

ಪಥ ಸಂಚಲನದಲ್ಲಿ ಗಣ್ಯರು ಭಾಗಿ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಶಾಸಕ ಮಹೇಶ ಟೆಂಗಿನಕಾಯಿ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸ್ವರ್ಣಾ ಗ್ರುಪ್ ಆಫ್‌ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿಎಸ್‌ವಿ ಪ್ರಸಾದ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಸೇರಿದಂತೆ ಅನೇಕ ಗಣ್ಯರು ಪಥ ಸಂಚಲನದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಪಥ ಸಂಚಲನದ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 12 ಸಿಎಆರ್ ತುಕಡಿ, 4 ಕೆಎಸ್‌ಆರ್‌ಪಿ ತುಕಡಿ, ಹು-ಧಾ ಪೊಲೀಸ್ ಕಮಿಷನರೇಟ್ ಅಧಿಕಾರಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪಥ ಸಂಚಲನದ ಮಾರ್ಗದಲ್ಲಿ ಸರತಿ ಸಾಲಿನಲ್ಲಿ ಬಂದೋಬಸ್ತ್ ಒದಗಿಸಿದರಲ್ಲದೇ, ಪಥ ಸಂಚಲನಕ್ಕೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿದರು. ಇನ್ನೂ ಕೆಲವೆಡೆ ಮುಂಜಾಗ್ರತ ಕ್ರಮವಾಗಿ ಪೊಲೀಸರ ಮನವಿ ಮೇರೆಗೆ ಕೆಲ ಅಂಗಡಿಗಳನ್ನು ಬಂದ್ ಮಾಡಿ ಪಥ ಸಂಚಲನಕ್ಕೆ ಸೂಕ್ತ ಸಹಕಾರ ನೀಡಿದ್ದು ಕಂಡು ಬಂದಿತು.

ಗಣವೇಷದಲ್ಲಿ ಚಿಣ್ಣರು: 6 ತಿಂಗಳ ಮಗುವಿಗೂ ಗಣವೇಷ ಹಾಕಿದ್ದು ಗಮನ ಸೆಳೆಯಿತು. ಇದಲ್ಲದೇ, 2, 3, 5, 8 ಹೀಗೆ ನಾನಾ ವಯಸ್ಸಿನ ಮಕ್ಕಳು ಗಣವೇಷಧಾರಿಗಳಾಗಿ ತಮ್ಮ ತಮ್ಮ ತಂದೆಯ ಜತೆ ಜತೆಗೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು.

Read more Articles on