ಮೈಷುಗರ್‌ನಲ್ಲಿ ಕಬ್ಬು ಅರೆಯುವಿಕೆ ಸ್ಥಗಿತ

| Published : Aug 20 2024, 12:55 AM IST

ಸಾರಾಂಶ

ಸಚಿವರೂ ಕೂಡ ಕಳೆದೆರಡು ದಿನಗಳಿಂದ ಮಂಡ್ಯಕ್ಕೆ ಭೇಟಿ ನೀಡುತ್ತಿದ್ದರೂ ಕಾರ್ಖಾನೆ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸುತ್ತಿಲ್ಲ. ಕಬ್ಬು ಕಟಾವಿಗೆ ಉಂಟಾಗಿರುವ ತೊಂದರೆ, ತಾಂತ್ರಿಕ ದೋಷಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತಗತಿಯಲ್ಲಿ ಪರಿಹಾರ ಸೂಚಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯಕಳೆದ ಮೂರು ದಿನಗಳಿಂದ ಮೈಷುಗರ್‌ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದೆ. ಶನಿವಾರ ಮುಂಜಾನೆಯಿಂದ ಕಾಣಿಸಿಕೊಂಡಿರುವ ತಾಂತ್ರಿಕ ದೋಷ ಇದುವರೆಗೂ ಪರಿಹಾರವಾಗಿಲ್ಲ. ಪರಿಣಾಮ ಕಾರ್ಖಾನೆ ಯಾರ್ಡ್‌ನಲ್ಲೇ ಕಬ್ಬು ಒಣಗುವಂತಾಗಿದೆ.

ಶನಿವಾರ ಮುಂಜಾನೆ ಕಾರ್ಖಾನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಟ್ರಾನ್ಸ್‌ಫಾರ್ಮರ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು. ಅದನ್ನು ಪರಿಶೀಲಿಸಿದಾಗ ಒಳಗಿದ್ದ ಬೋರ್ಡ್‌ ಸಂಪೂರ್ಣ ಸುಟ್ಟುಹೋಗಿತ್ತು. ಹೊಸದಾಗಿ ಬೋರ್ಡ್‌ ಅಳವಡಿಸಬೇಕಿದ್ದು, ಸೋಮವಾರ ರಾತ್ರಿಯಿಂದಲೇ ಕಬ್ಬು ಅರೆಯುವಿಕೆ ಆರಂಭಗೊಳ್ಳಲಿದೆ ಎಂದು ಕಾರ್ಖಾನೆಯ ಮೂಲಗಳು ತಿಳಿಸಿವೆ.

ಒಂದೆಡೆ ಕಬ್ಬು ಕಟಾವು ಮಾಡುವವರಿಲ್ಲದೆ 20 ದಿನಗಳಿಂದ ಕಬ್ಬಿನ ಕೊರತೆ ಎದುರಿಸುತ್ತಿದ್ದ ಮೈಷುಗರ್‌ ಕಾರ್ಖಾನೆ, ಈಗ ಕಾರ್ಖಾನೆಗೆ ಲಾರಿ, ಟ್ರ್ಯಾಕ್ಟರ್‌, ಲಾರಿಗಳ ಮೂಲಕ ಕಬ್ಬನ್ನು ತಂದಿದ್ದರೂ ತಾಂತ್ರಿಕ ದೋಷದಿಂದ ಅರೆಯುವಿಕೆ ಸ್ಥಗಿತಗೊಂಡಿರುವುದನ್ನು ಕಂಡು ರೈತರು ಹೈರಾಣಾಗಿದ್ದಾರೆ. ಕಾರ್ಖಾನೆ ಆಡಳಿತ ಮಂಡಳಿಯವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಯಾವಾಗ ಆರಂಭವಾಗುವುದೋ ಗೊತ್ತಿಲ್ಲ..!:

ಶುಕ್ರವಾರ ರಾತ್ರಿ ಕಬ್ಬನ್ನು ತಂದು ಯಾರ್ಡ್‌ಗೆ ಬಂದೆವು. ಶನಿವಾರ ಬೆಳಗ್ಗೆಯಿಂದಲೇ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿದೆ. ಕಾರ್ಖಾನೆ ಯಾವಾಗ ಆರಂಭವಾಗುವುದೋ ಗೊತ್ತಿಲ್ಲ. ಅಧಿಕಾರಿಗಳೂ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ನೀರಿನ ಕೊರತೆಯ ನಡುವೆಯೂ ಕಬ್ಬನ್ನು ಕಷ್ಟಪಟ್ಟು ಕಾಪಾಡಿಕೊಂಡು ಬಂದಿದ್ದೆವು. ಈಗ ಮೂರು ದಿನಗಳಿಂದ ಯಾರ್ಡ್‌ನಲ್ಲೇ ಒಣಗುತ್ತಿದೆ. ಇಳುವರಿ ಕುಸಿತಗೊಳ್ಳುವ ಆತಂಕ ನಮ್ಮನ್ನು ಕಾಡುತ್ತಿದೆ. ಇದಾವುದೂ ಕಾರ್ಖಾನೆ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ ಎಂದು ದೂರಿದರು.

ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಸಾಗಿಸಬೇಡಿ. ನಮ್ಮ ಕಾರ್ಖಾನೆಗೇ ಸಾಗಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕಾರ್ಖಾನೆ ನಿಂತು ನಿಂತು ಓಡಿದರೆ ನಮಗೆ ನಷ್ಟವಾಗುವುದಿಲ್ಲವೇ? ಅದನ್ನು ತುಂಬಿಕೊಡುವವರು ಯಾರು? ಪ್ರತಿ ವರ್ಷ ಮೈಷುಗರ್‌ ಕಾರ್ಖಾನೆ ಗೋಳು ಇದೇ ಆಗಿದೆ. ನಮಗೂ ನೋಡಿ ನೋಡಿ ಸಾಕಾಗಿಹೋಗಿದೆ. ಬೇರೆ ಕಾರ್ಖಾನೆಗಳಿಗೆ ಸಾಗಿಸುವುದಕ್ಕೆ ಅನುಮತಿ ನೀಡಿದರೆ ನಮಗಾಗುವ ನಷ್ಟವಾದರೂ ತಪ್ಪುತ್ತದೆ ಎಂಬುದು ರೈತರ ಅಳಲಾಗಿದೆ.

ಶಾಸಕರು, ಅಧ್ಯಕ್ಷರು, ಎಂಡಿ ಸಮಸ್ಯೆ ಕೇಳುತ್ತಿಲ್ಲ:

ಕಾರ್ಖಾನೆ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸ್ಥಳೀಯರೇ ಆಗಿದ್ದಾರೆ. ಶಾಸಕರೂ ಕ್ಷೇತ್ರದೊಳಗೆ ಓಡಾಡಿಕೊಂಡಿದ್ದರೂ ಕಾರ್ಖಾನೆ ಸ್ಥಗಿತಗೊಂಡಿರುವುದರಿಂದ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಆಲಿಸುತ್ತಿಲ್ಲ. ಮೂರು ದಿನಗಳಿಂದ ಯಾರೊಬ್ಬರೂ ಇತ್ತ ತಿರುಗಿನೋಡಿಲ್ಲ ಎಂಬುದು ಕಬ್ಬು ಬೆಳೆಗಾರರ ಆರೋಪವಾಗಿದೆ.

ಕಾರ್ಖಾನೆ ಯಾವಾಗ ಆರಂಭವಾಗಲಿದೆ. ಕಬ್ಬು ಅರೆಯುವಿಕೆಗೆ ಉಂಟಾಗಿರುವ ತೊಂದರೆ ಏನು, ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಯಾರೊಬ್ಬರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದರಿಂದ ನಮಗೆ ಗೊಂದಲ ಉಂಟಾಗಿದೆ. ಇದು ಕಾರ್ಖಾನೆಯನ್ನು ಮುನ್ನಡೆಸುವ ರೀತಿಯೇ ಎಂದು ಪ್ರಶ್ನಿಸಿದ್ದಾರೆ.

ಸಚಿವರೂ ಕೂಡ ಕಳೆದೆರಡು ದಿನಗಳಿಂದ ಮಂಡ್ಯಕ್ಕೆ ಭೇಟಿ ನೀಡುತ್ತಿದ್ದರೂ ಕಾರ್ಖಾನೆ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸುತ್ತಿಲ್ಲ. ಕಬ್ಬು ಕಟಾವಿಗೆ ಉಂಟಾಗಿರುವ ತೊಂದರೆ, ತಾಂತ್ರಿಕ ದೋಷಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತಗತಿಯಲ್ಲಿ ಪರಿಹಾರ ಸೂಚಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಸ್ತೆಯಲ್ಲೇ ಬಿದ್ದಿರುವ ಕಬ್ಬು..!:

ಮತ್ತೊಂದೆಡೆ ಕಬ್ಬನ್ನು ಕಡಿದು ರಸ್ತೆ ಪಕ್ಕ ಹಾಕಲಾಗಿದೆ. ಇದುವರೆಗೂ ಕಬ್ಬನ್ನು ತೆಗೆದುಕೊಂಡು ಹೋಗುವುದಕ್ಕೆ ಲಾರಿಗಳನ್ನು ಕಳುಹಿಸಿಲ್ಲ. ಕಬ್ಬು ಅರೆಯುವಿಕೆ ಸ್ಥಗಿತಗೊಂಡಿರುವುದರಿಂದ ಲಾರಿಗಳು ಯಾರ್ಡ್‌ನಲ್ಲೇ ಕಬ್ಬನ್ನು ಹೊತ್ತು ನಿಂತಿವೆ. ಅವುಗಳಲ್ಲಿರುವ ಕಬ್ಬು ಖಾಲಿಯಾದ ನಂತರವಷ್ಟೇ ಲಾರಿಗಳನ್ನು ಕಳುಹಿಸಬೇಕು. ಅಲ್ಲಿಯವರೆಗೂ ಕಬ್ಬು ರಸ್ತೆಯಲ್ಲೇ ಬಿದ್ದು ಒಣಗುವಂತಹ ಪರಿಸ್ಥಿತಿ ಎದುರಾಗಿದೆ. ಇದರ ಬಗ್ಗೆಯೂ ಕಾರ್ಖಾನೆ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾರ್ಖಾನೆ ಆರಂಭಕ್ಕೂ ಮುನ್ನ ಪೂರ್ವಸಿದ್ಧತೆಗಳನ್ನು ಸಮರ್ಪಕವಾಗಿ ಮಾಡಿಕೊಳ್ಳದಿರುವುದೇ ಈ ಎಲ್ಲಾ ಲೋಪಗಳಿಗೆ ಕಾರಣವಾಗಿದೆ. ಪ್ರತಿ ವರ್ಷ ಎದುರಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳದಿರುವುದರಿಂದಲೇ ಮೈಷುಗರ್‌ ಪ್ರಗತಿಯತ್ತ ಮುನ್ನಡೆಯುವುದು ಮರೀಚಿಕೆಯಾಗಿದೆ. ‘ಮೈಷುಗರ್‌ಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಟ್ರಾನ್ಸ್‌ಫಾರ್ಮರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಅದರೊಳಗಿನ ಬೋರ್ಡ್‌ ಸುಟ್ಟುಹೋಗಿದ್ದರಿಂದ ಅದನ್ನು ಬೆಂಗಳೂರಿನಿಂದ ತರಿಸಿ ಅಳವಡಿಸಲಾಗುತ್ತಿದೆ. ರಾತ್ರಿಯಿಂದಲೇ ಕಬ್ಬು ಅರೆಯುವಿಕೆ ಆರಂಭವಾಗಲಿದೆ. ರೈತರಿಗೆ ಊಟ ಕೊಟ್ಟು ಉಪಚರಿಸಲಾಗಿದೆ.’

- ಸಿ.ಡಿ.ಗಂಗಾಧರ್‌, ಅಧ್ಯಕ್ಷರು, ಮೈಷುಗರ್‌ ಕಂಪನಿ‘ಕಬ್ಬನ್ನು ಸಮರ್ಪಕವಾಗಿ ಅರೆಯಲು ಸಾಧ್ಯವಾಗದಿದ್ದರೆ ದಯಮಾಡಿ ಬೇರೆ ಕಾರ್ಖಾನೆಗಳಿಗೆ ಸಾಗಿಸಲು ಅವಕಾಶ ಮಾಡಿಕೊಡಿ. ಕಬ್ಬನ್ನು ತಂದು ಹೀಗೆ ಒಣಗಿಸಬೇಡಿ. ನಮ್ಮ ಕಬ್ಬು ಯಾರ್ಡ್‌ನಲ್ಲಿ, ರಸ್ತೆ ಪಕ್ಕದಲ್ಲಿ ಬಿದ್ದು ಒಣಗುತ್ತಿದೆ. ಬೇಸಿಗೆಯಲ್ಲಿ ಕಷ್ಟಪಟ್ಟು ನೀರು ಹರಿಸಿ ಬೆಳೆಯನ್ನು ಉಳಿಸಿಕೊಂಡಿದ್ದೇವೆ. ಈಗ ಕಬ್ಬು ಒಣಗುತ್ತಿರುವುದನ್ನು ನೋಡಿ ಸಂಕಟವಾಗುತ್ತಿದೆ. ಕಬ್ಬು ಅರೆಯುವುದಿದ್ದರೆ ಸರಿಯಾಗಿ ನುರಿಸಿ, ಇಲ್ಲದಿದ್ದರೆ ಬೇರೆಡೆ ಸಾಗಿಸಲು ಅನುವು ಮಾಡಿಕೊಡಿ. ನಮ್ಮ ತಾಳ್ಮೆ ಪರೀಕ್ಷಿಸಬೇಡಿ.’

- ರಮೇಶ್‌, ಕಬ್ಬು ಬೆಳೆಗಾರ, ಕೀಲಾರ