ನಾಶಿಪುಡಿಗೆ ಸೇರಿದ ಕೋಲ್ಡ್ ಸ್ಟೋರೇಜ್ ಕೂಡಲೇ ಸ್ಥಗಿತಗೊಳಿಸಿ

| Published : Mar 07 2024, 01:52 AM IST

ಸಾರಾಂಶ

ಸರ್ಕಾರ ದೇಶದ್ರೋಹಿಗಳ ಜಾಲವನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟುವ ಕೆಲಸ ಮಾಡುವಂತೆ ಒತ್ತಾಯ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರ ಆಗ್ರಹ

ಕನ್ನಡಪ್ರಭ ವಾರ್ತೆ ಬ್ಯಾಡಗಿ

‘ಪಾಕಿಸ್ತಾನ ಜಿಂದಾಬಾದ್’ ದೇಶ ವಿರೋಧಿ ಹೇಳಿಕೆ ನೀಡಿರುವ ಆರೋಪದಡಿ ಬಂಧನಕ್ಕೊಳಗಾದ ಮಹ್ಮದ್‌ಶಫಿ ನಾಶಿಪುಡಿಗೆ ಸೇರಿದ ಕೋಲ್ಡ್ ಸ್ಟೋರೇಜ್ ಕೂಡಲೇ ಸ್ಥಗಿತಗೊಳಿಸಿ ಆತನನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮೋಟೆಬೆನ್ನೂರ ಗ್ರಾಮ ಘಟಕ ಕಾರ್ಯಕರ್ತರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಮೋಟೆಬೆನ್ನೂರ ಗ್ರಾಮದ ಹೆಸರು ಹೇಳಿದ ತಕ್ಷಣ ಮೊದಲಿಗೆ ನೆನಪಾಗುವುದು ಸ್ವಾತಂತ್ರ‍್ಯ ಹೋರಾಟಗಾರ, ಹುತಾತ್ಮ ಮಹದೇವ ಮೈಲಾರ ಹಾಗೂ ಪತ್ನಿ ಸಿದ್ದಮ್ಮರ ಹೆಸರು, ಸಾಹಿತಿ ಮಹದೇವ ಬಣಕಾರ ಸೇರಿದಂತೆ ಇಲ್ಲಿಯವರೆಗೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಾಧಕರ ಹೆಸರಿನಿಂದಲೇ ಮೋಟೆಬೆನ್ನೂರ ವಿಶ್ವದೆಲ್ಲೆಡೆ ಪರಿಚಿತವಾಗುತ್ತಿದೆ. ಅದಕ್ಕೆ ಈಗ ಕಳಂಕ ಬರುತ್ತಿದೆ. ಹಾಗಾಗಿ ಬಂಧಿತ ಮಹ್ಮದ್‌ಶಫಿ ನಾಶಿಪುಡಿಯನ್ನು ಕೂಡಲೇ ಗಡಿಪಾರು ಮಾಡುವಂತೆ ಆಗ್ರಹಿಸಿದರು.

ನಾಶಿಪುಡಿ ಹಿನ್ನೆಲೆಯನ್ನು ಸಂಪೂರ್ಣ ಜಾಲಾಡಬೇಕು. ‘ಪಾಕಿಸ್ತಾನ ಜಿಂದಾಬಾದ್’ ಹೇಳಿಕೆ ಹಿಂದೆ ಭಯೋತ್ಪಾದಕ ಮನಸ್ಥಿತಿಯೊಂದು ಬೆಳಕಿಗೆ ಬಂದಿದೆ. ಇಂತಹ ಹೇಳಿಕೆಯಿಂದ ಮೆಣಸಿನಕಾಯಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದ ಬ್ಯಾಡಗಿ ಹೆಸರು ಬಹಳಷ್ಟು ಹಾಳಾಗಿದೆ. ಕೂಡಲೇ ಸರ್ಕಾರ ದೇಶದ್ರೋಹಿಗಳ ಜಾಲವನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟುವ ಕೆಲಸ ಮಾಡುವಂತೆ ಒತ್ತಾಯಿಸಿದರು.

ನಾಶಿಪುಡಿ ಬ್ಯಾಡಗಿ, ಹುಬ್ಬಳ್ಳಿ, ಗದಗ ಎಪಿಎಂಸಿಗಳಲ್ಲಿ ದಲಾಲರಿಂದ ₹100 ಕೋಟಿಗೂ ಅಧಿಕ ಮೊತ್ತದ ಮೆಣಸಿನಕಾಯಿ ಖರೀದಿಸಿದ್ದು, ಇಂದಿಗೂ ಬಾಕಿ ಹಣ ನೀಡಿಲ್ಲವೆಂಬ ವದಂತಿಗಳಿವೆ. ಸದರಿ ಮೊತ್ತ ರಾಜ್ಯ ಸೇರಿದಂತೆ ಆಂಧ್ರ ಮತ್ತು ತೆಲಂಗಾಣ ರಾಜ್ಯದ ರೈತರಿಗೆ ದಲಾಲರ ಮೂಲಕ ಸಂದಾಯವಾಗಬೇಕಾಗಿದೆ. ಒಂದು ವೇಳೆ ನಾಶಿಪುಡಿ ದಲಾಲರಿಗೆ ಹಣ ನೀಡದಿದ್ದರೆ ರೈತರಿಗೆ ತಲುಪಲು ಹೇಗೆ ಸಾಧ ? ಕೂಡಲೇ ರೈತರ ಹಿತದೃಷ್ಟಿಯಿಂದಲಾದರೂ ಎಪಿಎಂಸಿ ಕಾರ್ಯದರ್ಶಿ ಮಧ್ಯಸ್ಥಿಕೆ ವಹಿಸಿ ದಲಾಲರಿಗೆ ಬರಬೇಕಾದ ಮೊತ್ತ ಸಂದಾಯವಾಗುವಂತೆ ಕ್ರಮಕೈಗೊಳ್ಳಬೇಕಲ್ಲದೇ ಅಷ್ಟೇ ಜವಾಬ್ದಾರಿಯಿಂದ ಸದರಿ ಹಣ ರೈತರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಮುಖಂಡ ಗಂಗಣ್ಣ ಎಲಿ ಮಾತನಾಡಿದರು. ಈ ವೇಳೆ ದಾನಪ್ಪ ಬಳ್ಳಾರಿ, ಡಿ.ಕೆ. ಕುಂಠೆ, ಜಾನ್ ಪುನೀತ್, ಪ್ರಕಾಶ ಬನ್ನಿಹಟ್ಟಿ, ಪ್ರವೀಣ ಬೆನ್ನೂರ, ನಂಜುಂಡಸ್ವಾಮಿ ಹಾವೇರಿಮಠ, ಗುಡ್ಡಪ್ಪ ಹೊಂಬರಡಿ, ಶಂಭು ಹಿತ್ತಲಮನಿ, ಪರಮೇಶಪ್ಪ ಬ್ಯಾಡಗಿ, ಮಹದೇವಪ್ಪ ಹಾವನೂರ, ಸಿದ್ದಲಿಂಗಪ್ಪ ಬಳ್ಳಾರಿ, ಸುಭಾಸ್ ಬನ್ನಿಹಟ್ಟಿ, ಜಗದೀಶ ಭಂಢಾರಿ, ಮಲ್ಲಯ್ಯ ಹಿರೇಮಠ ಇತರರಿದ್ದರು.