ಸಾರಾಂಶ
ಮೈಸೂರು : ಭಗವಂತನು ಅಳತೆಗೆ ಮೀರಿದ ಅಪ್ರಮೇಯ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ. ಅನಂತರಾಮು ತಿಳಿಸಿದರು.
ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಶ್ರಾವಣ ಮಾಸದ 28ನೇ ದಿನ ಲಕ್ಕಣ್ಣದಂಡೇಶ ವಿರಚಿತ ಶಿವತತ್ತ್ವ ಚಿಂತಾಮಣಿ ಕುರಿತು ಪ್ರವಚನ ನೀಡಿದ ಅವರು, ಕೃತಿಯ ಭುವನಕೋಶ ಲೀಲೆಯಲ್ಲಿ ಬರುವಂತೆ ಜಗತ್ತು ಭಗವಂತನಾದ ಶಿವನ ಪ್ರಕಾಶದಲ್ಲಿ ಬೆಳಗುತ್ತಿದೆ. ಇಲ್ಲಿ ಯಾರೂ ಸತ್ಯವಲ್ಲ, ಭಗವಂತನೊಬ್ಬನೆ ಸತ್ಯ. ಶಿವ ಮತ್ತು ಶಕ್ತಿಯಿಂದ ಜಗತ್ತು ಸೃಷ್ಟಿಯಾಗಿದೆ ಎಂದರು.
ಶಿವನು ದಯಾಸಾಗರ. ನಾದ, ಬಿಂದು ಮತ್ತು ಕಳೆಗಳ ಮೂಲಕ ಸೃಷ್ಟಿಯ ನಿರ್ಮಾಣವಾಗಿದೆ. ನಂತರದಲ್ಲಿ ಸತ್ವ, ರಜೋ ಮತ್ತು ತಮೋ ಎಂಬ ತ್ರಿಗುಣಗಳು ಉತ್ಪತ್ತಿಯಾದವು. ಸತ್ವ ಎಂಬುದು ದೇವಗುಣ. ಅದು ಶಾಂತಿ, ನೆಮ್ಮದಿ ದಯೆ, ಕರುಣೆಯನ್ನು ಸೂಚಿಸುತ್ತದೆ. ರಜೋ ಮನುಷ್ಯಗುಣ. ಅದು ಅತಿಯಾದ ಉತ್ಸಾಹ, ಮುಂಗೋಪವನ್ನು ತಿಳಿಸುತ್ತದೆ. ತಮೋ ಎಂಬುದು ರಾಕ್ಷಸಗುಣ. ಅದು ಅತಿಯಾದ ಸ್ವಾರ್ಥವನ್ನು ಪ್ರತಿನಿಧಿಸುತ್ತದೆ. ಮನುಷ್ಯರಲ್ಲಿ ಈ ಮೂರು ಗುಣಗಳ ಮಿಶ್ರಣದಿಂದ ಒಬ್ಬೊಬ್ಬರು ಒಂದೊಂದು ರೀತಿಯ ವ್ಯಕ್ತಿತ್ವವನ್ನು ಹೊಂದುತ್ತಾರೆ ಎಂದು ಅವರು ಹೇಳಿದರು.
ಶಿವನು ಪಂಚತನ್ಮಾತ್ರಗಳು ಮತ್ತು ಪಂಚಭೂತಗಳನ್ನು ಸೃಷ್ಟಿಸಿದನು. ಆಕಾಶಕ್ಕೆ ಶಬ್ಧ, ವಾಯುವಿಗೆ ಸ್ಪರ್ಶ, ಅಗ್ನಿಗೆ ರೂಪ, ಜಲಕ್ಕೆ ರಸ ಮತ್ತು ಪೃಥ್ವಿಗೆ ಗಂಧ ಹೀಗೆ ಒಂದಕ್ಕೊಂದಕ್ಕೆ ಸಂಬಂಧವಿರಿಸಿದನು. ಸೃಷ್ಟಿಯ ಪಂಚಭೂತಗಳಿಗೂ ಮತ್ತು ಮನುಷ್ಯನ ಪಂಚೇಂದ್ರಿಯಗಳಿಗೂ ನೇರವಾದ ಸಂಬಂಧವಿದೆ ಎಂದು ಅವರು ತಿಳಿಸಿದರು.
ವಿದುಷಿ ಧರಿತ್ರಿ ಆನಂದರಾವ್ ವಾಚನ ಮಾಡಿದರು. ಡಾ.ಬಿ.ಎಸ್. ಪ್ರಿಯಾ ಮತ್ತು ಡಾ.ಎಸ್. ನಂಜುಂಡಸ್ವಾಮಿ ಕುಟುಂಬ ವರ್ಗದವರು ಸೇವಾರ್ಥ ನೆರವೇರಿಸಿದರು.