ದಖ್ಖನ್ ಪ್ರಸ್ಥಭೂಮಿಯಲ್ಲಿನ ಸಣ್ಣ ವಿಷಕಾರಿ ಹವಳದ ಹಾವು ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಪತ್ತೆ

| Published : Aug 11 2024, 01:37 AM IST / Updated: Aug 11 2024, 06:55 AM IST

ದಖ್ಖನ್ ಪ್ರಸ್ಥಭೂಮಿಯಲ್ಲಿನ ಸಣ್ಣ ವಿಷಕಾರಿ ಹವಳದ ಹಾವು ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಕಂಡು ಬರುವ 60 ಪ್ರಬೇಧದ ವಿಷಯುಕ್ತ ಹಾವುಗಳಲ್ಲಿ ಅತ್ಯಂತ ಸಣ್ಣ ವಿಷಕಾರಿ ಹವಳದ ಹಾವು ಪ್ರಥಮ ಬಾರಿಗೆ ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ವನ್ಯಜೀವಿ ಧಾಮದಲ್ಲಿ ಕಂಡು ಬಂದಿದೆ.

 ತುಮಕೂರು :  ಭಾರತದಲ್ಲಿ ಕಂಡು ಬರುವ 60 ಪ್ರಬೇಧದ ವಿಷಯುಕ್ತ ಹಾವುಗಳಲ್ಲಿ ಅತ್ಯಂತ ಸಣ್ಣ ವಿಷಕಾರಿ ಹವಳದ ಹಾವು ಪ್ರಥಮ ಬಾರಿಗೆ ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ವನ್ಯಜೀವಿ ಧಾಮದಲ್ಲಿ ಕಂಡು ಬಂದಿದೆ.

30ರಿಂದ 40 ಸೆಂ.ಮೀ ಬೆಳೆಯುವ ಹಾವು: ಹವಳದ ಹಾವುಗಳು ಸುಮಾರು 30 ರಿಂದ 40 ಸೆಂ.ಮೀವರೆಗೆ ಬೆಳೆಯುವ ಸಣ್ಣದಾದ ದುಂಡಾದ ಹಾವಾಗಿವೆ. ಇದರ ದೇಹವು ತಲೆಯಿಂದ ಬಾಲದವರೆಗೆ ತೆಳ್ಳಗೆ ಸಿಲಿಂಡರ್ ಆಕಾರದಲ್ಲಿ ಏಕರೂಪವಾಗಿರುತ್ತದೆ. ದೇಹದ ಮೇಲ್ಮೈ ಕಂದು ಬಣ್ಣ ಹೊಂದಿದ್ದರೆ ಕೆಳ ಭಾಗ ಹಳದಿ ಮಿಶ್ರಿತ ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ತಲೆ ಮತ್ತು ಕುತ್ತಿಗೆ ಕಪ್ಪು ಬಣ್ಣ ಹೊಂದಿದ್ದು ಸಣ್ಣ ಕಣ್ಣುಗಳಿರುತ್ತವೆ. ಬಾಲದ ತುದಿ ಮೊಂಡಾಗಿದ್ದು ಎರಡು ಕಪ್ಪು ಬಣ್ಣದ ಗೆರೆಗಳಿರುತ್ತವೆ.ಈ ಹಾವುಗಳು ದಕ್ಷಿಣ ಭಾರತದ ದಖ್ಖನ್ ಪ್ರಸ್ಥಭೂಮಿಯ ಒಣ ಎಲೆ ಉದುರುವ ಕಾಡು ಹಾಗೂ ತೇವ ಭರಿತ ಎಲೆ ಉದುರುವ ಕಾಡುಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ಹಾವುಗಳಾಗಿವೆ. ತೇವ ಭರಿತ ಮೃದು ಮಣ್ಣು ಮತ್ತು ಕಲ್ಲುಗಳ ಕೆಳಗೆ, ಒಣಗಿ ಬಿದ್ದು ಕೊಳೆಯುತ್ತಿರುವ ಮರಗಳು ಮತ್ತು ಒಣ ತರಗೆಲೆಗಳ ಕೆಳಗೆ ವಾಸಿಸುತ್ತದೆ. ನಿಶಾಚರಿಗಳಾಗಿದ್ದು ರಾತ್ರಿ ವೇಳೆ ಇವುಗಳ ಚಟುವಟಿಕೆ ಜಾಸ್ತಿ ಇರುತ್ತದೆ. ಇವುಗಳ ಆಹಾರವೆಂದರೆ ಹುಳುಹಾವು, ಗೆದ್ದಲು, ಇರುವೆ ಮತ್ತು ಇತರೆ ಕೀಟಗಳ ಮೊಟ್ಟೆಗಳನ್ನು ತಿನ್ನುತ್ತವೆ.

ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ತಂಡದಿಂದ ಹಾವು ಪತ್ತೆ: ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾದ ಈ ಹಾವುಗಳು ದಖ್ಖನ್ ಪ್ರಸ್ಥಭೂಮಿಯ ಕಾಡುಗಳಲ್ಲಿ ವ್ಯಾಪಕವಾಗಿ ಹರಡಿದ್ದರೂ ಅಪರೂಪದಲ್ಲಿ ಕಂಡುಬರುತ್ತವೆ. ವನ್ಯಜೀವಿ ಕಾಯ್ದೆ 1972ರ ಪ್ರಕಾರ ಶೆಡ್ಯುಲ್ 4ರಲ್ಲಿ ಸೇರಿಸಿದ್ದಾರೆ. ಜೀವ ಜಾಲ ಹಾಗೂ ಆಹಾರ ಸರಪಳಿಯಲ್ಲಿ ತಮ್ಮದೇ ಆದ ಮಹತ್ವ ಹೊಂದಿವೆ. 

ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಮತ್ತು ಅವರ ತಂಡ ಈ ಹಾವನ್ನು ಪತ್ತೆ ಮಾಡಿದ್ದಾರೆ.ಪ್ರಪಂಚದಲ್ಲಿ ಸುಮಾರು 3789 ಪ್ರಬೇಧದದ ಹಾವುಗಳಿದ್ದರೆ, ಭಾರತದಲ್ಲಿ 300 ಪ್ರಬೇಧದ ಹಾವುಗಳಿವೆ. ಅವುಗಳಲ್ಲಿ 60 ಪ್ರಬೇಧದ ಹಾವುಗಳು ವಿಷಯುಕ್ತ ಹಾವುಗಳಾಗಿವೆ. 40ಕ್ಕಿಂತ ಹೆಚ್ಚು ಅರೆ-ವಿಷಕಾರಿ ಹಾವುಗಳಾಗಿದ್ದು, 180 ಪ್ರಬೇಧದ ಹಾವುಗಳು ವಿಷ ರಹಿತವಾಗಿವೆ. ತುಮಕೂರು ಜಿಲ್ಲೆಯಲ್ಲಿ ಒಟ್ಟು ೩೮ ಪ್ರಬೇಧದ ಹಾವುಗಳನ್ನು ಗುರುತಿಸಲಾಗಿದ್ದು 6 ವಿಷಯುಕ್ತ ಹಾವುಗಳು ನಮ್ಮ ಜಿಲ್ಲೆಯಲ್ಲಿವೆ. ಶಿರಾ ತಾಲೂಕಿನ ಬುಕ್ಕಾಪಟ್ಟಣ ವನ್ಯಜೀವಿ ಧಾಮದ ಜೀವ ವೈವಿಧ್ಯ ಅಧ್ಯಯನ ತಂಡದಲ್ಲಿ ಬಿ.ವಿ.ಗುಂಡಪ್ಪ ಡಾ.ಜಿ.ಎಸ್.ಮಹೇಶ್, ಡಾ.ಡಿ.ಆರ್.ಪ್ರಸನ್ನಕುಮಾರ್, ಚಂದ್ರಶೇಖರ್ ಉಪಾಧ್ಯಾಯ, ವೆಂಕಟೇಶ್ ಉಪಾಧ್ಯಾಯ, ಮಲ್ಲಿಕಾರ್ಜುನ್.ಎಂ. ಉಪಸ್ಥಿತರಿದ್ದರು ಎಂದು ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ತಿಳಿಸಿದ್ದಾರೆ.