ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತಾರತಮ್ಯ : ಸಿಪಿಐ ಪ್ರತಿಭಟನೆ

| Published : Feb 13 2024, 12:46 AM IST

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತಾರತಮ್ಯ : ಸಿಪಿಐ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ರಾಜ್ಯದ ಜತೆಗೆ ಎಸಗುತ್ತಿರುವ ಅನ್ಯಾಯ ಮತ್ತು ತಾರತಮ್ಯ ನೀತಿಯನ್ನು ಖಂಡಿಸಿ ಸಿಪಿಐ ಮುಖಂಡರು ಸೋಮವಾರ ಸಂಸದರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.

ಸರ್ಕಾರದ ವಿರುದ್ಧ ಘೋಷಣೆ । ರಾಜ್ಯಾದ್ಯಂತ 27 ಸಂಸದರ ಕಚೇರಿಗಳ ಎದುರು ಧರಣಿ; ರಾಧಾ ಸುಂದರೇಶ್

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಕೇಂದ್ರ ಸರ್ಕಾರ ರಾಜ್ಯದ ಜತೆಗೆ ಎಸಗುತ್ತಿರುವ ಅನ್ಯಾಯ ಮತ್ತು ತಾರತಮ್ಯ ನೀತಿಯನ್ನು ಖಂಡಿಸಿ ಸಿಪಿಐ ಮುಖಂಡರು ಸೋಮವಾರ ಸಂಸದರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.ಇದೇ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್.ಎಲ್.ರಾಧಾ ಸುಂದರೇಶ್ ಮಾತನಾಡಿ, ಕೇಂದ್ರ ಸರ್ಕಾರ ಜಿಎಸ್‌ಟಿ, ತೆರಿಗೆ ಹಣ, ಅನುದಾನಗಳ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವೆಸಗುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಇಂದು 27 ಸಂಸದರ ಕಚೇರಿಗಳ ಎದುರು ಧರಣಿ ನಡೆಸಲಾಗುತ್ತಿದೆ ಎಂದರು. ದೇಶವನ್ನು ಮುನ್ನೆಡೆಸುವ ಹಾಗೂ ರಾಜ್ಯಗಳನ್ನು ಸಬಲಗೊಳಿಸಲು ಭಾರತದ ಒಕ್ಕೂಟ ವ್ಯವಸ್ಥೆಯೊಳಗಿರುವ ರಾಜ್ಯ ಗಳಿಂದ ಸಂಗ್ರಹವಾದ ವಸ್ತುಗಳ, ಆಸ್ತಿಗಳ, ವಾಹನಗಳ ಮೇಲಿನ ತೆರಿಗೆ, ಸೆಸ್ ಇತ್ಯಾದಿ ರೂಪದಲ್ಲಿ ಸಂಗ್ರಹಿಸುವ ಹಣವನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆಯಾಗಬೇಕೆಂದು ಹಣಕಾಸು ಆಯೋಗ ರಚಿಸಲಾಗಿದೆ ಎಂದರು. ವಿವಿಧ ಮೂಲಗಳಿಂದ ಸಂಗ್ರಹವಾಗುವ ತೆರಿಗೆ ಹಣ ಆಯಾ ರಾಜ್ಯಗಳನ್ನು ಮತ್ತು ಜನತೆ ಬದುಕನ್ನು ಸಲೀಕರಣ ಗೊಳಿಸಲು ಸಮರ್ಪಕ ಹಾಗೂ ನ್ಯಾಯಯುತವಾಗಿ ಹಂಚಿಕೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ಹೊಣೆಗಾರಿಕೆ ಎಂದು ಹೇಳಿದರು. ಕಳೆದ ಹಲವಾರು ವರ್ಷಗಳಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕಡಿತಗೊಳಿಸಿ 45 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳೇ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ತೆರಿಗೆ ಹಣ ಹಂಚಿಕೆಯಲ್ಲಿ ಎಸಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುವಂತೆ ಒತ್ತಾಯಿಸಿ ರಾಜ್ಯದ ಪಾಲಿನ ತೆರಿಗೆ ಹಣ ಸೇರಿದಂತೆ ನೆಲ, ಜಲ ಹಾಗೂ ಭಾಷೆಯ ಅಸ್ಮಿತೆಯ ಪ್ರಶ್ನೆಗಳು ಬಂದಾಗ ಧ್ವನಿ ಎತ್ತದೇ ಮೌನವಹಿಸಿರುವ ಸಂಸದರ ನಿರ್ಲಕ್ಷ್ಯ ಖಂಡಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿ ಕೆಳಮಕ್ಕಿ ರಮೇಶ್, ಮುಖಂಡರಾದ ಹಮೀದಾ ಬಾನು, ಶಾರದಾ, ತಂಪಿತಾ, ನಳೀನಾ, ಎಚ್.ಕೆ.ಸೋಮೇಗೌಡ, ಜರ್ನಿ ಲೋಬೋ, ಸುರೇಶ್, ನಾರಾಯಣ್ ಹಾಜರಿದ್ದರು.

12 ಕೆಸಿಕೆಎಂ 4ಕೇಂದ್ರ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ಸಿಪಿಐ ಮುಖಂಡರು ಸೋಮವಾರ ಸಂಸದರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.