ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಹಂಚಿಕೆಯಲ್ಲಿ ತಾರತಮ್ಯ ನೀತಿಯಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಮಾತ್ರ ನೀರಿನ ಸಮಸ್ಯೆ ಎಂಬಂತಾಗಿದೆ.
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದಂತೆ ನೀರು ಪೂರೈಕೆಯ ಜವಾಬ್ದಾರಿ ಹೊತ್ತಿರುವ ಬೆಂಗಳೂರು ಜಲಮಂಡಳಿ ಮತ್ತು ಬಿಬಿಎಂಪಿ ಅಧಿಕಾರಿಗಳು ನೀರು ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.
ಶ್ರೀಮಂತರು ವಾಸಿಸುವ ಬಡಾವಣೆಗಳಿಗೆ ಎಂದಿನಂತೆ ನೀರು ಪೂರೈಕೆ ಮಾಡುತ್ತಿದ್ದಾರೆ. ಆದರೆ, ಕೂಲಿ ಕಾರ್ಮಿಕರು ವಾಸಿಸುವ ಕೊಳಗೇರಿ, ಬಡವರು, ಮಧ್ಯಮ ವರ್ಗದವರು ಇರುವ ಬಡಾವಣೆಗಳಿಗೆ ಪೂರೈಕೆ ಮಾಡುವ ನೀರಿನ ಪ್ರಮಾಣವನ್ನು ಕಡಿತಗೊಳಿಸಲಾಗಿದೆ.
ನೀರಿನ ಸಮಸ್ಯೆ ಆರಂಭಕ್ಕೂ ಮೊದಲು ದಿನಬಿಟ್ಟು ದಿನ (ಎರಡು ದಿನಕ್ಕೆ ಒಂದು ಬಾರಿ) ಕಾವೇರಿ ನೀರನ್ನು ನಗರದ ಕೇಂದ್ರ ಭಾಗದ ಎಲ್ಲ ಬಡಾವಣೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಆದರೀಗ ಕೊಳಗೇರಿ, ಬಡವರು ವಾಸಿರುವ ಪ್ರದೇಶಗಳಿಗೆ ಐದಾರು ದಿನಕ್ಕೆ ಒಂದು ಬಾರಿ ಮಾತ್ರ ನೀರು ಎಂಬ ಹೊಸ ಕಾನೂನು ತರಲಾಗಿದೆ.
ಕೇಂದ್ರ ಭಾಗದಲ್ಲಿಯೂ ಸಮಸ್ಯೆ ಉಲ್ಬಣ: ಕಾವೇರಿ ನೀರು ಪೂರೈಕೆ ಆಗುತ್ತಿರುವ ನಗರದ ಕೇಂದ್ರ ಭಾಗದಲ್ಲಿಯೂ ನೂರಾರು ಬಡಾವಣೆ, ಕೊಳಗೇರಿಗಳಿಗೆ ನಿಯಮಿತವಾಗಿ ನೀರು ಪೂರೈಕೆ ಮಾಡದೇ ತಾರತಮ್ಯ ನೀತಿ ಆರಂಭಿಸಿದ ಪರಿಣಾಮ ವಿಜಯನಗರ, ಚಾಮರಾಜಪೇಟೆ, ಬಸವಗುಡಿ, ಮಲ್ಲೇಶ್ವರ, ರಾಜಾಜಿನಗರ, ಬಸವೇಶ್ವರ ನಗರ, ಕೋರಮಂಗಲ, ಗೋವಿಂದ ರಾಜನಗರ, ಜಯನಗರ ಸೇರಿದಂತೆ ಮೊದಲಾದ ಭಾಗದಲ್ಲಿ ನೀರಿನ ಸಮಸ್ಯೆ ಶುರುವಾಗಿದೆ.
ಆದರೆ, ನೀರಿನ ಸಮಸ್ಯೆ ಇರುವ ಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್, ಶ್ರೀಮಂತ ಬಡಾವಣೆಗೆ ಮಾತ್ರ ಭರಪೂರ ನೀರು ಪೂರೈಕೆ ಆಗುತ್ತಿದೆ ಎಂಬ ದೂರುಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಕೇಳಿ ಬರುತ್ತಿವೆ.
ಶ್ರೀಮಂತರಿಂದ ಪ್ರಬಲ ಒತ್ತಡ: ಶ್ರೀಮಂತರು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹೆಚ್ಚಾಗಿರುವ ವಾಸಿಸುವ ಬಡಾವಣೆಗಳಿಗೆ ನಿಗದಿತ ಪ್ರಮಾಣದಲ್ಲಿ ನೀರು ಪೂರೈಕೆ ಆಗಬೇಕೆಂಬ ಒತ್ತಡವರನ್ನು ಜಲಮಂಡಳಿ ಮತ್ತು ಬಿಬಿಎಂಪಿಯ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಒತ್ತಡಕ್ಕೆ ಮಣಿದು ಅಧಿಕಾರಿಗಳು ಶ್ರೀಮಂತರು ವಾಸಿಸುವ ಬಡಾವಣೆಗಳಿಗೆ ಆದ್ಯತೆಯ ಮೇರೆಗೆ ನೀರು ಪೂರೈಕೆ ಮಾಡಲಾಗುತ್ತಿದೆ.
ನೀರಿಗಾರಿ ಕಾದು ಕುಳಿತ ಬಡವರು:
ಯಾವುದೇ ಪ್ರಭಾವ ಅಧಿಕಾರವಿಲ್ಲದ ಕೂಲಿಕಾರರು, ಬಡವರು, ಮಧ್ಯಮ ವರ್ಗದ ಜನರು ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ನೀರು ಪೂರೈಕೆ ಮಾಡುತ್ತಿಲ್ಲ. ಬಡವರಿಗೆ ಮಾತ್ರ ಬರ, ಕೊಳವೆ ಬಾವಿ ಬತ್ತಿ ಹೋಗಿವೆ. ಹೀಗಾಗಿ, ನೀರಿನ ಸಮಸ್ಯೆ ಉಂಟಾಗುತ್ತಿದೆ. ಸಾಧ್ಯವಾದಷ್ಟು ಕಡಿಮೆ ನೀರು ಬಳಕೆ ಮಾಡಿ ಎಂಬ ಸಂದೇಶವನ್ನು ಅಧಿಕಾರಿಗಳು ಕೇಳಿ ಕಳುಸುತ್ತಿದ್ದಾರೆ. ವಿಧಿ ಇಲ್ಲದ ಬಡವರು ನೀರಿಗಾಗಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರು ಇರುವ ಬಡಾವಣೆಗಳ ಹುಡುಕಾಟ: ನೀರಿನ ಸಮಸ್ಯೆ ಇರುವ ಬಡಾವಣೆಗಳಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದ ಕುಟುಂಬಗಳು ಇದೀಗ ನೀರಿನ ಪೂರೈಕೆ ಚನ್ನಾಗಿರುವ ಬಡಾವಣೆಗಳಲ್ಲಿ ಹೆಚ್ಚು ಬಾಡಿಗೆಯಾದರೂ ಪರವಾಗಿಲ್ಲ ಎಂದು ಹೊಸ ಬಾಡಿಗೆ ಮನೆ ಹುಡುಕಾಟ ಆರಂಭಿಸಿದ್ದಾರೆ.
ಆದರೆ, ಕಡು ಬಡವರು ಬೇರೆ ಅವಕಾಶವಿಲ್ಲದೇ ಬರುವ ನೀರಿನ್ನು ಸಂಗ್ರಹಿಸಿಟ್ಟುಕೊಂಡು ಬದುಕು ನಡೆಸುವುದಕ್ಕೆ ಮಾನಸಿಕವಾಗಿ ತಯಾರಿ ಆರಂಭಿಸಿದ್ದಾರೆ.
ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ನೀರು ಹಂಚಿಕೆಯಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡುತ್ತಿಲ್ಲ. ನೀರು ಸರಬರಾಜುಗೆ ಮೀಟರ್‌ಗಳನ್ನು ಅಳವಡಿಕೆ ಮಾಡಲಾ ಗಿದೆ. ಈ ರೀತಿ ಸಮಸ್ಯೆ ಉಂಟಾಗಿರುವ ಬಗ್ಗೆ ನಿರ್ದಿಷ್ಟ ದೂರು ಕಂಡು ಬಂದರೆ ಪರಿಶೀಲನೆ ಮಾಡಿ ಸರಿಪಡಿಸಲಾಗುವುದು ಎಂದರು.
ವಿಜಯನಗರ (ಹೊಸಹಳ್ಳಿ) ನಿವಾಸಿ ಕುಮಾರ್ ಎಂಬುವವರು ಮಾತನಾಡಿ, ವಿಜಯನಗರದ ಹೊಸಹಳ್ಳಿ ಎಕ್ಸ್‌ಟೆನ್ಷನ್‌ನ ಒಂದು ಭಾಗಕ್ಕೆ ಇಂದಿಗೂ ಪ್ರತಿ ದಿನ ನೀರು ಪೂರೈಕೆ ಮಾಡುತ್ತಿದ್ದಾರೆ.
ಅದೇ ಪ್ರದೇಶಕ್ಕೆ ಹೊಂದಿಕೊಂಡಿರುವ ಮಧ್ಯಮ ವರ್ಗದವರು, ಬಡವರು ವಾಸಿಸುತ್ತಿರುವ ಭಾಗಕ್ಕೆ ವಾರಕ್ಕೊಮ್ಮೆ ನೀರು ಎಂಬ ಹೊಸ ನೀತಿ ರೂಪಿಸಲಾಗಿದೆ. ಕುಡಿಯುವ ನೀರಿನ ಹಂಚಿಕೆಯಲ್ಲಿಯೂ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದು ದುರಂತದ ಸಂಗತಿ ಎಂದರು.
ಶುಲ್ಕವಿಲ್ಲದೆ ಅಧಿಕಾರಿಗಳು ಹೇಳಿದಲ್ಲಿ ನೀರು ಹಾಕಿ ಬರಬೇಕಂತೆ: ಮಾಲಿಕರು
ಬೆಂಗಳೂರು ದಕ್ಷಿಣ: ಬೆಳ್ಳಂಬೆಳಿಗ್ಗೆಯೇ ಆರ್‌ಟಿಒ ಅಧಿಕಾರಿಗಳು ಡಿಸಿ ಆದೇಶದ ಮೇರೆಗೆ ನೂರಾರು ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಸೀಜ್ ಮಾಡಿ ಜಲಮಂಡಳಿ ಕಚೇರಿ ಮುಂಭಾಗ ತಂದು ನಿಲ್ಲಿಸಿದ ಸಂದರ್ಭದಲ್ಲಿ ಆಕ್ರೋಶಗೊಂಡ ಮಾಲಿಕರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದೆ ಘಟನೆ ಜರುಗಿದೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ವಾರ್ಡ್‌ನ ಜಂಬೂಸವಾರಿ ದಿಣ್ಣೆಯ ಬಳಿ ಸಭೆ ಕರೆದು ಚರ್ಚಿಸದೆ ಏಕಾಏಕಿ ವಾಹನಗಳನ್ನು ವಶಕ್ಕೆ ಪಡೆದ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಅಧಿಕಾರಿಗಳು ವಿರುದ್ಧ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಖಾಸಗಿ ನೀರಿನ ಟ್ಯಾಂಕರ್ ವಾಹನದ ಮಾಲೀಕರು ಧಿಕ್ಕಾರ ಕೂಗಿದರು.
ಬೆಳ್ಳಿಗ್ಗೆಯಿಂದ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದು ಜಲಮಂಡಳಿಯಿಂದ ನೀರು ತುಂಬಿಸಿಕೊಂಡು ಜಲಮಂಡಳಿ ಅಧಿಕಾರಿಗಳು ಹೇಳಿದ ಸ್ಥಳಗಳಿಗೆ ತೆರಳಿ ಅಲ್ಲಿರುವ ಟ್ಯಾಂಕರ್‌ಗಳಿಗೆ ನೀರು ತುಂಬಿಸಿ ಬರಬೇಕು. ಇದಕ್ಕೆ ಯಾವುದೇ ಶುಲ್ಕವಿಲ್ಲ, ಖಾಸಗಿ ಟ್ಯಾಂಕರ್ ಮಾಲಿಕರೇ ಡೀಸೆಲ್ ವೆಚ್ಚ ಭರಿಸಬೇಕು ಎಂದು ತಿಳಿಸುತ್ತಿದ್ದಾರೆ ಎಂದು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಎಇಇ ಹಾಗೂ ಕೋಣನಕುಂಟೆ ಇನ್ಸ್‌ಪೆಕ್ಟರ್ ಪ್ರತಿಭಟನಾಕಾರರ ಮನವೊಲಿಸಿ ನೀರಿನ ಸಮಸ್ಯೆ ಹೇರಳವಾಗಿದೆ. ಎಲ್ಲಾ ಟ್ಯಾಂಕರ್ ಮಾಲಿಕರ ಜೊತೆ ಚರ್ಚಿಸಿ ಪರಿಹಾರಕ್ಕೆ ಮುಂದಾಗುವುದಾಗಿ ತಿಳಿಸಿದರು.ಖಾಸಗಿ ನೀರಿನ ಟ್ಯಾಂಕರ್ ಮಾಲೀಕ ಹರೀಶ್ ಮಾತನಾಡಿ, ಜನರಿಗೆ ಕುಡಿಯುವ ನೀರಿನ ಬವಣೆ ನೀಗಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಖಾಸಗಿ ನೀರಿನ ಟ್ಯಾಂಕರ್ ಮಾಲಿಕರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ. ಏಕಾಏಕಿ ನಾವೆಲ್ಲರೂ ಪ್ರತಿಭಟನೆ ನಡೆಸಿದರೆ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ನಾವೂ ಮನುಷ್ಯರೇ, ನೀರಿನ ಸಮಸ್ಯೆಯ ಬಗ್ಗೆ ನಮಗೂ ಅರಿವಿದೆ ಎಂದರು.
ಮತ್ತೋರ್ವ ಟ್ಯಾಂಕರ್ ಮಾಲೀಕ ರಾಜು ಮಾತನಾಡಿ, ಆರ್‌ಟಿಒ ಅಧಿಕಾರಿಗಳಿಗೆ ಡಿಸಿ ಆದೇಶಿಸಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಲಕ್ಷಾಂತರ ರುಪಾಯಿಗಳ ಬಂಡವಾಳ ಹೂಡಿಕೆ ಮಾಡಿ ವ್ಯವಹರಿಸುವ ಸಂದರ್ಭದಲ್ಲಿ ಈ ರೀತಿಯಲ್ಲಿ ಮಾಹಿತಿ ನೀಡದೆ ವಾಹನಗಳನ್ನು ವಶಕ್ಕೆ ಪಡೆಯುವುದು ಅಪರಾಧ ಎಂದು ಕಿಡಿಕಾರಿದರು.
ಕಾಂಗ್ರೆಸ್ ಬ್ಯಾನರ್ ಇರುವ ಟ್ಯಾಂಕರ್ ತುಂಬಿಸಬೇಕಂತೆ?
ನೀರಿನ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದು ಜಲಮಂಡಳಿಯಿಂದ ನೀರು ತುಂಬಿಸಿಕೊಂಡು ಜಂಬೂಸವಾರಿ ದಿಣ್ಣೆಯಿಂದ ಸುಮಾರು 50 ರಿಂದ 60 ಕಿ.ಮೀ. ದೂರಕ್ಕೆ ತೆಗೆದುಕೊಂಡು ಹೋಗಿ ಕಾಂಗ್ರೆಸ್ ಬ್ಯಾನರ್ ಹೊದಿಕೆ ಮಾಡಿರುವ ಟ್ಯಾಂಕರ್‌ಗಳಿಗೆ ತುಂಬಿಸಿ ಬರಬೇಕು ಎಂದು ಬಿಟ್ಟು ಕಳುಹಿಸಲಾಗುತ್ತಿದೆ ಎಂಬ ಆರೋಪ ಟ್ಯಾಂಕರ್ ಮಾಲಿಕರಿಂದ ಕೇಳಿಬಂದಿದೆ.
ಬೆಂಗಳೂರಿಗೆ ಅಕ್ಕಪಕ್ಕದ ಜಿಲ್ಲೆಗಳಿಂದ ನೀರು: ಡಿಕೆಶಿ
ಬೆಂಗಳೂರು: ನೀರಿನ ವಿಚಾರದಲ್ಲಿ ಬೆಂಗಳೂರು ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ. ಆದರೂ, ಬೆಂಗಳೂರಿಗೆ ನೀರು ಪೂರೈಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಂಗಳವಾರ ಮಾತನಾಡಿದ ಅವರು, ಬೆಂಗಳೂರಿನ ಸುತ್ತಲಿನ 15 ಕಿ.ಮೀ. ವ್ಯಾಪ್ತಿಯಲ್ಲಿರುವ ನೀರಿನ ಮೂಲಗಳಿಂದ ನಗರಕ್ಕೆ ನೀರು ತರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಹೊಸಕೋಟೆ, ರಾಮನಗರ, ಚನ್ನಪಟ್ಟಣ, ಮಾಗಡಿಯಿಂದ ಟ್ಯಾಂಕರ್ ಮೂಲಕ ನೀರು ತಂದು ನಗರಕ್ಕೆ ಪೂರೈಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಈ ರೀತಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕಾಗಿಯೇ ಮೇಕೆದಾಟು ಯೋಜನೆ ಜಾರಿ ಮಾಡುವುದಕ್ಕೆ ನಾವು ಮುಂದಾಗಿದ್ದೇವೆ. ಬೆಂಗಳೂರಿನ ಪರಿಸ್ಥಿತಿ ಗಮನಿಸಿ ಕೇಂದ್ರ ಸರ್ಕಾರ ಈಗಲಾದರೂ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು ಎಂದರು.