ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಕೊಬ್ಬರಿ ಖರೀದಿ ಪ್ರಮಾಣ ನಿಗದಿಯಲ್ಲಿ ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆ ಬಗ್ಗೆ ತಾರತಮ್ಯ ನೀತಿ ಅನುಸರಿಸಿ ಬೆಳೆಗಾರರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿ ತಾಲೂಕಿನ ನೂರಾರು ಕೊಬ್ಬರಿ ಬೆಳೆಗಾರ ರೈತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಎಪಿಎಂಸಿ ಕಚೇರಿ ಆವರಣದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದ ಕೊಬ್ಬರಿ ಬೆಳೆಗಾರ ರೈತರು ರಾಜ್ಯ ಸರ್ಕಾರದ ಕೊಬ್ಬರಿ ಖರೀದಿ ತಾರತಮ್ಯ ನೀತಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಕೆಲಕಾಲ ಧರಣಿ ನಡೆಸಿ ತಹಸೀಲ್ದಾರ್‌ಗೆ ಕೊಬ್ಬರಿ ಖರೀದಿ ತಾರತಮ್ಯ ನೀತಿ ವಿರೋಧಿಸಿ ಮನವಿ ಪತ್ರ ಅರ್ಪಿಸಿದರು.ಕೊಬ್ಬರಿ ಬೆಳೆಗಾರ ರೈತರು ರಾಜ್ಯ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ಜಿಲ್ಲೆಗೆ ನಿಗದಿ ಪಡಿಸಿರುವ ಕೊಬ್ಬರಿ ಖರೀದಿ ಪ್ರಮಾಣ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮಾತನಾಡಿ, ಕಳೆದ ಸಾಲಿನಲ್ಲಿ ರಾಜ್ಯ ಸರ್ಕಾರ 82 ಸಾವಿರ ಕ್ವಿಂಟಾಲ್ ಕೊಬ್ಬರಿಯನ್ನು ಜಿಲ್ಲೆಯ ರೈತರಿಂದ ಖರೀದಿ ಮಾಡಿತ್ತು. ಪ್ರಸಕ್ತ ಸಾಲಿನಲ್ಲಿ ಕೇವಲ 40 ಸಾವಿರ ಕ್ವಿಂಟಾಲ್ ಖರೀದಿಯನ್ನು ನಿಗದಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತುಮಕೂರು ಜಿಲ್ಲೆಗೆ 3.40 ಲಕ್ಷ ಕ್ವಿಂಟಾಲ್ ಪ್ರಮಾಣದ ಕೊಬ್ಬರಿ ಖರೀದಿ ನಿಗದಿ ಮಾಡಿದ್ದರೆ, ಹಾಸನ ಜಿಲ್ಲೆಗೆ 1.75 ಲಕ್ಷ ರು ಕ್ವಿಂಟಾಲ್ ನಿಗದಿಮಾಡಿದೆ. ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆಯದ ಚಾಮರಾಜನಗರ ಜಿಲ್ಲೆಗೂ 50 ಸಾವಿರ ಕ್ವಿಂಟಾಲ್ ಖರೀದಿಗೆ ನಿಗದಿ ಪಡಿಸಲಾಗಿದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ತೆಂಗು ಬೆಳೆ ಇರುವ ಮಂಡ್ಯ ಜಿಲ್ಲೆಗೆ ಕಳೆದ ಸಾಲಿಗಿಂತಲೂ ಕಡಿಮೆ ಪ್ರಮಾಣ ನಿಗದಿ ಪಡಿಸಿ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಇದು ಅವೈಜ್ಞಾನಿಕ ಖರೀದಿ ನೀತಿಯಾಗಿದೆ. ತಕ್ಷಣವೇ ತನ್ನ ತಾರತಮ್ಯ ನೀತಿ ಸರಿಪಡಿಸಿ ಜಿಲ್ಲೆಯಿಂದ ಕನಿಷ್ಠ 90 ಸಾವಿರ ಕ್ವಿಂಟಾಲ್ ಕೊಬ್ಬರಿ ಖರೀದಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರೂ ಕೊಬ್ಬರಿ ಖರೀದಿ ನೀತಿಯಲ್ಲಿ ಆಗಿರುವ ತಾರತಮ್ಯದ ವಿರುದ್ದ ಧ್ವನಿಯೆತ್ತಿ ಜಿಲ್ಲೆಯ ರೈತರ ಹಿತಕಾಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ತೆಂಗಿನ ಬೆಳೆ ವಿಸ್ತಾರಗೊಳ್ಳುತ್ತಿದೆ. ಕೊಬ್ಬರಿ ಉತ್ಪಾದಕರ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ. ರಾಜ್ಯ ಸರ್ಕಾರ ಕೊಬ್ಬರಿ ಖರೀದಿ ವೇಳೆ ಜಿಲ್ಲೆಯ ತೆಂಗು ಬೆಳೆ ಕ್ಷೇತ್ರದ ವಿಸ್ತಾರತೆ ಗಮನಿಸಬೇಕು. ಇಂದು ಸಾಂಕೇತಿಕವಾಗಿ ಮನವಿ ಅರ್ಪಿಸಿದ್ದೇವೆ. ಸರ್ಕಾರ ತನ್ನ ತಾರತಮ್ಯ ನೀತಿಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಕರಪತ್ರ ಹಂಚಿ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಚಳವಳಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ರೈತ ಮುಖಂಡ ಚೌಡೇನಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಕೆ.ಆರ್.ಪೇಟೆ ಪಟ್ಟಣ ಮತ್ತು ಕಿಕ್ಕೇರಿ ಎ.ಪಿ.ಎಂ.ಸಿ ಯಲ್ಲಿ ಮಾತ್ರ ಕೊಬ್ಬರಿ ಖರೀದಿ ಕೇಂದ್ರ ತೆರೆಯಲಾಗಿದೆ. ತಾಲೂಕಿನ ವಿವಿಧ ಭಾಗಗಳಿಂದ ರೈತರು ಖರೀದಿ ನೊಂದಣಿಗೆ ಹಗಲು ರಾತ್ರಿ ಕಾದು ನಿಲ್ಲಬೇಕಾಗಿದೆ. ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲೂ ಕೊಬ್ಬರಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.ನಂತರ ತಹಸೀಲ್ದಾರ್ ನಿಸರ್ಗಪ್ರಿಯ ರೈತರ ಮನವಿ ಸ್ವೀಕರಿಸಿ ರೈತರ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮುದ್ದುಕುಮಾರ್, ಚೌಡೇನಹಳ್ಳಿ ಕೃಷ್ಣೇಗೌಡ, ಕೃಷ್ಣಾಪುರ ಬಸವರಾಜು, ಕೊಬ್ಬರಿ ಬೆಳೆಗಾರರಾದ ಐ.ಕೆ.ಚಂದ್ರಶೇಖರ್, ನಾರಾಯಣಗೌಡ, ಶಂಭುಲಿಂಗೇಗೌಡ, ಬಿ.ಎಲ್.ಬಾಲಕೃಷ್ಣ, ರಾಮೇಗೌಡ ಸೇರಿದಂತೆ ನೂರಾರು ರೈತರು, ಬೆಳೆಗಾರರು ಇದ್ದರು.