ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕೆರೆಗೆ ಕೆ.ಎಸ್.ನರಸಿಂಹಸ್ವಾಮಿ ಸರೋವರ ಎಂದು ಸರ್ಕಾರ ನಾಮಕರಣ ಮಾಡಿರುವುದರಿಂದ ಕೆರೆ ಅಭಿವೃದ್ಧಿ ಜೊತೆಗೆ ರೈತರಿಗಾಗಿ ವರ್ಷಪೂರ್ತಿ ನೀರು ಇರುವಂತಾಗಬೇಕು ಎಂದು ಕಾವ್ಯಾಸಕ್ತ ಪ್ರಿಯರು ತಿಳಿಸಿದರು.ಸರ್ಕಾರಿ ಸ್ವಾಮ್ಯದ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ.ಕಿಕ್ಕೇರಿಕೃಷ್ಣಮೂರ್ತಿ, ಸದಸ್ಯರು ಕೆ.ಎಸ್.ನರಸಿಂಹಸ್ವಾಮಿ ಸರೋವರಕ್ಕೆ ನಾಮಫಲಕ ನಿರ್ಮಾಣ, ಕವಿಗಳ ಕಾವ್ಯ ರಚನೆಗೆ ಸ್ಫೂರ್ತಿಯಾಗಿದ್ದ ಅಶ್ವಥಕಟ್ಟೆ ಜೀಣೋದ್ಧಾರಕ್ಕೆ ಸ್ಥಳ ವೀಕ್ಷಣೆ ಮಾಡಿದರು.
ಅಂತಾರಾಷ್ಟ್ರೀಯ ಜಾನಪದ ಗಾಯಕರಾದ ಟ್ರಸ್ಟಿ ಡಾ.ಅಪ್ಪಗೆರೆ ತಿಮ್ಮರಾಜು ಮಾತನಾಡಿ, ಕವಿ ಹೆಸರಿನಲ್ಲಿ ಸರೋವರವಾಗಿ ಕೆರೆ ಆಗುತ್ತಿರುವುದು ಕನ್ನಡ ಸಾರಸ್ವತ ಲೋಕದಲ್ಲಿಯೇ ಪ್ರಥಮವಾಗಿದೆ. ಇದರಲ್ಲಿ ಅಧ್ಯಕ್ಷ ಕಿಕ್ಕೇರಿಕೃಷ್ಣಮೂರ್ತಿ ಹಠ, ಪರಿಶ್ರಮ ಸಾಕಷ್ಟಿದೆ. ಬಡತನದಲ್ಲಿ ಬದುಕಿದ ಕವಿ ಕೆ.ಎಸ್.ನ ಇಡೀ ವಿಶ್ವಕ್ಕೆಕಾವ್ಯದ ಮೂಲಕ ಕಿಕ್ಕೇರಿ ಪರಿಚಯಿಸಿದ್ದು, ಇದೇ ನಾಡಿಗೆ ನೀಡಿದ ಅಮೂಲ್ಯ ಕೊಡುಗೆ ಎಂಬುದನ್ನು ಮರೆಯಬಾರದು ಎಂದರು.ಕವಿ ಹುಟ್ಟೂರಿನ ಕೆರೆಯ ಏರಿ, ತೆಂಗಿನ ಸಾಲು, ಬಾಳೆ ತೋಟ, ಎತ್ತಿನ ಬಂಡಿ, ಮಲ್ಲಿಗೆ ತೋಟ, ನವಿಲಿನ ನಾಟ್ಯ, ಕೋಗಿಲೆ ಕುಹು ಕುಹು, ಬ್ರಹ್ಮೇಶ್ವರ ದೇಗುಲ, ಶಾನುಭೋಗರ ವಠಾರದ ಮನೆ, ಬಳೆಗಾರರು, ಬೀಸುಗಲ್ಲಿನ ಅಕ್ಕಿ ಬೀಸುವ, ಹಕ್ಕಿಗಳ ಚಿಲಿಪಿಲಿ ಎಲ್ಲವನ್ನು ತಮ್ಮ ಕಾವ್ಯದಲ್ಲಿ ಕಾಪಿಡಿಸಿ ತಮ್ಮೂರಿನ ಅಂದ, ಚಂದ ಹೆಚ್ಚಿಸಿದ್ದಾರೆ ಎಂದು ಸ್ಮರಿಸಿದರು.
ಟ್ರಸ್ಟ್ ಅಧ್ಯಕ್ಷಡಾ. ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಕವಿ ಹೆಸರು ವಿಶ್ವಮಾನ್ಯವಾಗಬೇಕು. ಯುವ ಪೀಳಿಗೆ ತಲೆಮಾರಿನಲ್ಲಿ ಕವಿ ಹೆಸರು ಶಾಶ್ವತವಾಗಿಸಲು ಬಲು ದೊಡ್ಡ ಕನಸಿದೆ. ನನಸಾಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸಹಕಾರವಿದೆ ಎಂದರು.
ಕೆಪಿಸಿಸಿ ಸದಸ್ಯ ಹಾಗೂ ಟ್ರಸ್ಟಿ ಸುರೇಶ್ ಮಾತನಾಡಿ, ಟ್ರಸ್ಟ್ ಕೆಲಸಕ್ಕೆ ಸರ್ಕಾರ ಸಹಕರಿಸಲು ಮುಂದಾಗಿದೆ. ರೈತರ ಜೀವನಾಡಿ ಕೆರೆಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.
ಇದೇ ವೇಳೆ ಕೆರೆ ಬಲುಬೇಗ ಪುನಶ್ಚೇತನ, ಅಭಿವೃದ್ಧಿ, ಒತ್ತುವರಿ ತೆರವು ಎಲ್ಲವೂ ಆಗಲಿ. ವಾಕಿಂಗ್ ಪಾಥ್, ಜಾಗಿಂಗ್ ಪಾಥ್ ಎಂದುಸ್ಥಳೀಕರು ಆಶಿಸುತ್ತಿದ್ದಾರೆ. ಹಂತ ಹಂತವಾಗಿ ಅಭಿವೃದ್ಘಿಗೆ ಆದ್ಯತೆ ನೀಡಲಾಗುವುದು ತೀರ್ಮಾನಿಸಲಾಯಿತು.ಈ ವೇಳೆ ಕೆ.ಎಸ್.ನ ಟ್ರಸ್ಟ್ ಅ ಸುರೇಶ್, ಮಾದಾಪುರ ಸುಬ್ಬಣ್ಣ, ನಗರ ಶ್ರೀನಿವಾಸ ಉಡುಪ, ಮುಖಂಡರಾದ ಉಮೇಶ್, ಕೆ.ವೈ. ಹರೀಶ್, ಧರ್ಮ, ಕೆ.ವಿ. ಅರುಣಕುಮಾರ್, ಜಾಣೇಗೌಡ, ರಮೇಶ್, ಲೋಕೇಶ್, ನಾಗರಾಜು, ಮಹದೇವು ಮತ್ತಿತರರಿದ್ದರು.