"ಹೆಂಡತಿ ನನಗೆ ವಿಚ್ಛೇದನ ನೀಡದೆ ಎರಡನೇ ಗಂಡನೊಂದಿಗೆ ನೆಲೆಸಿದ್ದಾಳೆ. ನನ್ನಿಂದ ಜೀವನಾಂಶ ಪಡೆಯುತ್ತಾ ಆತನೊಂದಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ಸಂತೋಷದ ಕ್ಷಣಗಳನ್ನು ಅನುಭವಿಸುತ್ತಿದ್ದಾಳೆ " ಎಂದು ಪತಿ ತೋಡಿಕೊಂಡ ಅಳಲು ಆಲಿಸಿದ ಹೈಕೋರ್ಟ್, ಪತ್ನಿಗೆ ಮಾಸಿಕ ಐದು ಸಾವಿರ ರು. ಜೀವನಾಂಶ ಪಾವತಿಸಲು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಂಗಳೂರು"ಹೆಂಡತಿ ನನಗೆ ವಿಚ್ಛೇದನ ನೀಡದೆ ಎರಡನೇ ಗಂಡನೊಂದಿಗೆ ನೆಲೆಸಿದ್ದಾಳೆ. ನನ್ನಿಂದ ಜೀವನಾಂಶ ಪಡೆಯುತ್ತಾ ಆತನೊಂದಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ಸಂತೋಷದ ಕ್ಷಣಗಳನ್ನು ಅನುಭವಿಸುತ್ತಿದ್ದಾಳೆ " ಎಂದು ಪತಿ ತೋಡಿಕೊಂಡ ಅಳಲು ಆಲಿಸಿದ ಹೈಕೋರ್ಟ್, ಪತ್ನಿಗೆ ಮಾಸಿಕ ಐದು ಸಾವಿರ ರು. ಜೀವನಾಂಶ ಪಾವತಿಸಲು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಪತ್ನಿಗೆ ಜೀವನಾಂಶ ಪಾವತಿಸಲು ತನಗೆ ನಿರ್ದೇಶಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೊಸಕೋಟೆ ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಮಧ್ಯಂತರ ಆದೇಶ ಮಾಡಿದೆ. ಅಲ್ಲದೆ, ಅರ್ಜಿ ಪ್ರತಿವಾದಿಯಾಗಿರುವ ರವಿಯ ಪತ್ನಿ ಬೃಂದಾ (ಇಬ್ಬರ ಹೆಸರು ಬದಲಿಸಲಾಗಿದೆ) ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.ಕೇವಲ ಕೌಟುಂಬಿಕ ದೌರ್ಜನ್ಯದಿಂದ ಮಹಿಳಾ ರಕ್ಷಣಾ ಕಾಯ್ದೆಯಷ್ಟೆ ಅಲ್ಲ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498ಎ (ಪತಿ ಅಥವಾ ಆತನ ಸಂಬಂಧಿಕರಿಂದ ಮಹಿಳೆ ಮೇಲೆ ನಡೆಯುವ ದೈಹಿಕ ಅಥವಾ ಮಾನಸಿಕ ಕಿರುಕುಳ ಹಾಗೂ ಕ್ರೌರ್ಯವನ್ನು ಅಪರಾಧವೆಂದು ಪರಿಗಣಿಸುವ ಕಾನೂನು) ಸಹ ದುರ್ಬಳಕೆ ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಇದೇ ವೇಳೆ ತೀಕ್ಷ್ಣವಾಗಿ ನುಡಿದಿದೆ.
ಪತ್ನಿ ಸೆಲೆಬ್ರೇಷನ್:ವಿಚಾರಣೆ ವೇಳೆ ರವಿ ಪರ ವಕೀಲರು, ಸ್ವಾಮಿ..ಅರ್ಜಿದಾರರು ಬೃಂದ ಅವರ ಮೊದಲ ಪತಿಯಾಗಿದ್ದಾರೆ. ಆಕೆ ರವಿ ವಿರುದ್ಧ ಕೌಟುಂಬಿಕ ದೌರ್ಜನ್ಯದಿಂದ ಮಹಿಳಾ ರಕ್ಷಣಾ ಕಾಯ್ದೆಯಡಿ ಕೇಸ್ ದಾಖಲಿಸಿ ಜೀವನಾಂಶ ಪಡೆಯುತ್ತಿದ್ದಾರೆ. ರವಿಗೆ ವಿಚ್ಛೇದನ ನೀಡದೆಯೇ ಮತ್ತೊಬ್ಬ ವ್ಯಕ್ತಿಯನ್ನು ಎರಡನೇ ಮದುವೆಯಾಗಿದ್ದಾರೆ. ಅರ್ಜಿಯೊಂದಿಗೆ ಲಗತ್ತಿಸಿರುವ ಪೋಟೋಗಳನ್ನು ನೋಡಿದರೆ ಆಕೆ ಎರಡನೇ ಪತಿಯೊಂದಿಗೆ ವಿವಾಹ ವಾರ್ಷಿಕೋತ್ಸವನ್ನು ಸೆಲೆಬ್ರೇಷನ್ ಮಾಡಿಕೊಂಡಿರುವುದು ಕಾಣಸಿಗುತ್ತಿದೆ ಎಂದು ವಿವರಿಸಿದರು.
ಅದಕ್ಕೆ ನ್ಯಾಯಮೂರ್ತಿಗಳು, ಅಂದರೆ ಮೊದಲ ಪತಿಯಿಂದ ಜೀವನಾಂಶ ಪಡೆದು ಎರಡನೇ ಪತಿಯೊಂದಿಗೆ ಪತ್ನಿ ನೆಲೆಸಿದ್ದಾರಾ ಎಂದಾಗ ಅರ್ಜಿದಾರರ ಪರ ವಕೀಲರು, ಹೌದು ಸ್ವಾಮಿ. ಮೊದಲ ಪತಿಯಿಂದ ಜೀವನಾಂಶ ಪಡೆದು ಎರಡನೇ ಪತಿಯೊಂದಿಗೆ ವಿವಾಹ ವಾರ್ಷಿಕೋತ್ಸವದ ಆಚರಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ ಎಂದು ಉತ್ತರಿಸಿದರು.ಆಗ ಅಚ್ಚರಿಯಿಂದ ನ್ಯಾಯಮೂರ್ತಿಗಳು, ಓಹೋ ಹಾಗಾದರೆ ಮೊದಲ ಪತಿ ನೀಡಿದ ಜೀವನಾಂಶ ಹಣವನ್ನು ಎರಡನೇ ಪತಿಯ ಜೊತೆಗಿನ ಸಂಭ್ರಮಾಚರಣೆಗೆ ಬಳಸಲಾಗುತ್ತಿದೆ ಎಂದರು
ಜೀವನಾಂಶ ವಸೂಲಿಗಾಗಿಮಹಿಳಾ ಕಾಯ್ದೆಯಡಿ ದೂರು
ಕೋರ್ಟ್‌ನಲ್ಲಿ ವಾದ ಮಂಡಿಸಿದ ರವಿ ಪರ ವಕೀಲರು, ಅರ್ಜಿದಾರರ ವಿಚ್ಛೇದನ ನೀಡಿಲ್ಲ, ಆದರೆ, ಜೀವನಾಂಶ ವಸೂಲಿ ಮಾಡಬೇಕೆಂಬ ಉದ್ದೇಶದಿಂದ ರವಿ ವಿರುದ್ಧ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣಾ ಕಾಯ್ದೆಯಡಿ ಪತ್ನಿ ದೂರು ದಾಖಲಿಸಿದ್ದಾರೆ. ಇದು ಸ್ಪಷ್ಟವಾಗಿ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ. ಹಾಗಾಗಿ, ಜೀವನಾಂಶ ನೀಡಲು ಅಧೀನ ನ್ಯಾಯಾಲಯ ಹೊರಡಿಸಿದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಮೂರ್ತಿಗಳನ್ನು ಕೋರಿದರು. ಈ ವಾದ ಪರಿಗಣಿಸಿದ ನ್ಯಾಯಪೀಠ, ಕೇವಲ ಕೌಟುಂಬಿಕ ದೌರ್ಜನ್ಯದಿಂದ ಮಹಿಳಾ ರಕ್ಷಣಾ ಕಾಯ್ದೆಯಷ್ಟೆ ಅಲ್ಲದೆ, ಭಾರತೀಯ ದಂಡ ಸಂಹಿತೆ ಸೆಕ್ಷನ್ (ಐಪಿಸಿ) 498ಎ ಸಹ ದುರ್ಬಳಕೆಯಾಗುತ್ತಿದೆ ಎಂದು ಕಟುವಾಗಿ ಹೇಳಿ, ಪತ್ನಿಗೆ ಜೀವನಾಂಶ ನೀಡಲು ಅರ್ಜಿದಾರರಿಗೆ ಅಧೀನ ನ್ಯಾಯಾಲಯವು ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಿತು.