ಆರು ವರ್ಷಗಳ ಹಿಂದೆ ಆರೋಪಿ ಹೊನ್ನೂರಪ್ಪ ಅದೇ ಗ್ರಾಮದ ನಿವಾಸಿ ರಾಜೇಶ್ವರಿಯನ್ನು ಮದುವೆಯಾಗಿದ್ದ.

ಬಳ್ಳಾರಿ: ಪತ್ನಿಯ ಶೀಲ ಶಂಕಿಸಿ ಪದೇಪದೇ ಮನೆಯಲ್ಲಿ ಜಗಳವಾಡುತ್ತಿದ್ದ ವ್ಯಕ್ತಿಯೋರ್ವ ಪತ್ನಿ ಹಾಗೂ 7 ತಿಂಗಳ ಪುತ್ರಿಯನ್ನು ಸುತ್ತಿಗೆಯಿಂದ ದಾರುಣವಾಗಿ ಹತ್ಯೆಗೈದಿರುವ ಘಟನೆ ನಗರದ ಅಂದ್ರಾಳು ಪ್ರದೇಶದಲ್ಲಿ ಗುರುವಾರ ರಾತ್ರಿ ನಡೆದಿದೆ. ಅಂದ್ರಾಳು ನಿವಾಸಿ ರಾಜೇಶ್ವರಿ (24) ಹಾಗೂ ಪುತ್ರಿ ಅಶ್ವಿನಿ ಕೊಲೆಯಾದವರು. ಪತಿ ಹೊನ್ನೂರಪ್ಪ (28) ಕೊಲೆಗೈದ ಆರೋಪಿ.

ಆರು ವರ್ಷಗಳ ಹಿಂದೆ ಆರೋಪಿ ಹೊನ್ನೂರಪ್ಪ ಅದೇ ಗ್ರಾಮದ ನಿವಾಸಿ ರಾಜೇಶ್ವರಿಯನ್ನು ಮದುವೆಯಾಗಿದ್ದ. ದಂಪತಿಗೆ ಮೂವರು ಮಕ್ಕಳಿದ್ದು, ತಂದೆಯಿಂದಲೇ ಕೊಲೆಯಾದ 7 ತಿಂಗಳ ಅಶ್ವಿನಿ ಕೊನೆಯವರು. ಪತ್ನಿ ಶೀಲ ಶಂಕಿಸಿ ಆಗಾಗ್ಗೆ ಜಗಳವಾಡುತ್ತಿದ್ದ ಆರೋಪಿಯು ಮಗಳು ಅಶ್ವಿನಿ ನನಗೆ ಹುಟ್ಟಿದ್ದಲ್ಲ. ಇದರ ತಂದೆ ಯಾರೆಂದು ಕಂಡು ಹಿಡಿಯುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಪತ್ನಿಗೆ ಆಗಾಗ್ಗೆ ನಿಂದಿಸುತ್ತಿದ್ದ ಎನ್ನಲಾಗಿದೆ.

ಪತಿಯ ಕಿರುಕುಳವನ್ನು ತನ್ನ ತವರು ಮನೆಯವರ ಮುಂದೆ ಹೇಳಿಕೊಳ್ಳುತ್ತಿದ್ದ ಮೃತ ರಾಜೇಶ್ವರಿಯು, ಅಶ್ವಿನಿ ನನಗೆ ಹುಟ್ಟಿದ ಮಗುವಲ್ಲ. ಇದು ಯಾರಿಗೆ ಹುಟ್ಟಿದ್ದು ಎಂಬುದನ್ನು ಪತ್ತೆ ಮಾಡುತ್ತೇನೆ ಎಂದು ಪುಟ್ಟ ಮಗುವಿನ ಮೇಲೂ ಪತಿ ಹಲ್ಲೆ ನಡೆಸುತ್ತಾನೆ. ನಿತ್ಯ ಮನೆಯಲ್ಲಿ ಜಗಳದಿಂದ ರೋಸಿ ಹೋಗಿದ್ದೇನೆ. ನೆಮ್ಮದಿಯೇ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಳು.

ತಾಯಿ-ಮಗು ಸ್ಥಳದಲ್ಲೇ ಸಾವು:

ಗುರುವಾರ ರಾತ್ರಿ 9.30ರ ಹೊತ್ತಿಗೆ ಪತ್ನಿಯೊಂದಿಗೆ ಜಗಳ ತೆಗೆದ ಹೊನ್ನೂರಪ್ಪ ಸುತ್ತಿಗೆಯಿಂದ ಪತ್ನಿ ಹಾಗೂ ಮಗುವಿನ ಮೇಲೆ ದಾಳಿ ನಡೆಸಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದು ತಾಯಿ-ಮಗು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೂಡಲೇ ಅಲ್ಲಿಂದ ಆರೋಪಿ ಪರಾರಿಯಾಗಿದ್ದಾನೆ. ಕೊಲೆಯಾದ ರಾಜೇಶ್ವರಿ ಸಹೋದರ ಸುರೇಶ್ ನೀಡಿದ ದೂರಿನನ್ವಯ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ಕುರಿತು ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್, ಕೊಲೆ ಆರೋಪಿ ಹೊನ್ನೂರಪ್ಪ ಪೊಲೀಸರಿಗೆ ಶರಣಾಗಿದ್ದಾನೆ. ಕೃತ್ಯ ಕುರಿತು ಆರೋಪಿಯಿಂದ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಕೃತ್ಯದ ಸ್ಥಳದಲ್ಲಿ ಆರೋಪಿಯ ತಾಯಿ ಲಕ್ಷ್ಮಿ ಸಹ ಇದ್ದು, ಆಕೆಯ ಪಾತ್ರ ಏನೆಂಬುದರ ಕುರಿತು ತನಿಖೆ ಮಾಡಲಾಗುತ್ತಿದೆ. ಒಂದು ವೇಳೆ ಆಕೆಯ ಪಾತ್ರ ಕಂಡು ಬಂದರೆ 2ನೇ ಆರೋಪಿಯಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು. ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಬಗ್ಗೆ ನಮಗೆ ಯಾವ ಮಾಹಿತಿ ಇಲ್ಲ. ಮೃತ ಮಹಿಳೆಯ ಅಣ್ಣನೇ ದೂರು ನೀಡಿದ್ದು, ವರದಕ್ಷಿಣೆಯ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ ಎಂದು ಎಸ್ಪಿ ಸುಮನ್ ಪನ್ನೇಕರ್ ಸ್ಪಷ್ಟಪಡಿಸಿದರು.