ಸಾರಾಂಶ
ಕೊಪ್ಪಳ: ಜಾತಿ ಗಣತಿ ವರದಿ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಗಿಣಿಗೇರಾ ವಿಮಾನ ತಂಗುದಾಣದಲ್ಲಿ ಮಾತನಾಡಿದ ಅವರು, ದೆಹಲಿಗೆ ಪ್ರವಾಸ ಮಾಡುವುದಿಲ್ಲ. ದೆಹಲಿಗೆ ಪ್ರವಾಸ ಮಾಡುತ್ತೇನೆ ಎಂದು ಯಾರು ಹೇಳಿದರು? ನಾನು ದೆಹಲಿಗೆ ಹೋಗುವುದಿಲ್ಲ ಎಂದರು.ಜಾತಿ ಗಣತಿ ವರದಿ ಜಾರಿ ಮಾಡುವ ಅಭಿಪ್ರಾಯ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಆ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಾಗುವುದು. ಯಾವಾಗ ಮಾಡುವುದು ಎಂಬುದನ್ನು ಹಿಂದುಳಿದ ವರ್ಗಗಳ ಆಯೋಗದೊಂದಿಗೆ ಚರ್ಚಿಸುತ್ತೇವೆ. ಅದಕ್ಕೆಲ್ಲ ಸಮಯ ಬೇಕಾಗುತ್ತದೆ. ಹಿಂದುಳಿದ ವರ್ಗಗಳ ಹಾಸ್ಟೆಲ್ ಮಕ್ಕಳು ಮೈಸೂರಿನಲ್ಲಿ ಸಮಾವೇಶ ಮಾಡಿದಾಗ ನಾನು ಜಾತಿ ಗಣತಿ ವರದಿ ತೆಗೆದುಕೊಂಡಿದ್ದೇನೆ. ಆ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಹಾಗೂ ಕ್ಯಾಬಿನೆಟ್‌ನೊಂದಿಗೆ ಮಾತಾಡುತ್ತೇನೆ ಎಂದು ಹೇಳಿದ್ದೆ. ಸರ್ಕಾರದ ಹಂತದಲ್ಲಿ ತೀರ್ಮಾನ ಮಾಡಲಾಗುವುದು ಎಂದರು.
ಒಳ ಮೀಸಲಾತಿ ಜಾರಿಗೆ ಕುರಿತು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಈ ಬಗ್ಗೆ ಕ್ಯಾಬಿನೆಟ್ ಹಾಗೂ ಹೈಕಮಾಂಡ್‌ನೊಂದಿಗೆ ಚರ್ಚೆ ಮಾಡಬೇಕು.ಜೆಡಿಎಸ್ ಮುಖಂಡ ಜಿ.ಟಿ. ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಮಾತನಾಡಿದ ಕುರಿತು ಪ್ರಶ್ನಿಸಿದಾಗ, ಜಿ.ಟಿ. ದೇವೇಗೌಡ ಹೇಳಿರುವುದು ಸರಿಯಾಗಿದೆ. ಅವರ ಪಕ್ಷದವರೇ ಹೇಳಿದ ಮೇಲೆ ಮತ್ತೇನಿದೆ? ಕುಮಾರಸ್ವಾಮಿ ಅವರಿಗೆ ನನ್ನ ಬಗ್ಗೆ ಭಯ ಇದೆ. ಬಿಜೆಪಿ, ಜೆಡಿಎಸ್‌ನವರಿಗೆ ನಾನು ಅಧಿಕಾರದಲ್ಲಿದ್ದರೆ ದುರ್ಬಲವಾಗುತ್ತೇವೆ ಎಂಬ ಭಯ ಇದೆ ಎಂದರು.
ನಾನು ಚಾಮುಂಡಿಯಲ್ಲಿ ಹೇಳಿದ್ದು, ಪ್ರತಿವರ್ಷ ದಸರಾ ಮಾಡುತ್ತೇವೆ. ಮುಂದಿನ ವರ್ಷವೂ ದಸರಾ ಮಾಡುತ್ತೇವೆ. ಸತೀಶ ಜಾರಕಿಹೊಳಿ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಅದರ ಬಗ್ಗೆ ಉಹಾಪೋಹ ಬೇಡ. ಒಳ್ಳೆಯದನ್ನು ಹೇಳಬೇಕು. ಕೇವಲ ನೆಗೆಟಿವ್ ಹೇಳಬಾರದು ಎಂದರು.