ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ ಕುರಿತು ಅಧಿವೇಶನದಲ್ಲಿ ಚರ್ಚೆ: ಸಹಕಾರ ಸಚಿವ ಕೆ.ಎನ್. ರಾಜಣ್ಣ

| Published : Feb 11 2024, 01:50 AM IST / Updated: Feb 11 2024, 05:06 PM IST

ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ ಕುರಿತು ಅಧಿವೇಶನದಲ್ಲಿ ಚರ್ಚೆ: ಸಹಕಾರ ಸಚಿವ ಕೆ.ಎನ್. ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲ ಮಾಡಿ ಬೆಳೆ ಬೆಳೆಯುವ ರೈತರ ಬದುಕು ಹಸನಾಗಬೇಕಿದೆ. ಸರ್ಕಾರ ಹಾಗೂ ಸಹಕಾರಿ ಸಂಸ್ಥೆಗಳು ರೈತರ ಕಷ್ಟಕ್ಕೆ ಸ್ಪಂದಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆ ಕುರಿತು ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಸಾಲ ಮಾಡಿ ಬೆಳೆ ಬೆಳೆಯುವ ರೈತರ ಬದುಕು ಹಸನಾಗಬೇಕಿದೆ. ಸರ್ಕಾರ ಹಾಗೂ ಸಹಕಾರಿ ಸಂಸ್ಥೆಗಳು ರೈತರ ಕಷ್ಟಕ್ಕೆ ಸ್ಪಂದಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆ ಕುರಿತು ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ತಾಲೂಕಿನ ಅಗಡಿ ಗ್ರಾಮದಲ್ಲಿ ಶನಿವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಗೋದಾಮು ಹಾಗೂ ವಾಣಿಜ್ಯ ಮಳಿಗೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಯ ಸಾಧಕ ಬಾಧಕಗಳ ಬಗ್ಗೆ ಕೂಡ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು. ಸಚಿವ ಶಿವಾನಂದ ಪಾಟೀಲ ಅವರಿಗೆ ವಿಜಯಪುರದಿಂದ ಬಾಗಲಕೋಟೆಗೆ ಬ್ಯಾಂಕ್‌ ಪ್ರತ್ಯೇಕಗೊಳಿಸಿದ ಅನುಭವವಿದೆ. 

ಅವರ ಅನುಭವವನ್ನೂ ಪಡೆದು ಧಾರವಾಡದಿಂದ ಪ್ರತ್ಯೇಕಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಸಹಕಾರ ಸಂಘಗಳಲ್ಲಿ ನೀವು ಪಡೆಯುವ ಸಾಲದ ಹಣವು ಸಂಘದ ವಹಿವಾಟಿನಿಂದ ಸಿಗುತ್ತದೆ. ಇದು ಸರ್ಕಾರ ನೀಡುವ ಹಣವಲ್ಲ ಎಂಬುದನ್ನು ಅರಿಯಬೇಕು. 

ಆರ್ಥಿಕ ಚಟುವಟಿಕೆಗಳನ್ನು ಸಹಕಾರ ಸಂಘಗಳಲ್ಲಿ ನಡೆಸಿದರೆ ಸಂಘ ಬೆಳೆಯಲು ಸಹಕಾರಿಯಾಗುತ್ತದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಸಾರ್ವತ್ರಿಕವಾಗಿ ಎಲ್ಲ ವರ್ಗದ ಜನರು ಪಾಲ್ಗೊಳ್ಳಬೇಕು ಎಂಬ ಕಾರಣಕ್ಕೆ ಸಹಕಾರ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಅವರು ಹೇಳಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ‌ ಮಾತನಾಡಿ, ಜಿಪಂ, ತಾಪಂ ಮತ್ತು ಗ್ರಾಪಂಗಳಲ್ಲಿ ಸಾಮಾಜಿಕ ನ್ಯಾಯವನ್ನು ನಾವು ಜಾರಿಗೆ ತಂದಿದ್ದೇವೆ. 

ಸಹಕಾರ ಕ್ಷೇತ್ರದಲ್ಲೂ ಮೀಸಲಾತಿ ತರುವ ಮೂಲಕ ಸಚಿವ ರಾಜಣ್ಣ ಅವರು ಸಾಮಾಜಿಕ ನ್ಯಾಯ ತಂದಿದ್ದಾರೆ. ಸಹಕಾರಿ ಸಂಸ್ಥೆಗಳಲ್ಲಿ ಅಧಿಕಾರಿಗಳು ಸ್ನೇಹಿತರಾಗಬೇಕು. 

ಧಾರವಾಡದಿಂದ ಹಾವೇರಿ ಮತ್ತು ಗದಗ ಪ್ರತ್ಯೇಕಗೊಂಡು ಜಿಲ್ಲೆಯಾಗಿ 25 ವರ್ಷಗಳಾದರೂ ಪ್ರತ್ಯೇಕ ಜಿಲ್ಲಾ ಬ್ಯಾಂಕ್‌ ಸ್ಥಾಪನೆ ಸಾಧ್ಯವಾಗಿಲ್ಲ. ಈ ಬಗ್ಗೆ ಕೇವಲ ಪತ್ರ ಬರೆದರೆ ಆಗಲ್ಲ, ಹತ್ತಾರು ಬಾರಿ ಸಂಬಂಧಪಟ್ಟವರನ್ನು ಭೇಟಿಯಾಗಬೇಕು. 

ಎರಡು ವರ್ಷದಲ್ಲಿ ಪ್ರತ್ಯೇಕ ಜಿಲ್ಲಾ ಬ್ಯಾಂಕ್ ಮಾಡಲು ನಿರ್ಧರಿಸಿದರೆ ಅದಕ್ಕೆ ನಾವು ಅಗತ್ಯ ಸಹಕಾರ‌ ನೀಡುತ್ತೇವೆ. ಇಲ್ಲಿಯವರೇ ಮುಖ್ಯಮಂತ್ರಿಯಾದರೂ ಅದು ಸಾಧ್ಯವಾಗಿಲ್ಲ. ನೀವು ಮಾಡಿಕೊಡಿ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಸಹಕಾರ ಚಳವಳಿಗೆ ಅಖಂಡ ಧಾರವಾಡ ಜಿಲ್ಲೆಯ ಕೊಡುಗೆ ಶ್ಲಾಘನೀಯ. ಅಕ್ಕಿ, ಗೋಧಿ, ಸಕ್ಕರೆಯನ್ನು ಹೊರದೇಶಗಳಿಗೆ ಕಳುಹಿಸುತ್ತಿದ್ದೇವೆ. 

ಇದಕ್ಕೆ ಸಹಕಾರ ಚಳವಳಿಯೇ ಕಾರಣ‌. ಗಾಂಧೀಜಿ ಗ್ರಾಮ ಸ್ವರಾಜ್‌ ಕನಸಿಗೆ ಪೂರಕವಾಗಿ ಗ್ರಾಮಕ್ಕೊಂದು ಪಂಚಾಯಿತಿ ತೆರೆಯಲಾಗಿದೆ. 6 ಸಾವಿರಕ್ಕಿಂತ ಹೆಚ್ಚು ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ₹14 ಕೋಟಿ ಹಣವನ್ನು ಜನರು ವಿಶ್ವಾಸವಿಟ್ಟು ಡೆಪಾಸಿಟ್ ಇಟ್ಟಿದ್ದಾರೆ‌. ಇದು ಜಿಲ್ಲೆಗೆ ಉತ್ತಮ ಸಂಘ ಎನಿಸಿದೆ.

ಧಾರವಾಡ ಜಿಲ್ಲೆಯಲ್ಲಿ ಅಗಡಿ ಕೃಷಿ ಪತ್ತಿನ ಸಹಕಾರ ಸಂಘ ಮಾದರಿಯಾಗಿದೆ. ರಾಷ್ಟ್ರೀಯ ಬ್ಯಾಂಕುಗಳಿಗಿಂತ ಸರಳವಾಗಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಸಿಗುತ್ತವೆ. 

ಶೂನ್ಯ ದರದಲ್ಲಿ ಸಾಲ ಕೊಡುವ ಏಕೈಕ ರಾಜ್ಯ ಕರ್ನಾಟಕ. ಸಂಘ ಬೆಳೆದರೆ ರೈತರಿಗೆ, ಗ್ರಾಮೀಣ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.

ಬಹಳ ವರ್ಷಗಳ ಬೇಡಿಕೆಯಾದ ಡಿಸಿಸಿ ಬ್ಯಾಂಕ್ ಸಹಕಾರ ಸಚಿವರು ಮತ್ತು ಕಾನೂನು ಸಚಿವರ ನೆರವಿನಿಂದ ಆಗಲಿ ಎಂದು ಆಶಿಸುವುದಾಗಿ ಹೇಳಿದರು.

ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಕೆಸಿಸಿ ಬ್ಯಾಂಕ್‌ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಲಿಂಗರಾಜ ಚಪ್ಪರದಹಳ್ಳಿ ಇತರರಿದ್ದರು. ಅಗಡಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಸಪ್ಪ ಶಿವಪ್ಪ ಬಸೇಗಣ್ಣಿ ಅಧ್ಯಕ್ಷತೆ ವಹಿಸಿದ್ದರು. ಡಾ. ಸತೀಶ ಅಗಡಿ ಕಾರ್ಯಕ್ರಮ ನಿರ್ವಹಿಸಿದರು.