ಸಾರಾಂಶ
ಯೋಗೇಶ್ವರ್ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರು. ಪಕ್ಷದ ತತ್ವ- ಸಿದ್ಧಾಂತ ನಂಬಿ ಬರುವುದಾದರೆ ಸ್ವಾಗತ. ನಮಗೇನೂ ಅವರ ಅನಿವಾರ್ಯತೆ ಇಲ್ಲ. ಬರುತ್ತೇವೆ ಎಂದವರಿಗೆ ಬೇಡ ಎನ್ನಲ್ಲ ಎಂದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯಲ್ಲಿ ಬೃಹದಾಕಾರವಾಗಿರುವ ಡ್ರಗ್ಸ್ ಜಾಲವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಾನೂನನ್ನು ಬಿಗಿಗೊಳಿಸಲು ಮುಂಬರುವ ಅಧಿವೇಶನದಲ್ಲಿ ಚರ್ಚೆ ಕೈಗೆತ್ತಿಕೊಳ್ಳುವುದಾಗಿ ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಡ್ರಗ್ಸ್ ವ್ಯಸನದಿಂದ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ದ.ಕ.ಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಲು ಹಿಂಜರಿವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಡ್ರಗ್ಸ್ ಜಾಲದ ಆರೋಪಿಗಳು ಸಿಕ್ಕಿಬಿದ್ದರೂ ಜಾಮೀನಿನಲ್ಲಿ ಹೊರಬಂದು ಮತ್ತೆ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಕಾನೂನಿಗೆ ತಿದ್ದುಪಡಿ ತಂದು ಕಠಿಣ ನಿಯಮ ರೂಪಿಸಬೇಕಿದ್ದು, ಈ ಕುರಿತು ಪರಿಷತ್‌ನಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.
ಯೋಗೇಶ್ವರ್‌ಗೆ ಸ್ವಾಗತ: ಯೋಗೇಶ್ವರ್ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರು. ಪಕ್ಷದ ತತ್ವ- ಸಿದ್ಧಾಂತ ನಂಬಿ ಬರುವುದಾದರೆ ಸ್ವಾಗತ. ನಮಗೇನೂ ಅವರ ಅನಿವಾರ್ಯತೆ ಇಲ್ಲ. ಬರುತ್ತೇವೆ ಎಂದವರಿಗೆ ಬೇಡ ಎನ್ನಲ್ಲ ಎಂದರು.ಎಚ್.ಡಿ. ಕುಮಾರಸ್ವಾಮಿ ಯಾವ ರೀತಿ ಬಿಜೆಪಿಗೆ ಮೋಸ ಮಾಡಿದ್ದರು, ಈಗ ಯಾರ ಜತೆ ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ‘ಈಗ ಹಾವು ಬಿಡ್ತೇನೆ, ಆಗ ಬಿಡ್ತೇನೆ’ ಎನ್ನುತ್ತಾರೆ. ಜೈಲಿಗೆ ಕಳಿಸ್ತೇನೆ ಹೇಳ್ತಾರೆ, ಅವರನ್ನು ತಡೆದವರಾರು? ಯಾವ ಕ್ರಮ ಬೇಕಾದರೂ ಕೈಗೊಳ್ಳಿ. ಇಡಿ, ಐಟಿ ನಿಮ್ದೇ ಇದೆ ಎಂದು ಮಂಜುನಾಥ ಭಂಡಾರಿ ಟೀಕಿಸಿದರು.
ಪರಿಷತ್‌ನ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್, ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್., ಕಿಶನ್ ಹೆಗ್ಡೆ, ವಿಕಾಸ್ ಶೆಟ್ಟಿ, ಲಾರೆನ್ಸ್ ಡಿಸೋಜ ಇದ್ದರು.