ಬಜೆಟ್ ಪೂರ್ವಭಾವಿಸಭೆ: ಮೂಲಸೌಕರ್ಯ ಅನುಷ್ಠಾನದ ಬಗ್ಗೆ ಚರ್ಚೆ

| Published : Feb 01 2024, 02:04 AM IST

ಸಾರಾಂಶ

ಅರಕಲಗೂಡು ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ 2024-25ನೇ ಸಾಲಿನ ಪಪಂ ಆಯವ್ಯಯ ಪೂರ್ವಭಾವಿ ಸಭೆಯು ಆಡಳಿತಾಧಿಕಾರಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅಧ್ಯಕ್ಷತೆಯಲ್ಲಿ ನಡೆಯಿತು.

ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅಧ್ಯಕ್ಷತೆ । ಯೋಜನೆ ಅನುಷ್ಠಾನ, ಕೈಗೊಂಡ ಕ್ರಮಗಳ ಕುರಿತು ಚರ್ಚೆ । ಸಮರ್ಪಕ ನೀರಿಗೆ ಸೂಚನೆ ಕನ್ನಡಪ್ರಭ ವಾರ್ತೆ ಅರಕಲಗೂಡು

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ 2024-25ನೇ ಸಾಲಿನ ಪಪಂ ಆಯವ್ಯಯ ಪೂರ್ವಭಾವಿ ಸಭೆಯು ಆಡಳಿತಾಧಿಕಾರಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿ ಕಳೆದ ಸಾಲಿನ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಂದ ಪ್ರಸ್ತಾಪಗೊಂಡ ಯೋಜನೆ ಅನುಷ್ಠಾನ ಮತ್ತು ಕೈಗೊಂಡ ಕ್ರಮಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪಪಂ ಸದಸ್ಯರಾದ ರವಿಕುಮಾರ್ ಮತ್ತು ಡಿಶ್ ರಾಜು, ಕಳೆದ ಎರಡು ವರ್ಷಗಳಿಂದಲೂ ಕೂಡ ಎಲ್ಲಾ ವಾರ್ಡ್‌ಗಳಲ್ಲಿಯೂ ಸಮರ್ಪಕ ನೀರು ಸರಬರಾಜಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಂಟ್ರೋಲ್ ವಾಲ್ ಅಳವಡಿಸುವಂತೆ ಸಲಹೆ ನೀಡಿದ್ದರೂ ಸಹ ಕಾರ್ಯರೂಪಕ್ಕೆ ಬಂದಿಲ್ಲ. ಇದಕ್ಕೆ ಲಕ್ಷಾಂತರ ರು. ವ್ಯಯ ಆಗುವುದಿಲ್ಲ. 10 ರಿಂದ 15 ಸಾವಿರ ರು. ಆಗಬಹುದು. ಕಂಟ್ರೋಲ್ ವಾಲ್ ಇಲ್ಲದೆ ತಗ್ಗು ಪ್ರದೇಶದಿಂದ ಕೂಡಿರುವ ಜನ ವಸತಿಗೆ ಹೆಚ್ಚಿನ ನೀರು ಹೋಗುತ್ತಿದೆ. ಎತ್ತರ ಪ್ರದೇಶದಲ್ಲಿನ ಜನರಿಗೆ ನೀರು ಸಿಗುತ್ತಿಲ್ಲ. ಈ ಬಾರಿಯಾದರೂ ಇದನ್ನು ಕಾರ್ಯರೂಪಕ್ಕೆ ತರಲಿ ಎಂದು ಆಗ್ರಹಿಸಿದರು.

ಈ ಬಾರಿಯ ಬಜೆಟ್‌ನಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ನೀರು ಸರಬರಾಜು ಸಮರ್ಪಕವಾಗಲು ಅನುಕೂಲವಾಗುವಂತೆ ಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ತನ್ನಿ ಎಂದು ಆಡಳಿತಾಧಿಕಾರಿ ಬಸವರೆಡ್ಡಪ್ಪ ರೋಣದ ಎಂಜಿನಿಯರ್‌ಗೆ ಸೂಚನೆ ನೀಡಿದರು.

ಪಪಂ ಹೊಸ ಕಟ್ಟಡ ನಿರ್ಮಿಸಲು ಸಲಹೆ:

ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಹೊಸದಾಗಿ ಪಪಂ ಹಾಗೂ ಪುರಸಭೆ, ನಗರಸಭೆ ಕಟ್ಟಡಗಳು ನಿರ್ಮಾಣಗೊಂಡಿವೆ. ಆದರೆ ಅರಕಲಗೂಡು ಪಪಂಯಲ್ಲಿ ಈ ಕೆಲಸ ಆಗಿಲ್ಲ. ತುಂಬಾ ಕಿರಿದಾಗಿರುವ ಸ್ಥಳದಲ್ಲಿ ಪಪಂ ಆಡಳಿತ ಕಚೇರಿ ಇದೆ. ಪಟ್ಟಣದ ಜನಸಂಖ್ಯೆಗೆ ಅಧಿಕಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಟೆಂಪೋ ಸ್ಟ್ಯಾಂಡ್ ಜಾಗ ಸರ್ಕಾರಿ ಜಾಗವಾಗಿದ್ದು, ಇಲ್ಲಿ ನೂತನ ಪಪಂ ಕಟ್ಟಡ ನಿರ್ಮಿಸುವಂತೆ ಪಪಂ ಮಾಜಿ ಸದಸ್ಯರಾದ ರವಿಕುಮಾರ್, ಡಿಸ್ ರಾಜು, ಸತ್ಯಣ್ಣ, ವಿಜಯಕುಮಾರ್ ಸಲಹೆ ನೀಡಿದರು.

ಈ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ವ್ಯವಹರಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗುವಂತೆ ಮುಖ್ಯಾಧಿಕಾರಿ ಬಸವರಾಜ ಸಾಕಪ್ಪ ಶಿಗ್ಗಾವಿಗೆ ಆಡಳತಾಧಿಕಾರಿ ಸಲಹೆ ನೀಡಿದರು.

ರಸ್ತೆಬದಿ ವ್ಯಾಪಾರಿಗೆ ಸೌಕರ್ಯ ಕಲ್ಪಿಸಿ:

ಪಟ್ಟಣದಲ್ಲಿನ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವವರಿಂದ ಆದಾಯ ಬರುತ್ತಿದೆ. ಆದರೆ ಸೂಕ್ತ ಜಾಗ ಮತ್ತು ಮೂಲಸೌಕರ್ಯವಿಲ್ಲ. ಕೂಡಲೆ ಖಾಲಿ ಇರುವ ಜಾಗದಲ್ಲಿ ಫುಡ್‌ಕೋರ್ಟ್ ನಿರ್ಮಿಸಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು. ಅಲ್ಲದೆ ದಿನವಹಿ ಸುಂಕ ಪಡೆಯುವ ಕುರಿತು ಸಾರ್ವಜನಿಕ ಸ್ಥಳದಲ್ಲಿ ನಾಮಫಲಕ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದರು. ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ಸೂಚನೆ ನೀಡಿದರು.

ಕೋಳಿ ಅಂಗಡಿಗಳಿಂದ ಆದಾಯ ಕುಂಠಿತ:

ಪಟ್ಟಣದಲ್ಲಿ 20ಕ್ಕೂ ಅಧಿಕ ಸಂಖ್ಯೆಯಲ್ಲಿ ಕೋಳಿ ಅಂಗಡಿಗಳು ಕಾರ್ಯನಿರ್ವಹಿಸುತಿದ್ದು, ಬಹುತೇಕ ಅಂಗಡಿಗಳ ಪರವಾನಗಿ ನವೀಕರಣಗೊಂಡಿಲ್ಲ. ಹೊಸದಾಗಿ ಆರಂಭಗೊಳ್ಳುವ ಅಂಗಡಿಗಳಿಗೆ ಪರವಾನಗಿ ನೀಡುತ್ತಿಲ್ಲ. ಇದರಿಂದ ಪಪಂಗೆ ಆದಾಯ ಬರುತ್ತಿಲ್ಲ. ಅಂಗಡಿಗಳಿಗೆ ಮೂಲಸೌಕರ್ಯ ಕೊಡಲಾಗಿದೆಯೇ ವಿನಃ ಕರ ವಸೂಲಿ, ಪರವಾನಗಿ ನೀಡುತ್ತಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪಪಂ ಸದಸ್ಯ ನಿಖಿಲ್‌ಕುಮಾರ್ ಒತ್ತಾಯಿಸಿದರು.ಅರಕಲಗೂಡಿನ ಪಪಂ ಸಭಾಂಗಣದಲ್ಲಿ ಬಜೆಟ್ ಪೂರ್ವಭಾವಿಸಭೆ ಆಡಳಿತಾಧಿಕಾರಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅಧ್ಯಕ್ಷತೆಯಲ್ಲಿ ನಡೆಯಿತು.