ನಗರಸಭೆಯಲ್ಲಿ ಅಧಿಕಾರಿಗಳ ಜಟಾಪಟಿ

| Published : Apr 03 2025, 02:47 AM IST

ಸಾರಾಂಶ

ನಗರಸಭೆ ಮೋಟಾರ್ ಪಂಪ್ ಅಳವಡಿಸುವುದು ನಗರಸಬೆ ಕರ್ತವ್ಯವಾಗಿದ್ದು, ಈ ಕುರಿತು ನೂರಾರು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮವಹಿಸಿಲ್ಲ.

ಕನ್ನಡಪ್ರಭ ವಾರ್ತೆ ಹುಣಸೂರು ಒಳಚರಂಡಿ ನೀರು ನಿರ್ವಹಣೆಯಲ್ಲಿ ನಗರಸಭೆ ಅಧಿಕಾರಿಗಳು ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ನಡುವೆ ಜಟಾಪಟಿ ನಡೆದ ಘಟನೆ ನಗರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ಬುಧವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯ ಯೂನೂಸ್ ಖಾನ್ ಮಾತನಾಡಿ, ತಮ್ಮ ವಾರ್ಡ್ ವ್ಯಾಪ್ತಿಯ ಶಬ್ಬೀರ್ ನಗರದಲ್ಲಿ ಒಂದು ಎಸ್.ಟಿಪಿ ಟ್ಯಾಂಕ್ ಮತ್ತು ಎರಡು ವೆಟ್ ವೆಲ್ ಕಾಮಗಾರಿಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 26 ಕೋಟಿ ರು.ಗಳ ವೆಚ್ಚದಲ್ಲಿ ಕೈಗೊಂಡಿದೆ. ಆದರೆ ಶಬ್ಬೀರ್ ನಗರದ ಒಳಚರಂಡಿ ನೀರು ಸರಾಗವಾಗಿ ಹರಿದು ಹೋಗದೇ ಇಡೀ ಪರಿಸರ ಮಲಿನವಾಗುತ್ತಿದೆ. ಇದಕ್ಕೆ ಮೂಲಕಾರಣ ಕಲ್ಕುಣಿಕೆ ಬಡಾವಣೆಯಲ್ಲಿ ಗಲೀಜು ನೀರನ್ನು ನಿರ್ವಹಿಸಲು ಅಗತ್ಯ 120 ಎಚ್.ಪಿ. ಸಾಮರ್ಥ್ಯದ ಮೋಟಾರ್ ಪಂಪ್ ಅವಶ್ಯಕತೆಯಿದೆ. ಒಂದು ವರ್ಷವೇ ಸಂದರೂ ಮಂಡಳಿಯಾಗಲೀ, ನಗರಸಭೆಯಾಗಲೀ ಪಂಪ್ ಅಳವಡಿಸಲು ವಿಫಲವಾಗಿದೆ. ಇದರಿಂದಾಗಿ ನಾಗರಿಕರು ಬಳಲುವಂತಾಗಿದೆ ಎಂದು ದೂರಿದರು. ಈ ಕುರಿತು ಮಂಡಳಿ ಎಇಇ ಸುಹೈಲ್ ಮಾತನಾಡಿ, ನಗರಸಭೆ ಮೋಟಾರ್ ಪಂಪ್ ಅಳವಡಿಸುವುದು ನಗರಸಬೆ ಕರ್ತವ್ಯವಾಗಿದ್ದು, ಈ ಕುರಿತು ನೂರಾರು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮವಹಿಸಿಲ್ಲ. ನಾವೇನು ಮಾಡಲು ಸಾಧ್ಯವೆಂದು ಕೈಚೆಲ್ಲಿದರು. ಇದಕ್ಕೆ ಉತ್ತರಿಸಿದ ನಗರಸಭೆ ಎಇಇ ಶರ್ಮಿಳಾ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನಿರ್ದೇಶನದಡಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಎಲ್ಲ ಕಾಮಗಾರಿಗಳನ್ನು ಒಳಗೊಂಡು ಕಾರ್ಯ ನಿರ್ವಹಿಸಬೇಕಿತ್ತು. ನಂತರದಲ್ಲಿ ನಮ್ಮ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಹಾಗಿದ್ದು ಚುನಾವಣೆಗಳು, ವಿಳಂಬವಾಗಿ ಸಾಮಾನ್ಯಸಭೆ ಆಯೋಜೆನಗೊಂಡ ಹಿನ್ನಲೆಯಲ್ಲಿಯೂ ನಗರಸಭೆ ವತಿಯಿಂದ ಕಾಮಗಾರಿ ಕುರಿತು ಕ್ರಿಯಾಯೋಜನೆ ಸಲ್ಲಿಸಿ ಗುಜರಾತ್ ರಾಜ್ಯದಿಂದ ಮೋಟಾರ್ ಪಂಪ್ ಖರೀದಿಸುತ್ತಿದ್ದು, ಈ ತಿಂಗಳಾಂತ್ಯಕ್ಕೆ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸದಸ್ಯತ್ವ ರದ್ದು ಕುರಿತು ಅಭಿಪ್ರಾಯ ಸಂಗ್ರಹ 2021ರಲ್ಲಿ ಅಂದಿನ ಪೌರಾಯುಕ್ತ ರಮೇಶ್ ಮತ್ತು ನಗರಸಭೆಯ ಪಕ್ಷೇತರ ಸದಸ್ಯ ಎಚ್.ಪಿ.ಸತೀಶ್ಕುಮಾರ್ ನಡುವೆ ನಡೆದಿದೆ ಎನ್ನಲಾಗ ಸಂಘರ್ಷದ ಕುರಿತು ಪೌರಾಡಳಿತ ನಿರ್ದೇಶನಾಲಯ 2024ರಲ್ಲಿ ಕೈಗೊಂಡ ಆದೇಶದ ಕುರಿತು ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂಬ ಕಾರಣದಿಂದ ಸದಸ್ಯ ಸತೀಶ್ಕುಮಾರ್ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕೆನ್ನುವ ಬಗ್ಗೆ ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಕಳುಹಿಸಲು ಕೋರಲಾಗಿದೆ ಎಂದು ಪೌರಾಯುಕ್ತೆ ಕೆ.ಮಾನಸ ಸಭೆಗೆ ಮಾಹಿತಿ ತಂದರು.ಈ ವೇಳೆ ಕಾಂಗ್ರೆಸ್ ಸದಸ್ಯರು ಸದಸ್ಯತ್ವ ರದ್ದುಗೊಳಿಸಲು ಕೋರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ರದ್ದುಗೊಳಿಸುವುದನ್ನು ವಿರೋಧಿಸಿ ಅಬಿಪ್ರಾಯ ವ್ಯಕ್ತಪಡಿಸಿದರು. ಸದಸ್ಯ ಸತೀಶ್ ಕುಮಾರ ಒಂದು ಗಂಟೆಗೂ ಹೆಚ್ಚು ಕಾಲ ತಮ್ಮ ಅಭಿಪ್ರಾಯವನ್ನು ಮಂಡಿಸಿ ರಾಜ್ಯ ಹೈಕೋರ್ಟ್‌ ತಮ್ಮಿಂದ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಯಾವುದೇ ಕಾರ್ಯವಾಗಿರುವ ಕುರಿತು ಸೂಕ್ತ ದಾಖಲೆಗಳಿಲ್ಲವೆಂದು ತೀರ್ಪು ನೀಡಿದೆ. ಆದರೆ ಕೆಲವೊಂದು ರಾಜಕೀಯ ಷಡ್ಯಂತ್ರಗಳು ನನ್ನ ವಿರುದ್ಧ ಅಪಪ್ರಚಾರ ನಡೆಸಿದ್ದು, ಇದಕ್ಕೆ ತಾವು ಕಾನೂನಾತ್ಮಕ ಹೋರಾಟವನ್ನೇ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ಅಧ್ಯಕ್ಷ ಎಸ್. ಶರವಣ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಪೌರಾಯುಕ್ತೆ ಕೆ. ಮಾನಸ, ಸದಸ್ಯರಾದ ಕೃಷ್ಣರಾಜ ಗುಪ್ತ, ದೇವರಾಜ್, ಗಣೇಶ್ ಕುಮಾರಸ್ವಾಮಿ, ದೊಡ್ಡಹೆಜ್ಜೂರು ರಮೇಶ್, ಗೀತಾ ನಿಂಗರಾಜು, ದೇವನಾಯ್ಕ, ಸ್ವಾಮಿಗೌಡ, ಮಾಲಿಕ್ ಪಾಷಾ, ಸೌರಭ, ಪ್ರಿಯಾಂಕ ಥೋಮಸ್ ಇದ್ದರು.-- ಬಾಕ್ಸ್--

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಯಾವುದಿದೆ?

ಶಾಸಕ ಜಿ.ಡಿ. ಹರೀಶ್‌ ಗೌಡ ಮಾತನಾಡಿ, ಹೈಕೋರ್ಟ್ ಪ್ರಕರಣವನ್ನು ಅಂತಿಮಗೊಳಿಸಿದೆ. ಈ ನಡುವೆ ಪೌರಾಡಳಿತ ನಿರ್ದೇಶನಾಯ ಅಭಿಪ್ರಾಯ ಸಂಗ್ರಹಕ್ಕೆ ತಿಳಿಸಿದೆ. ಅಲ್ಲದೇ ನಗರಸಭೆ ಕಚೇರಿಯಿಂದ ನೀಡಿರುವ ಫೋಟೋ ಮತ್ತು ವೀಡಿಯೋ ದಾಖಲೆಗಳು ಆರೋಪ ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ. ಹೀಗಿದ್ದೂ ನಗರಸಭೆ ಕಚೇರಿಯಲ್ಲದೆ ಕೆಲ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಅಧಿಕಾರಿಗಳು ಹೇಗೆ ನೀಡಿದರು?: ಇದು ಪ್ರಕರಣವನ್ನು ಅಡ್ಡದಾರಿ ಹಿಡಿಸಲು ಮಾಡಿದ ಕಾರ್ಯವೇ ಎಂದು ಆರ್.ಇ ಸಿದ್ದರಾಜು ಅವರನ್ನು ತರಾಟಗೆ ತೆಗೆದುಕೊಂಡರು. ಹಾಗೂ ಇಡೀ ಪ್ರಕರಣವನ್ನು ಗಮನಿಸಿದಾಗ ಸದಸ್ಯ ಸತೀಶ್ ಕುಮಾರ್ ಯಾವುದೆ ತಪ್ಪು ಮಾಡಿಲ್ಲವೆನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದರು. ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಯಿತು.