ಕುಷ್ಟಗಿಯಲ್ಲಿ ಕಡಲೆ ಬೆಳೆಗೆ ಸಿಡಿರೋಗದ ಕಾಟ

| Published : Dec 14 2024, 12:47 AM IST

ಸಾರಾಂಶ

ಕುಷ್ಟಗಿ ತಾಲೂಕಿನಲ್ಲಿ ಕಡಲೆ ಬೆಳೆ ಹವಾಮಾನ ವೈಪರೀತ್ಯದಿಂದ ಸಿಡಿರೋಗಕ್ಕೆ ತುತ್ತಾಗಿದೆ. ಮೂರ್ನಾಲು ಬಾರಿ ಕ್ರಿಮಿನಾಶಕ ಸಿಂಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಕುಷ್ಟಗಿ: ರೈತರ ಪ್ರಮುಖ ಆದಾಯದ ಮೂಲವಾಗಿರುವ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಕಡಲೆ ಬೆಳೆಯು ಹವಾಮಾನ ವೈಪರೀತ್ಯದಿಂದಾಗಿ ಸಿಡಿರೋಗಕ್ಕೆ ತುತ್ತಾಗುತ್ತಿದ್ದು, ರೈತರು ಆತಂಕದಲ್ಲಿದ್ದಾರೆ.ಈಗಾಗಲೇ ಹೂ ಬಿಡುವ ಹಂತದಲ್ಲಿರುವ ಈ ಕಡಲೆ ಬೆಳೆಗೆ ಕೀಟಗಳ ನಿಯಂತ್ರಣಕ್ಕಾಗಿ ಮೂರ್ನಾಲ್ಕು ಸಲ ಕ್ರಿಮಿ ಕೀಟನಾಶಕ ಔಷಧ ಸಿಂಪಡಣೆ ಮಾಡಿದ್ದರೂ ಸಹಿತ ಈಗ ಕಾಣಿಸಿಕೊಂಡಿರುವ ಸಿಡಿ ರೋಗಕ್ಕೆ ಮದ್ದಿಲ್ಲವಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಕಳೆದ ವಾರ ಫೆಂಗಲ್ ಚಂಡಮಾರುತದ ಪ್ರಭಾವದಿಂದ ಮೋಡ ಕವಿದ ವಾತಾವರಣ ಮತ್ತು ಮಳೆಯಿಂದ ಬಿತ್ತಿರುವ ಕಡಲೆ ಬೆಳೆಗೆ ಸಂಕಷ್ಟ ಎದುರಾಗಿದೆ. ಹವಾಮಾನ ವೈಪರೀತ್ಯದಿಂದ ಬೆಳೆಗೆ ಸಿಡಿ ರೋಗ ಕಾಣಿಸಿಕೊಂಡು ಸಂಪೂರ್ಣ ನಾಶವಾಗುವ ಭೀತಿ ರೈತರನ್ನು ಕಾಡುತ್ತಿದೆ.ಪಟ್ಟಣ ಸೇರಿದಂತೆ ತಾಲೂಕಿನ ತಾವರಗೇರಾ ಹೋಬಳಿ, ಹನುಮಸಾಗರ, ಹನುಮನಾಳ ಹೋಬಳಿ ಸೇರಿದಂತೆ ದೋಟಿಹಾಳ, ಹಿರೇಮನ್ನಾಪುರ, ಮಾದಾಪುರ, ಗುಡದೂರು, ಜುಮಲಾಪುರ, ಕ್ಯಾದಿಗುಪ್ಪ, ವಣಗೇರಿ, ಚಳಗೇರಾ, ತಳುವಗೇರಾ, ಕಂದಕೂರು, ಗುಮಗೇರಿ, ದೋಟಿಹಾಳ, ಕೇಸೂರು, ಬಿಜಕಲ್, ಶಿರಗುಂಪಿ ಸೇರಿದಂತೆ ಅನೇಕ ಗ್ರಾಮೀಣ ಭಾಗದಲ್ಲಿ ಎರೆ ಹೊಲದಲ್ಲಿ (ಕಪ್ಪು ಮಣ್ಣಿನ ಭೂಪ್ರದೇಶ) ಹೆಚ್ಚಾಗಿ ಕಡಲೆ ಬೆಳೆಯುತ್ತಾರೆ.ಕುಷ್ಟಗಿ ತಾಲೂಕಿನಲ್ಲಿ ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಸುಮಾರು 13500 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗ ಈ ಬೆಳೆಗೆ ಕಾಣಿಸಿಕೊಂಡಿರುವ ಸಿಡಿ ರೋಗ ಉಲ್ಬಣಿಸುವ ಭೀತಿ ಎದುರಾಗಿದೆ.ರೋಗದ ಲಕ್ಷಣಗಳು: ಕಡಲೆ ಬೆಳೆಗೆ ನೆಟೆರೋಗ, ಸಿಡಿರೋಗ, ಸೊರಗುರೋಗಕ್ಕೆ ತುತ್ತಾಗಿರುವ ಕಡಲೆ ಬೆಳೆಯ ಎಲೆಗಳು ಹಳದಿಯಾಗಿ, ಬಾಡಿ, ಜೋತು ಬಿದ್ದು, ಒಣಗಿ ಉದುರದೆ ಗಿಡಕ್ಕೆ ಅಂಟಿಕೊಂಡಿರುತ್ತವೆ. ಗಿಡದ ಬೇರು ಕೊಳೆಯದೆ ಆರೋಗ್ಯವಾಗಿರುವಂತೆ ಕಾಣುತ್ತವೆ. ಕಾಂಡವನ್ನು ಉದ್ದವಾಗಿ ಸೀಳಿ ನೋಡಿದಾಗ ನೀರು ಸಾಗಾಣಿಕೆಯ ಅಂಗಾಂಶವು ಕಡು ಕಪ್ಪಾಗಿರುವುದು ನಿಖರವಾಗಿ ಕಂಡು ಬರುತ್ತದೆ.ರೋಗದ ನಿರ್ವಹಣೆ: ಬಿತ್ತನೆ ಬೀಜಕ್ಕೆ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರನಾಶಕವನ್ನು ಪ್ರತಿ 1ಕಿಲೋ ಗ್ರಾಮ್ ಬೀಜಕ್ಕೆ 4 ಗ್ರಾಂದಂತೆ ಬೀಜೋಪಚಾರ ಮಾಡುವ ಜತೆಗೆ 1 ಕಿಲೋ ಗ್ರಾಂ ಟ್ರೈಕೋಡರ್ಮಾ ಪುಡಿಯನ್ನು 100 ಕಿಲೋ ಗ್ರಾಂ ಪುಡಿ ಮಾಡಿದ ತಿಪ್ಪೆಗೊಬ್ಬರ ಮತ್ತು 20 ಕಿಲೋ ಗ್ರಾಂ ಬೇವಿನ ಬೀಜದ ಪುಡಿಯಲ್ಲಿ ಮಿಶ್ರಮಾಡಿ ಶೇ. 50ರಷ್ಟು ತೇವಾಂಶ ಇರುವಂತೆ ಮಾಡಿ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ 7 ದಿನಗಳವರೆಗೆ ಇಟ್ಟು ಒಂದು ಎಕರೆಗೆ ಜಮೀನಿಗೆ ಬಿತ್ತುವ ಸಮಯದಲ್ಲಿ ಉಪಯೋಗಿಸಬೇಕು. ಅಂದಾಗ ಮಾತ್ರ ಈ ರೋಗದ ನಿರ್ವಹಣೆ ಸಾಧ್ಯವಾಗಲಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಸಿಡಿರೋಗ ಅಥವಾ ನೆಟೆರೋಗವು ಕಡಲೆ ಬಿತ್ತನೆ ಮಾಡುವ ಸಮಯದಲ್ಲಿ ಸರಿಯಾಗಿ ಬಿಜೋಪಚಾರ ಮಾಡದೆ ಇರುವುದು ಹಾಗೂ ಹವಾಮಾನ ವೈಪರೀತ್ಯದಿಂದ ಬರುತ್ತದೆ. ಈ ರೋಗ ಬೆಳೆಯನ್ನು ಶೇ.5-30ರಷ್ಟು ಹಾನಿ ಮಾಡುತ್ತದೆ. ಈ ರೋಗಕ್ಕೆ ತುತ್ತಾದ ಗಿಡಗಳನ್ನು ಕಿತ್ತುಹಾಕುವ ಮೂಲಕ ಸುಡುತ್ತಿರಬೇಕು. ಆಗ ರೋಗ ಹರಡುವಿಕೆ ಕಡಿಮೆಯಾಗುತ್ತದೆ ಎಂದು ಸಹಾಯಕ ನಿರ್ದೇಶಕ ಅಜಮೀರ ಅಲಿ ಬೆಟಗೇರಿ ಹೇಳಿದರು.ಕಡಲೆ ಬೆಳೆಗೆ ಸಿಡಿರೋಗ ಬಂದು ಗಿಡಗಳು ಒಣಗುತ್ತಿವೆ. ಇಳುವರಿ ಚೆನ್ನಾಗಿ ಬರುತ್ತದೆ ಅಂತ ಅಂದುಕೊಂಡಿದ್ದೇವು. ಆದರೆ, ಈ ರೋಗದಿಂದ ಇಳುವರಿ ಕಡಿಮೆಯಾಗುವ ಆತಂಕ ಎದುರಿಸುವಂತಾಗಿದೆ ಎಂದು ರೈತ ಶರಣಪ್ಪ ಬನ್ನಿಗೋಳ ಹೇಳುತ್ತಾರೆ.