ತುಮಕೂರು ಜಿಲ್ಲೆಯಾದ್ಯಂತ ಸಂಭ್ರಮದ ಹನುಮ ಜಯಂತಿ ಆಚರಣೆ

| Published : Dec 14 2024, 12:47 AM IST

ತುಮಕೂರು ಜಿಲ್ಲೆಯಾದ್ಯಂತ ಸಂಭ್ರಮದ ಹನುಮ ಜಯಂತಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೋಡ ಕವಿದ ವಾತಾವರಣದ, ಶೀತಗಾಳಿ ನಡುವೆಯೂ ಕಲ್ಪತರುನಾಡು ತುಮಕೂರಿನ ವಿವಿಧೆಡೆ ಮುಂಜಾನೆಯಿಂದಲೇ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸುವ ಮೂಲಕ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುಮೋಡ ಕವಿದ ವಾತಾವರಣದ, ಶೀತಗಾಳಿ ನಡುವೆಯೂ ಕಲ್ಪತರುನಾಡಿನ ವಿವಿಧೆಡೆ ಮುಂಜಾನೆಯಿಂದಲೇ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸುವ ಮೂಲಕ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರದ ಇತಿಹಾಸ ಪ್ರಸಿದ್ಧ ಕೋಟೆ ಆಂಜನೇಯಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಗೇಟ್‌ನಲ್ಲಿರುವ ಅಭಯ ಆಂಜನೇಯ ಸ್ವಾಮಿ ದೇವಾಲಯ, ಬಿ.ಎಚ್. ರಸ್ತೆಯ ಆರ್‌ಟಿಓ ಕಚೇರಿ ಮುಂಭಾಗದಲ್ಲಿರುವ ವರಪ್ರಸಾದ ವೀರಾಂಜನೇಯ ಸ್ವಾಮಿ ದೇಗುಲ, ಶ್ರೀರಾಮನಗರದ ಕಿಕ್ಕೇರಿ ಆಂಜನೇಯಸ್ವಾಮಿ ದೇವಾಲಯ, ಬಟವಾಡಿ ಸಮೀಪದ ಭಕ್ತಾಂಜನೇಯಸ್ವಾಮಿ ದೇವಾಲಯ, ವಿದ್ಯಾನಗರದ ಪುಟ್ಟಾಂಜನೇಯ ಸ್ವಾಮಿ ದೇವಸ್ಥಾನ, ಹನುಂತಪುರದ ಬಯಲಾಂಜನೇಯಸ್ವಾಮಿ ದೇವಾಲಯ, ಬನಶಂಕರಿಯ ಮಾರುತಿ ದೇವಾಲಯ, ಮೆಳೇಕೋಟೆಯ ಅಭಯ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯ ವಿವಿಧೆಡೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಹನುಮ ನಾಮ ಸ್ಮರಣೆ, ವೇದ ಘೋಷಗಳು, ಭಜನೆಗಳು ಮೊಳಗಿದವು. ಹನುಮ ಜಯಂತಿ ಪ್ರಯುಕ್ತ ಕೋಟೆ ಶ್ರೀಆಂಜನೇಯ ಸ್ವಾಮಿ ವೃತ್ತ, ಟೌನ್ ಹಾಲ್ ವೃತ್ತ, ಕಾಲ್ಟ್ಟ್ಯಾಕ್ಸ್, ಎಂ.ಜಿ. ರಸ್ತೆ, ಬಾರ್‌ಲೈನ್ ರಸ್ತೆ, ಎಸ್.ಎಸ್.ಪುರಂ ರಸ್ತೆ ಸೇರಿದಂತೆ ಜಿಲ್ಲೆಯಾದ್ಯಂತ ಪಟ್ಟಣಗಳು, ಹೋಬಳಿ ಕೇಂದ್ರಗಳು ಕೇಸರಿ ಧ್ವಜಗಳಿಂದ ಕಂಗೊಳಿಸುತ್ತಿದ್ದು, ಕೋಟೆ ಶ್ರೀ ಆಂಜನೇಯಸ್ವಾಮಿ ಯುವಕರ ಬಳಗ ಹನುಮ ಜಯಂತಿ ಪ್ರಯುಕ್ತ ದೇವಾಲಯಕ್ಕೆ ಬರುವ ಭಕ್ತರಿಗೆ ಹೆಸರು ಬೇಳೆ, ಪಾನಕ, ಮಜ್ಜಿಗೆಯನ್ನು ಪ್ರಸಾದವಾಗಿ ವಿನಿಯೋಗಿಸಿತು. ಹನುಮ ಜಯಂತಿ ಅಂಗವಾಗಿ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಅಭಿಷೇಕ, ಹೋಮ ಹವನ, ಭಜನಾ ಕಾರ್ಯಕ್ರಮಗಳು ನಡೆದಿದ್ದು, ಆಂಜನೇಯಸ್ವಾಮಿ ವಿಗ್ರಹ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಪುರಾತನ ದೇವಸ್ಥಾನವಾಗಿದ್ದು, ಈ ದೇವಸ್ಥಾನದ ವಿಶೇಷತೆ ಎಂದರೆ ಗರ್ಭಗುಡಿಯ ಒಳಗೆ ಹನುಮನ ಎರಡು ಮೂರ್ತಿಗಳಿವೆ. ಈ ಪೈಕಿ ಒಂದು ಮೂರ್ತಿ ಪುರಾತನ ಕಾಲದ್ದಾಗಿದ್ದು, ಇನ್ನೊಂದು ಆ ಬಳಿಕ ಸ್ಥಾಪನೆ ಮಾಡಿದ ಮೂರ್ತಿಯಾಗಿದೆ. ಬೆಳಿಗ್ಗೆಯಿಂದಲೇ ಭಕ್ತಾದಿಗಳು ಆಂಜನೇಯಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹನುಮನ ದೇವಾಲಯಗಳಲ್ಲಿ ಶ್ರೀರಾಮ ನಾಮ ಜಪ ಹಾಗೂ ಹನುಮ ನಾಮ ಸ್ಮರಣೆಗಳು ಭಕ್ತರಿಂದ ಮೊಳಗಿದವು.

ಮೆಳೇಕೋಟೆಯ ಶ್ರೀ ಅಭಯಾಂಜನೇಯ ಸ್ವಾಮಿಗೆ ಸುಪ್ರಭಾತ ಸೇವೆಯೊಂದಿಗೆ ಆರಂಭವಾದ ಧಾರ್ಮಿಕ ಕೈಂಕರ್ಯಗಳಲ್ಲಿ ಮಹಾಸಂಕಲ್ಪ, ಪಂಚಾಮೃತ ಅಭಿಷೇಕ, ಅಲಂಕಾರದೊಂದಿಗೆ ಮಹಾಮಂಗಳಾರತಿ ನಡೆಯಿತು. ನಗರದ ವಿವಿಧೆಡೆ ಹನುಮನ ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ಪೂಜಾ ವಿಧಿ ವಿಧಾನಗಳು ನೆರವೇರಿದ್ದು, ಭಕ್ತಾದಿಗಳು ಆಂಜನೇಯಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ದರ್ಶನ ಪಡೆದು ಪುನೀತರಾದರು.