ಸಾರಾಂಶ
ನರಗುಂದ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಬಹುಕೋಟಿ ಹಗರಣದಲ್ಲಿ ಭಾಗಿಯಾಗಿದ್ದು, ವಾಲ್ಮೀಕಿ ನಿಗಮದಿಂದ ಎಷ್ಟೆಷ್ಟು ಹಣ ಯಾವಾಗ, ಎಲ್ಲಿಂದ ಎಲ್ಲಿಗೆ ವರ್ಗಾವಣೆಯಾಗಿದೆ ಎನ್ನುವುದರ ಬಗ್ಗೆ ದಿನಾಂಕ ಸಮೇತ ಸ್ಪಷ್ಟೀಕರಣ ನೀಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಸಿಎಂ ಸಿದ್ದರಾಮಯ್ಯನವರಿಗೆ ಆಗ್ರಹಿಸಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ರಾಜೀನಾಮೆ ಕೇಳಿದರೆ ಸಾಲದು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಸಂಪುಟ ಸಮೇತ ಸರ್ಕಾರ ವಿಸರ್ಜನೆ ಮಾಡಬೇಕು ಎಂದು ಆಗ್ರಹಿಸಿದರು.ಸಿಎಂ ಸಿದ್ದರಾಮಯ್ಯನವರು ಮಾತೆತ್ತಿದ್ದರೆ ನಾನು ಹಿಂದುಳಿದ ವರ್ಗ ಹಾಗೂ ಅಹಿಂದ ನಾಯಕ ಎನ್ನುವವರು ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣ ನುಂಗಿ ಹಾಕಿದ್ದಾರೆ. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಮುಡಾ ಹಗರಣ ನಡೆದಿದೆ. ಸರ್ಕಾರದ ಬೆಲೆಬಾಳುವ ಆಸ್ತಿಯನ್ನು ಕಡಿಮೆ ಮೊತ್ತದಲ್ಲಿ ಮನಿ ಲಾಂಡ್ರಿಂಗ್ ಮಾಡಿರುವುದು ಕಂಡುಬಂದಿದೆ. ಅಪರಾಧ ಕಂಡುಬಂದಲ್ಲಿ ಅವರ ಮೇಲೆ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇಡಿ ತನಿಖೆ ಅವಶ್ಯವಿರಲಿಲ್ಲ ಎಂದಿದ್ದಾರೆ. ಇಡಿ ತನಿಖೆ ಆಗದೇ ಇದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಹಗರಣವನ್ನೇ ಮುಚ್ಚಿ ಹಾಕುತ್ತಿತ್ತು. ಎಸ್ಸಿ ಪಿಟಿಸಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದರ ಬಗ್ಗೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಜನ ರೊಚ್ಚಿಗೇಳುವ ಮೊದಲೇ ಸಿಎಂ ಸಿದ್ದರಾಮಯ್ಯ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಜ್ಜನಗೌಡ ಪಾಟೀಲ, ಉಮೇಶಗೌಡ ಪಾಟೀಲ, ವಸಂತ ಜೋಗಣ್ಣವರ, ಪ್ರಕಾಶಗೌಡ ತಿರಕನಗೌಡ್ರ, ಮಲ್ಲಪ್ಪ ಮೇಟಿ, ಗುರಣ್ಣ ಆದೆಪ್ಪನವರ, ಬಸಪ್ಪ ಮಳಗಿ, ಮಂಜುನಾಥ ಮೆಣಸಗಿ, ವಿಠ್ಠಲ ಹವಾಲ್ದಾರ, ರಾಚನಗೌಡ ಪಾಟೀಲ, ಪವಾಡಪ್ಪ ವಡ್ಡಗೇರಿ, ಹನಮಂತ ಕಾಡಪ್ಪನವರ, ಸಂತೋಷ ಹಂಚಿನಾಳ ಸೇರಿದಂತೆ ಇತರರು ಇದ್ದರು.