ಸಾರಾಂಶ
ಬೆಂಗಳೂರು : ನಗರಕ್ಕೆ ರೈಲುಗಳ ಮೂಲಕ ಕುರಿ ಹಾಗೂ ಇತರೆ ಪ್ರಾಣಿಗಳ ಮಾಂಸ ಸರಬರಾಜು ಆಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಯಾವ ಪ್ರಾಣಿ ಮಾಂಸ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾಂಸದ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಬೆಂಗಳೂರು ನಗರ ರೈಲ್ವೆ ನಿಲ್ದಾಣಕ್ಕೆ ಜು.26 ರಂದು ರಾಜಸ್ಥಾನದಿಂದ ನಾಯಿ ಮಾಂಸ ಸರಬರಾಜು ಆಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಯುಕ್ತರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಾದರಿ ಸಂಗ್ರಹಿಸಿದ್ದಾರೆ. ಪರಿಶೀಲನೆ ಸಂಧರ್ಭದಲ್ಲಿ ರಾಜಸ್ಥಾನದಿಂದ ಬಂದ ರೈಲಿನ ಮೂಲಕ ಸ್ವೀಕೃತವಾದ ಪಾರ್ಸೆಲ್‌ಗಳನ್ನು ನಿಲ್ದಾಣದ ಹೊರ ಆವರಣದಲ್ಲಿ ಸಾಗಾಣಿಕೆ ವಾಹನದಲ್ಲಿ ಇರಿಸಿರುವುದು ಕಂಡುಬಂದಿದೆ.
ಒಟ್ಟು 90 ಪಾರ್ಸೆಲ್‌ಗಳಿದ್ದು, ಅವುಗಳನ್ನು ಪರಿಶೀಲಿಸಿದಾಗ ಪ್ರಾಣಿಯ ಮಾಂಸವಿರುವುದು ಕಂಡುಬಂದಿದೆ. ಯಾವ ಪ್ರಾಣಿಯ ಮಾಂಸವೆಂದು ಖಚಿತಪಡಿಸಿಕೊಳ್ಳಲು ಮಾಂಸದ ಮಾದರಿಯನ್ನು ಸಂಗ್ರಹಿಸಿ, ಆಹಾರ ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಕುರಿ ಮಾಂಸದ ಹೆಸರಿನಲ್ಲಿ ಬೇರೆ ಪ್ರಾಣಿಯ ಮಾಂಸ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆಗೆ ಸೂಚಿಸಲಾಗಿದೆ. ಆಹಾರ ಸುರಕ್ಷತಾ ಇಲಾಖೆಯವರು ಮಾಂಸದ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, 6-7 ದಿನಗಳಲ್ಲಿ ವರದಿ ಬರಲಿದೆ. ಈ ವೇಳೆ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ತಿಳಿಸಿದ್ದೇನೆ.
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ.