ವಿಕಲಚೇತನ ಮತದಾರರಿಗೆ ವಿಶೇಷ ಆಹ್ವಾನ ಪತ್ರಿಕೆ ರವಾನೆ

| Published : Apr 02 2024, 01:07 AM IST

ಸಾರಾಂಶ

ಮೂಲ್ಕಿ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಚೇತನರನ್ನು ಮತದಾನ ಮಾಡುವಂತೆ ಪ್ರೇರೇಪಿಸಲು ಮುಲ್ಕಿ ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ದ.ಕ. ಜಿಲ್ಲಾ ಸ್ವೀಪ್ ಸಮಿತಿಯಿಂದ ವಿನೂತನವಾಗಿ ಆಹ್ವಾನ ಪತ್ರಿಕೆಯನ್ನು ಪ್ರತೀ ವಿಶೇಷ ಚೇತನ ಮತದಾರರಿಗೆ ತಲುಪಿಸಲು ಯೋಜನೆ ರೂಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ದ.ಕ. ಜಿಲ್ಲಾ ಸ್ವೀಪ್ ಸಮಿತಿ ಮುಖಾಂತರ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಮೂಲ್ಕಿ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಚೇತನರನ್ನು ಮತದಾನ ಮಾಡುವಂತೆ ಪ್ರೇರೇಪಿಸಲು ಮುಲ್ಕಿ ತಾಲೂಕು ಪಂಚಾಯಿತಿ ಸಹಯೋಗದೊಂದಿಗೆ ವಿನೂತನವಾಗಿ ಆಹ್ವಾನ ಪತ್ರಿಕೆಯನ್ನು ಪ್ರತೀ ವಿಶೇಷ ಚೇತನ ಮತದಾರರಿಗೆ ತಲುಪಿಸಲು ಯೋಜನೆ ರೂಪಿಸಲಾಗಿದೆ.

ಆಹ್ವಾನ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿದ ದ.ಕ. ಜಿಲ್ಲಾ ಪಂಚಾಯಿತಿ ಸಿಇ ಒ ಹಾಗೂ ದ.ಕ. ಜಿಲ್ಲಾ ಎಸ್.ವಿ .ಇ.ಇ.ಪಿ. ನೋಡೆಲ್ ಅಧಿಕಾರಿ ಡಾ. ಆನಂದ ಕೆ. ಇವರು ಶೇ.40ರಷ್ಟು ವಿಕಲತೆ ಹೊಂದಿರುವ ವಿಶೇಷಚೇತನ ಮತದಾರ ಬಂಧುಗಳಿಗಾಗಿಯೇ ಭಾರತ ಚುನಾವಣಾ ಆಯೋಗ ಮೊದಲ ಬಾರಿ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಪೋಸ್ಟಲ್ ಬ್ಯಾಲೆಟ್ (ಅಂಚೆ ಮತಪತ್ರ) ಅವಶ್ಯಕತೆ ಇರುವ ಮತದಾರರು ಸಂಬಂಧಿಸಿದ ಕಚೇರಿಗೆ ಸಂಪರ್ಕಿಸಿ ನಮೂನೆ 12-ಡಿ ಭರ್ತಿ ಮಾಡಿ ಅದರೊಂದಿಗೆ ತಮ್ಮ ಚುನಾವಣಾ ಗುರುತಿನ ಚೀಟಿಯ ಪ್ರತಿ ಸಲ್ಲಿಸಬೇಕು ಎಂದರು.

ಮೂಲ್ಕಿ ತಾಲೂಕು ಪಂಚಾಯಿತಿ ಇಒ ಹಾಗೂ ಮೂಲ್ಕಿ ತಾಲೂಕು ಸ್ವೀಪ್ ನೋಡೆಲ್ ಅಧಿಕಾರಿ ಗುರುದತ್ ಎಂ.ಎನ್‌., ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಪಿಡಿಒ ಶೈಲಜಾ ಮತ್ತಿತರರು ಇದ್ದರು.

ಪ್ರತೀ ಮತಗಟ್ಟೆಯಲ್ಲಿ ಇಳಿಜಾರು ಸೌಲಭ್ಯ, ಕುಡಿಯುವ ನೀರು, ವಿದ್ಯುಚ್ಛಕ್ತಿ, ಪೀಠೋಪಕರಣ, ನಿರೀಕ್ಷಣಾ ಕೊಠಡಿ, ಶೌಚಾಲಯ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಮೂಲ್ಕಿ ತಾಲೂಕು ಪಂಚಾಯಿತಿ ವ್ಯಾಪ್ತಿಯ 7 ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಮತ್ತು ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 523 ವಿಶೇಷ ಚೇತನ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ/ನಗರ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಮುಖಾಂತರ ಎಲ್ಲಾ ವಿಶೇಷ ಚೇತನ ಮತದಾರರಿಗೆ ವಿನೂತನ ಆಹ್ವಾನ ಪತ್ರಿಕೆಯನ್ನು ತಲುಪಿಸಲಾಗುತ್ತಿದೆ.