ತಾಲೂಕಿನಾದ್ಯಂತ ಅಲಾಯಿ ದೇವರ ವಿಸರ್ಜನೆ: ಶಾಂತಿಯುತ ಮೊಹರಂ

| Published : Jul 18 2024, 01:35 AM IST

ತಾಲೂಕಿನಾದ್ಯಂತ ಅಲಾಯಿ ದೇವರ ವಿಸರ್ಜನೆ: ಶಾಂತಿಯುತ ಮೊಹರಂ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ-ಮುಸ್ಲಿಮರ ಭಾವೈಕ್ಯತೆ ಸಾರುವ ಮೊಹರಂ ಹಬ್ಬ ೧೧ನೇ ದಿನದ ಅಲಾಯಿ ದೇವರುಗಳ ವಿಸರ್ಜನೆಯೊಂದಿಗೆ ತಾಲೂಕಿನಾದ್ಯಂತ ಶಾಂತಿಯುತವಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರಟಗಿ

ಹಿಂದೂ-ಮುಸ್ಲಿಮರ ಭಾವೈಕ್ಯತೆ ಸಾರುವ ಮೊಹರಂ ಹಬ್ಬ ೧೧ನೇ ದಿನದ ಅಲಾಯಿ ದೇವರುಗಳ ವಿಸರ್ಜನೆಯೊಂದಿಗೆ ತಾಲೂಕಿನಾದ್ಯಂತ ಶಾಂತಿಯುತವಾಗಿ ನಡೆಯಿತು.

ಪಟ್ಟಣ ಸೇರಿದಂತೆ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರುಗಳ ವಿಸರ್ಜನೆಗೆ ಭಕ್ತರ ಗೆಜ್ಜೆ, ಹೆಜ್ಜೆ ಕುಣಿತದೊಂದಿಗೆ ಬುಧವಾರ ಸಂಜೆ ನಡೆಯಿತು.

ಇಲ್ಲಿನ ಹಳೇ ಬಜಾರ್‌ನ ಮಸೀದಿ ಹಸೇನ್-ಹುಸೇನ್ ಹಾಗೂ ವಾರ್ಡ್-೧ರಲ್ಲಿನ ಮಸೀದಿಯಲ್ಲಿ ಇಮಾಮ್ ಕಾಶೀಂ ಹಾಗೂ ಮೌಲಾಲಿ, ಅಕ್ಬರ್ ಅಲಿ, ಲಾಲಸಾಬ್ ದೇವರುಗಳನ್ನು ಸಾವಿರಾರು ಭಕ್ತರ ನಡುವೆ ಮೆರವಣಿಗೆ ಮೂಲಕ ತೆರಳಿ ಸಂಪ್ರದಾಯಿಕವಾಗಿ ಭಕ್ತಿಯಿಂದ ವಿದ್ಯುಕ್ತ ನಿಯಮಗಳನ್ನು ಅನುಸರಿಸಿ ಅಲಾಯಿ ದೇವರುಗಳನ್ನು ವಿಸರ್ಜಿಸಿಲಾಯಿತು. ಇದಕ್ಕೂ ಮುನ್ನ ದೇವರು ಮುಂದೆ ಇದ್ದ ಅಲಾಯಿ ಕುಣಿಯ ಮುಂದೆ ತಮಟೆ ಶಬ್ದದೊಂದಿಗೆ ಭಕ್ತರು ಹೆಜ್ಜೆ ಹಾಕಿದರು.

ಅದೇ ರೀತಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಸಿದಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರು (ಪಾಂಜಾ) ಹೊರ ತರುವ ಮುಂಚೆಯೆ ಸಾರ್ವಜನಿಕರು ಮಸಿದಿಯ ಮುಂದೆ ತೊಡಿದ್ದ ಬೃಹತ್ ಅಲಾಯಿ ಕುಣಿಯಲ್ಲಿ ಬಾರೆಗಿಡದ ತುಂಡನ್ನಿಟ್ಟು ಮುಚ್ಚಿದರು. ಬಳಿಕ ಸಾರ್ವಜನಿಕರು ಮತ್ತು ಫಕೀರರಾಗಿರುವಂತವರು ಈ ಬಾರೆ ಗಿಡದ ತುಂಡಿಗೆ ಕೆಂಪುದಾರ (ಲಾಡಿಯನ್ನು) ಹಾಕಿ ಐದು ಬಾರಿ ಮಣ್ಣನ್ನು ಎತ್ತರಿಸಿ ನಮಸ್ಕರಿಸಿದರು. ನಂತರ ಅಲಾಯಿ ದೇವರುಗಳು ಅಲಾಯಿ ಕುಣಿಯ ಸುತ್ತ ಪ್ರದಕ್ಷಿಣೆ ಹಾಕಿದವು.

ಇದಕ್ಕೂ ಮುನ್ನ ಕಳೆದ ಮಂಗಳವಾರ ಕತಲ್ ರಾತ್ರಿಯಂದು ಮಹಿಳೆಯರು, ಮಕ್ಕಳು ದೇವರಿಗೆ ಕೆಂಪು ಸಕ್ಕರೆ, ಮಾದಲಿ ನೈವೇದ್ಯದೊಂದಿಗೆ ಚಿಕ್ಕ ಬೆಳ್ಳಿ ಛತ್ತಿ, ಬೆಳ್ಳಿ ಕುದುರೆ, ತೊಟ್ಟಿಲು ಅರ್ಪಿಸಿದರು. ದೇವರ ಮೆರವಣಿಗೆಯಲ್ಲಿ ಮಂಡಾಳು (ಮಂಡಕ್ಕಿ) ಎಸೆದು ಭಕ್ತಿ ಮೆರೆದರು. ನಾಗರಿಕರು ತಮ್ಮ ಪುಟ್ಟ ಕಂದಮ್ಮಗಳನ್ನ ಪಾಂಜಾ(ದೇವರ) ಹೊತ್ತವರ ಕೈಯಲ್ಲಿ ಕೊಟ್ಟು ಆಶೀರ್ವಾದ ಪಡೆಯುವ ದೃಶ್ಯಗಳು ಕಂಡುಬಂದರೆ, ಅಲಾಯಿ ದೇವರುಗಳ ಮುಂದೆ ನಾಗರಿಕರು ಹಲಗೆ ಬಾರಿಸುತ್ತ ವಿವಿಧ ವಸ್ತುಗಳನ್ನ ಶೃಂಗರಿಸಿ ಕೈಯಲ್ಲಿ ಹಿಡಿದುಕೊಂಡು ಗುಂಪು ಗುಂಪಾಗಿ ಹೆಜ್ಜೆ ಹಾಕುತ್ತಿದ್ದರು. ಇನ್ನು ಅಲಾಯಿ ದೇವರುಗಳ ಮೆರವಣಿಗೆಯನ್ನು ನೋಡಲು ಜನರು ಕಿಕ್ಕಿರಿದು ಜಮಾಯಿಸಿದ್ದರು.

ಕಾರಟಗಿ ಸೇರಿದಂತೆ ಸಿದ್ದಾಪುರ, ಗುಂಡೂರು, ಬೂದುಗುಂಪಾ, ಹುಳ್ಕಿಹಾಳ, ತೊಂಡಿಹಾಳ, ಹಗೇದಾಳ, ಸೋಮನಾಳ, ಯರಡೋಣಾ ಸೇರಿದಂತೆ ನದಿ ಪಾತ್ರ ನಂದಿಹಳ್ಳಿ, ಈಳಿಗನೂರು, ಉಳೇನೂರು ಗ್ರಾಮಗಳಲ್ಲಿ ಸಹ ಮೊಹರಂ ಹಬ್ಬ ಆಚರಿಸಲಾಯಿತು.