ವೈದ್ಯಕೀಯ ವೆಚ್ಚ ದರಪಟ್ಟಿ ಪ್ರದರ್ಶನ ಕಡ್ಡಾಯ: ಜಿಲ್ಲಾಧಿಕಾರಿ

| Published : Mar 13 2025, 12:47 AM IST

ವೈದ್ಯಕೀಯ ವೆಚ್ಚ ದರಪಟ್ಟಿ ಪ್ರದರ್ಶನ ಕಡ್ಡಾಯ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆ ನಡೆಯಿತು. ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲೆಯಲ್ಲಿ ಕೆ.ಪಿ.ಎಂ.ಇ. ಅಡಿ ಅನುಮತಿ ಪಡೆದ ಕ್ಲಿನಿಕ್‌ಗಳು ಹಾಗೂ ಆರೋಗ್ಯ ಸಂಸ್ಥೆಗಳು ವೈದ್ಯಕೀಯ ವೆಚ್ಚದ ದರಪಟ್ಟಿ ಪ್ರದರ್ಶನ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಪ್ರದರ್ಶನ ಮಾಡದಿದ್ದಲ್ಲಿ ಮೊದಲ ಬಾರಿ ನೋಟೀಸ್ ನೀಡಿ, ಮತ್ತೊಮ್ಮೆ ಪುನರಾವರ್ತಿಸಿದ್ದಲ್ಲಿ ಅಂತಹ ಆರೋಗ್ಯ ಸಂಸ್ಥೆ ಅಥವಾ ಕ್ಲಿನಿಕ್‌ಗಳ ಪರವಾನಗಿ ರದ್ದುಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಈವರೆಗೆ 73 ಶಿಶು ಮರಣಗಳು ಉಂಟಾಗಿವೆ. ಇದಕ್ಕೆ ಕಾರಣಗಳನ್ನು ಅರಿಯಲು ಸಮಿತಿ ರಚಿಸಿ, ಉನ್ನತ ಮಟ್ಟದ ವರದಿ ಪಡೆದು ಶಿಶು ಮರಣದ ಸಂಖ್ಯೆಯನ್ನು ಕಡಿಮೆಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಮಕ್ಕಳಿಗೆ ರೋಗ ನಿರೋಧಕ ಚುಚ್ಚು ಮದ್ದು, ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಆದರೆ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡದೇ ಇರುವ ಬಗ್ಗೆ ಕೇಳಿ ಬರುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ 47,590 ಜನರ ರಕ್ತ ಪರೀಕ್ಷೆ ಮಾಡಲಾಗಿದ್ದು, ಅವುಗಳಲ್ಲಿ 1414 ಕ್ಷಯ ಪ್ರಕರಣಗಳು ಕಂಡುಬಂದಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಒದಗಿಸಲು ಸ್ಥಳೀಯ ಗ್ರಾ.ಪಂ.ಗಳು ಅನುದಾನ ನೀಡಬೇಕು. ನಿಕ್ಷಯ್ ಪೋಷಣಾ ಯೋಜನೆಯ ಸೌಲಭ್ಯ ಒದಗಿಸಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 3717 ನಾಯಿ ಕಚ್ಚಿದ ಪ್ರಕರಣಗಳು ಸಂಭವಿಸಿದ್ದು, ನಾಯಿಯ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಆದ್ಯತೆಯ ಮೇಲೆ ಕೈಗೊಂಡು ಅವುಗಳ ಸಂಖ್ಯೆ ಕಡಿಮೆ ಮಾಡಬೇಕು. 70 ಹಾವು ಕಚ್ಚಿದ ಪ್ರಕರಣಗಳಾಗಿ 3 ಜನ ಹಾವು ಕಚ್ಚಿರುವುದರಿಂದ ಮರಣ ಹೊಂದಿರುತ್ತಾರೆ ಎಂದರು.

ಜಿಲ್ಲೆಯಲ್ಲಿ ಈವರೆಗೆ ಯಾವುದೇ ರೀತಿಯ ಹಕ್ಕಿ ಜ್ವರದ ಪ್ರಕರಣಗಳು ಕಂಡುಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ, ಕೋಳಿ ಫಾರಂಗಳಿಗೆ ಭೇಟಿ ನೀಡಿ,ಆಗಿಂದಾಗ್ಗೆ ಪರಿಶೀಲನೆ ಮಾಡಬೇಕು. ಹಂದಿಜ್ವರದ ಬಗ್ಗೆಯೂ ಸಹ ಕ್ರಮವಹಿಸಬೇಕು ಎಂದರು.

ಶಾಲಾ ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳು ಮಾರಾಟ ಮಾಡುವುದು ನಿರ್ಬಂಧವಿದೆ. ಇವುಗಳನ್ನು ಉಲ್ಲಂಘನೆ ಮಾಡಿದ ಮಣಿಪಾಲದ 11 ಅಂಗಡಿಗಳ ಪರವಾನಗಿ ರದ್ದುಪಡಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಮಾರಾಟ ಮಾಡಲಾಗುತ್ತಿರುವ ಮೌತ್ ಫ್ರೆಶ್‌ನರ್ ಉತ್ಪನ್ನವು ಮೇಲ್ನೋಟಕ್ಕೆ ನೈಜವಾಗಿ ತಂಬಾಕು ಉತ್ಪನ್ನವೇ ಆಗಿದ್ದು, ಇವುಗಳ ಬಗ್ಗೆ ಜಾಹೀರಾತು ಪ್ರಚಾರ ಪಡಿಸುವುದು ಹಾಗೂ ಮಕ್ಕಳಿಗೆ ಮಾರಾಟ ಮಾರಾಟಗಾರರು ಮಾಡುವ ಹಾಗಿಲ್ಲ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಯುವಜನರೇ ಹೆಚ್ಚು ಹೆಚ್ಚು ಆತ್ಮಹತ್ಯೆ ಪ್ರಕರಣಗಳಲ್ಲಿ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಸಾವಿನ ನಿಖರ ಕಾರಣವನ್ನು ಕ್ರೋಢೀಕರಿಸಿ, ಇವುಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಡಿಸಿ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ್ ಉಡುಪ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀರಾಮರಾವ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಡಿ.ಎಸ್.ಓ ಡಾ. ನಾಗರತ್ನ, ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ಜನ್ ಡಾ. ಹೆಚ್ .ಅಶೋಕ್, ಕೆ.ಎಂ.ಸಿ.ಯ ತಜ್ಞ ವೈದ್ಯರಾದ ಡಾ. ಲೆಸ್ಸಿ ಲೂಯಿಸ್, ಡಾ. ಶಂಕರ ಬಕ್ಕಣ್ಣ, ಡಾ. ರಾಜೇಶ್ವರಿ, ಡಾ. ಯಶ್ ಅಲೋಕ್, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಐ.ಎಂ.ಎ ಹಾಗೂ ಐ.ಎ.ಪಿ ಅಧ್ಯಕ್ಷರು, ಪ್ರಸೂತಿ ಹಾಗೂ ಮಕ್ಕಳ ತಜ್ಞರು ಹಾಗೂ ಮತ್ತಿತರರು ಇದ್ದರು.