ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕಿನ ೨೨ ಗ್ರಾಮ ಪಂಚಾಯಿತಿಯ ಗ್ರಾಮಗಳು ಸೋಮವಾರಪೇಟೆ ಯೋಜನಾ ಪ್ರಾಧಿಕಾರಕ್ಕೆ ಒಳಪಡಲಿದ್ದು, ನಮೂನೆ ೯ ಮತ್ತು ೧೧ಎ ಕಡತಗಳ ವಿಲೇವಾರಿ ಪಟ್ಟಣದಲ್ಲಿರುವ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ನಡೆಯಲಿವೆ ಎಂದು ಪ್ರಾಧಿಕಾರ ಅಧ್ಯಕ್ಷ ಕೆ.ಎ.ಆದಂ ಹೇಳಿದರು.ಸೋಮವಾರಪೇಟೆ ನಗರದಿಂದ ಹೊರಗಿರುವ ಗ್ರಾಮಗಳ ಜನರು ಕನ್ವರ್ಷನ್ ಸೇರಿದಂತೆ ಎಲ್ಲ ಕೆಲಸಗಳಿಗೆ ಮಡಿಕೇರಿ ಜಿಲ್ಲಾ ಕೇಂದ್ರದ ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಹೋಗಬೇಕಿತ್ತು. ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದ ಶಾಸಕ ಡಾ.ಮಂತರ್‌ಗೌಡ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದಿಂದ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ಕಡತ ವಿಲೇವಾರಿಗೆ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

೯ ಮತ್ತು ೧೧ಎ ಕಡತಗಳು ಮತ್ತು ಒಂದು ಎಕರೆ ಒಳಗಿನ ಜಮೀನುಗಳಿಗೆ ಅನುಮೋದನೆ ನೀಡುವ ಪ್ರಕರಣಗಳ ತಾಂತ್ರಿಕ ಅನುಮೋದನೆಗೆ ಯೋಜನಾ ಪ್ರಾಧಿಕಾರದ ಸಮಿತಿಗೆ ಬರಲಿದೆ. ನಂತರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರಕರಣಗಳನ್ನು ಸಕಾಲದಲ್ಲಿ ಇತ್ಯರ್ಥಗೊಳಿಸಲಿದ್ದಾರೆ ಎಂದು ಹೇಳಿದರು.ಸಾರ್ವಜನಿಕರು ಪ್ರಾಧಿಕಾರದ ಕಚೇರಿಯಲ್ಲಿ ಕೆಲಸ ಮಾಡಿಸಿಕೊಳ್ಳಲು ಮಧ್ಯವರ್ತಿಗಳನ್ನು ಅವಲಂಬಿಸಿದರೆ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಬ್ರೋಕರ್‌ಗಳು ನಿಮಗೂ ಮತ್ತು ಸರ್ಕಾರಕ್ಕೂ ಮೋಸ ಮಾಡುತ್ತಾರೆ. ಹೀಗಾಗಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿರುವ ಯೋಜನಾ ಪ್ರಾಧಿಕಾರ ಕಚೇರಿಗೆ ಭೇಟಿ ನೀಡಿ ಮಾಹಿತಿ ಮತ್ತು ಸಲಹೆ ಪಡೆದು ತಮ್ಮ ಕೆಲಸವನ್ನು ಸಕಾಲದಲ್ಲಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.ತಾಲೂಕಿನಾದ್ಯಂತ ಕೆಲ ಕಡೆ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುವ ಬಗ್ಗೆ ಪ್ರಾಧಿಕಾರಕ್ಕೆ ತಿಳಿದುಬಂದಿದೆ. ಅಕ್ರಮ ಕಟ್ಟಡಗಳ ಮಾಲೀಕರಿಗೆ ಸಂಬಂಧಪಟ್ಟ ಇಲಾಖೆಯಿಂದ ನೋಟಿಸ್‌ ಜಾರಿಗೊಳಿಸಲಾಗುತ್ತದೆ. ಯೋಜನಾ ಪ್ರಾಧಿಕಾರದ ಅನುಮತಿಯಿಲ್ಲದೆ ವಾಣಿಜ್ಯ ಮಳಿಗೆಗಳು ಮತ್ತು ಮನೆಗಳನ್ನು ನಿರ್ಮಿಸಿದರೆ ವಿದ್ಯುತ್ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸದಂತೆ ಆದೇಶವಾಗಿದೆ. ಸಾರ್ವಜನಿಕರು ಅನುಮತಿ ಇಲ್ಲದೆ ಕಟ್ಟಡಗಳನ್ನು ನಿರ್ಮಿಸುವುದಕ್ಕೆ ಮುಂದಾಗಬಾರದು ಎಂದು ಹೇಳಿದರು. ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಲೋಹಿತಾಶ್ವ, ಬಿ.ಎನ್. ಬಸವರಾಜು, ದರ್ಶನ್ ಇದ್ದರು.