ಸಾರಾಂಶ
ಮಂಗಳೂರು ಹೊರವಲಯದ ಉಳ್ಳಾಲ ಕೋಟೆಕಾರಿನಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕೊಂಡಾಣ ದೈವಸ್ಥಾನದಲ್ಲಿ ಆಡಳಿತ ಮಂಡಳಿ ವಿಚಾರದಲ್ಲಿ ಎರಡು ಬಣಗಳ ಮಧ್ಯೆ ವಿವಾದ ಉಂಟಾಗಿ ಭಂಡಾರದ ಮನೆ ಧ್ವಂಸ ಮಾಡಿದ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಹೊರವಲಯದ ಉಳ್ಳಾಲ ಕೋಟೆಕಾರಿನಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕೊಂಡಾಣ ದೈವಸ್ಥಾನದಲ್ಲಿ ಆಡಳಿತ ಮಂಡಳಿ ವಿಚಾರದಲ್ಲಿ ಎರಡು ಬಣಗಳ ಮಧ್ಯೆ ವಿವಾದ ಉಂಟಾಗಿ ಭಂಡಾರದ ಮನೆ ಧ್ವಂಸ ಮಾಡಿದ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ಗುತ್ತುಗಳ ಯಜಮಾನರ ನಡುವಿನ ಪ್ರತಿಷ್ಠೆ ನಿರ್ಮಾಣ ಹಂತದಲ್ಲಿರುವ ಪಿಲಿಚಾಮುಂಡಿ ದೈವಸ್ಥಾನಕ್ಕೆ ಸೇರಿದ ಭಂಡಾರ ಮನೆಯನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಆರೋಪಿಗಳಾದ ಸ್ಥಳೀಯ ಮುತ್ತಣ್ಣ ಶೆಟ್ಟಿ, ಧೀರಜ್ ಹಾಗೂ ಶಿವರಾಜ್ ಬಂಧಿತರು. ಬಂಧಿತರ ಮೇಲೆ ಐಪಿಸಿ 143,147, 148, 295, 427, ಐಪಿಸಿ 149 ಹಾಗೂ 2ಎ ಕೆಪಿಡಿಪಿ ಕಾಯ್ದೆಯಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
16 ಗುರಿಕಾರರಿಗೆ ಒಳಪಡುವ ಇತಿಹಾಸ ಪ್ರಸಿದ್ಧ ಕೊಂಡಾಣ ಪಿಲಿಚಾಮುಂಡಿ ಜಾತ್ರೆ ಮೇ ತಿಂಗಳಲ್ಲಿ ನಡೆಯಲಿದ್ದು ಇದರ ಪ್ರಯುಕ್ತ ನೂತನ ಭಂಡಾರ ಮನೆಯನ್ನು ಕಾರಣಿಕ ದೈವಗಳಾದ ಪಿಲಿಚಾಮುಂಡಿ, ಬಂಟ, ವೈದ್ಯನಾಥ ಸೇರಿ ದೈವಗಳಿಗೆ ನೂತನವಾಗಿ ಭಂಡಾರ ಮನೆ ನಿರ್ಮಾಣ ಮಾಡಲಾಗುತ್ತಿತ್ತು.
ಇದಕ್ಕೆ 16 ಗುರಿಕಾರರ ವಿರೋಧವಿತ್ತು. ಇದೀಗ ಕಿಡಿಗೇಡಿಗಳು ಕೊಂಡಾಣ ಕ್ಷೇತ್ರದ ಭಂಡಾರ ಮನೆಯನ್ನು ಧ್ವಂಸಗೊಳಿಸಿದ್ದಾರೆ.ಜನವರಿ 8 ರಂದು ಕೃಷ್ಣ ಶೆಟ್ಟಿ ಎಂಬವರ ನೇತ್ವತ್ವದಲ್ಲಿ ಭಂಡಾರ ಮನೆಯ ಶಿಲಾನ್ಯಾಸ ಮಾಡಲಾಗಿತ್ತು.
ಕೊಂಡಾಣ ದೈವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಸೇರಿದಂತೆ ಹಲವರು ಯತ್ನಿಸಿದ್ದರು.
ಇದು ಕುಟುಂಬಕ್ಕೆ ಸಂಬಂಧಪಟ್ಟ ದೈವವಾಗಿರುವುದರಿಂದ ಖಾಸಗಿ ಭಂಡಾರ ಮನೆಯವರು ಸಮ್ಮತಿ ನೀಡಿರಲಿಲ್ಲ. ಅಲ್ಲದೆ, ಸಮಿತಿಯು ದೈವಗಳಿಗೆ ಬೇರೆ ಭಂಡಾರ ಮನೆ ನಿರ್ಮಾಣಕ್ಕೆ ಮುಂದಾಗಿತ್ತು.
ಸಮಿತಿಯ ಅಧ್ಯಕ್ಷ ಸ್ಥಾನದಿಂದ ಅವಧಿ ಮುಗಿದ ಹಿನ್ನೆಲೆಯಲ್ಲಿ ಎರಡು ದಿನದ ಹಿಂದಷ್ಟೇ ಅಧಿಕಾರ ಹಸ್ತಾಂತರಿಸಿದ್ದರು. ಕೃಷ್ಣ ಶೆಟ್ಟಿ ಅಧ್ಯಕ್ಷ ಸ್ಥಾನದಿಂದ ಇಳಿಯುತ್ತಿದ್ದಂತೆ ಭಂಡಾರ ಮನೆ ಧ್ವಂಸಗೊಂಡಿದೆ.
ಭಾರೀ ಸಂಖ್ಯೆಯಲ್ಲಿ ಭಕ್ತರ ಜಮಾವಣೆ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರ ಜೊತೆಗೆ ಎರಡು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ ಎಸಿಪಿ ಧನ್ಯಾ ನಾಯಕ್, ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಆನಂದ್ ಅವರು ಠಾಣೆಗೆ ದೂರು ನೀಡಿದ್ದಾರೆ. ನಿರ್ಮಾಣ ಹಂತದ ಭಂಡಾರ ಮನೆ ನೆಲಸಮಗೊಳಿಸಲಾಗಿದ್ದು, ಕಾರ್ಣಿಕ ದೈವದ ಕೋಟ್ಯಂತರ ರುಪಾಯಿ ಒಡವೆಗಳ ಅಧಿಪತ್ಯಕ್ಕಾಗಿ ಸಂಘರ್ಷ ಇದಾಗಿದೆ ಎಂದು ಆರೋಪಿಸಲಾಗಿದೆ.
ಸದ್ಯ ಮುತ್ತಣ್ಣ ಶೆಟ್ಟಿ ಕುಟುಂಬಸ್ಥರ ಸುಪರ್ದಿಯಲ್ಲೇ ಒಡವೆಗಳಿದ್ದು ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಪೀಕರ್ ಖಾದರ್ ವಿಷಾದ: ಕೋಟೆಕಾರು ಕೊಂಡಾಣ ದೈವಸ್ಥಾನ ಆವರಣದಲ್ಲಿರುವ ನೂತನ ಕಟ್ಟಡ ಧ್ವಂಸ ಪ್ರಕರಣಕ್ಕೆ ಸ್ಥಳೀಯ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ. ಖಾದರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಇಡೀ ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದ್ದು ಅತ್ಯಂತ ನೋವಿನ ವಿಚಾರ ಎಂದು ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿರುವ ಯು. ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ. ಘಟನೆಯ ಕುರಿತಾಗಿ ಯಾವುದೇ ರೀತಿಯ ಧಾರ್ಮಿಕ ಭಾವನೆಗೆ ದಕ್ಕೆ ಬಾರದ ರೀತಿಯಲ್ಲಿ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.